ಅಮರಪಡ್ನೂರು ಗ್ರಾಮ ಪಂಚಾಯತ್ ನ ಬಿಲ್ ಡ್ಯೂ ಆಟ | ಶೇಣಿಯಲ್ಲಿ ನೀರಿಲ್ಲದೆ ಗ್ರಾಮಸ್ಥರಿಗೆ ಸಂಕಟ

ಶೇಣಿ: ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ..! ಹೌದು, ಅಮರಪಡ್ನೂರು ಗ್ರಾಮದ ಶೇಣಿ ಪರಿಸರದಲ್ಲಿ ಇಂತಹ ಒಂದು ಘಟನೆ ನಡೆದಿದೆ. ಇಲ್ಲಿನ ಜನರು ಕುಡಿಯುವ ನೀರಿಗಾಗಿ ಹರಸಾಹಸ ಪಡುವಂತಾಗಿದೆ. ಅಷ್ಟಕ್ಕೂ ಇಂತಹ ದುಸ್ಥಿತಿಯನ್ನು ಜನರಿಗೆ ತಂದೊಡ್ಡಿದ ಹೊಣೆ ಇಲ್ಲಿನ ಗ್ರಾಮ ಪಂಚಾಯತಿಯದ್ದು.

ಶೇಣಿ ಪರಿಸರದಲ್ಲಿ ಸಾರ್ವಜನಿಕ ಕುಡಿಯುವ ನೀರಿಗಾಗಿ ಎರಡು ಕೊಳವೆ ಬಾವಿಗಳಿದ್ದು, ಅಗತ್ಯಕ್ಕೆ ಬೇಕಾದಷ್ಟು ನೀರು ಸಹ ಇದೆ. ಆದರೆ ಇತ್ತೀಚಿನ ಕೆಲ ದಿನಗಳ ಹಿಂದೆ ಕೊಳವೆ ಬಾವಿಗಳಿಗೆ ಅಳವಡಿಸಿದಂತಹ ಪಂಪ್ ಸೆಟ್ ಗಳು ಕೆಟ್ಟುಹೋಗಿತ್ತು. ಆದ್ದರಿಂದ ಅದರ ದುರಸ್ತಿ ಮಾಡುವ ಸಲುವಾಗಿ ಸಂಬಂಧಿಸಿದವರು ಕೊಂಡೊಯ್ದರು. ಆದರೆ ಕೊಂಡುಹೋಗಿ ಹದಿನೈದು ದಿನ ಕಳೆದಿದ್ದು, ಇನ್ನೂ ಸಹ ಪಂಪ್ ಅಳವಡಿಕೆ ಆಗಿಲ್ಲ. ಈ ಬಗ್ಗೆ ಊರವರು ಪಂಪ್ ಕೊಂಡು ಹೋದವರ ಬಳಿ ವಿಚಾರಿಸಿದಾಗ, ಪಂಪ್ ಸೆಟ್ ಎರಡೂ ಸಹ ದುರಸ್ತಿಯಾಗಿದ್ದು, ಪಂಚಾಯತ್ ನಿಂದ ಅವರಿಗೆ ಈ ಹಿಂದಿನ ದುರಸ್ತಿ ಕೆಲಸದ ಶುಲ್ಕವೇ ಬಾಕಿ ಇದೆ. ಅದನ್ನು ಪಾವತಿಸಿದ ತಕ್ಷಣ ಪಂಪ್ ಅಳವಡಿಸುವುದಾಗಿ ಭರವಸೆ ಕೊಟ್ಟಿದ್ದಾರೆ.

ಇಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಲು ಹೋದರೆ ಯಾವುದೇ ಮೊಬೈಲ್ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ತಿಳಿದುಬಂದಿದೆ. ಅದೇರೀತಿ ಪಂಚಾಯತ್ ಅಧ್ಯಕ್ಷರ ಬಳಿ ವಿಚಾರಿಸಿದಾಗ ಭರವಸೆಯೊಂದೇ ಮಾತಾಗಿದೆ. ಇಲ್ಲಿನ ಜನಪ್ರತಿನಿಧಿಗಳು ಕೂಡ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಇವರುಗಳ ಭರವಸೆಯ ಮಾತಿನ ಮೇಲೆ ಊರವರ ಮನದಲ್ಲಿ ನಂಬಿಕೆ ಎಳ್ಳಷ್ಟೂ ಉಳಿದಿಲ್ಲ ಎಂಬುದು ಅಕ್ಷರಶಃ ಸತ್ಯವಾದ ಮಾತು.

ಒಟ್ಟಿನಲ್ಲಿ ಪಂಚಾಯತ್ ನವರು ಆಡುವ ಆಟದಿಂದಾಗಿ ಊರಿನವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾರ ಭರವಸೆಯ ಮಾತು ಸಹ ನೀರಿನ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಹಾಗೂ ವ್ಯಕ್ತಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬಗೆಹರಿಸಬೇಕಾಗಿ ವಿನಂತಿ.

Leave A Reply

Your email address will not be published.