ಹೊಗೆಯಲ್ಲಿ ಉರಿದು ಬರಿದು ಎನಿಸದಿರು….. ಹೇ ಮಾನವ | ವಿಶ್ವ ತಂಬಾಕು ನಿಷೇಧ ದಿನ -ಮೇ 31

ವಿಶ್ವದಲ್ಲಿ ವರ್ಷಕ್ಕೆ ಆರು ಮಿಲಿಯನ್ ಜನ ಕೇವಲ ತಂಬಾಕು ಸೇವಿಸುವುದೇ ಅವರ ಮರಣಕ್ಕೆ ಕಾರಣವಾಗುತ್ತಿದೆ. ಪ್ಯಾಕ್ ಮೇಲೆ ದೊಡ್ಡದಾಗಿ ಕ್ಯಾನ್ಸರ್ ಕಾರಕ ಎಂದು ಬರೆದುಕೊಂಡಿದ್ದರೂ ಅದನ್ನು ಕೊಳ್ಳುವವರಿಗೇನು ಕಮ್ಮಿ ಇಲ್ಲ. ಧೂಮಪಾನ, ಎಲೆ ಅಡಿಕೆ, ನಶ್ಯ ಹೀಗೆ ವಿಭಿನ್ನ ವಿಧಗಳಲ್ಲಿ ಮನುಷ್ಯ ತನ್ನ ಚಿತೆಗೆ ತಾನೇ ಬೆಂಕಿ ಹಚ್ಚಿಕೊಳ್ಳುವ ಕಾರ್ಯಗಳಿಗೇನು ಕಮ್ಮಿ ಇಲ್ಲ.

ಮೇ 31ರಂದು ಪ್ರತಿ ವರ್ಷ ವಿಶ್ವ ತಂಬಾಕು ನಿಷೇಧ ದಿನವು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಘಟನೆಯ ಸದಸ್ಯ ರಾಷ್ಟ್ರಗಳು 1987ನೇ ಇಸವಿಯಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಜನಸಾಮಾನ್ಯರ ಗಮನಕ್ಕೆ ತರಲು ವಿಶ್ವ ತಂಬಾಕು ನಿಷೇಧ ದಿನವನ್ನು ಆಯೋಜಿಸಿದರು.. ವಿಶ್ವ ಆರೋಗ್ಯ ಸ೦ಸ್ಥೆಯು ಆರೋಗ್ಯದ ದೃಷ್ಟಿಯಿ೦ದ ತ೦ಬಾಕು ನಿಷೇಧ ಬಗ್ಗೆ ಚಿ೦ತನೆಯನ್ನು ಕೈಗೊಂಡಿದ್ದು ಆಧುನಿಕ ಜಗತ್ತಿನಲ್ಲಿ ತಂಬಾಕು ನಿಷೇಧದ ಉತ್ಸಾಹವನ್ನು ತೋರಿಸಿದೆಯಾದರೂ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸದೇ ಇರುವುದು ಚಿಂತಾಜನಕ.

ಭಾರತಕ್ಕೆ ತಂಬಾಕನ್ನು ಪರಿಚಯಿಸಿದ್ದು ಪೋರ್ಚುಗೀಸರು. 17ನೇ ಶತಮಾನದಲ್ಲಿ ಅದಾಗಲೇ ತಂಬಾಕಿನ ಬಗೆಗೆ ಅರಿವಿದ್ದರಿಂದ ಬಹಿಷ್ಕಾರವನ್ನು ಹಾಕಲಾಯಿತಲ್ಲದೆ ಯಾರೂ ಉಪಯೋಗಿಸಬಾರದೆಂಬ ತಾಕೀತನ್ನು ಮಾಡಲಾಗಿತ್ತು. ಆದರೆ ವಿಪರ್ಯಾಸ ಅದು ಮತ್ತಷ್ಟು ಜನಪ್ರಿಯವಾಗುತ್ತಾ ಸಾಗಿದ್ದು.

ಭಾರತದಲ್ಲಿ ತಂಬಾಕಿನ ವ್ಯವಸಾಯದಲ್ಲಿ ತೊಡಗಿರುವವರ ಸಂಖ್ಯೆ ಸುಮಾರು 30ಲಕ್ಷ. ವಾರ್ಷಿಕ ಐವತ್ತು ಕೋಟಿಗೂ ಅಧಿಕ ಆದಾಯ. ಇದರ ಮೇಲಿನ ತೆರಿಗೆಯಿಂದ ವರ್ಷಂಪ್ರತಿ ಸುಮಾರು 53.7ಕೋಟಿ ರುಪಾಯಿಗಳು!
ಗ್ರೇಟ್ ಬ್ರಿಟನ್, ರಷ್ಯ, ಬೆಲ್ಜಿಯಮ್ ಮತ್ತು ನೆದರ್‍ಲೆಂಡ್ಸ್ ಮುಂತಾದ ಐವತ್ತಕ್ಕೂ ಹೆಚ್ಚು ರಾಷ್ಟ್ರಗಳಿಗೆ ಇಂದು ತಂಬಾಕು ರಫ್ತಾಗುತ್ತಿದೆ.
ಬೀಡಿ ಕಾರ್ಮಿಕರು, ಕೃಷಿಕರು ಇವರೆಲ್ಲರದೂ ಇದಕ್ಕೆ ಹೊಂದಿಕೊಂಡಿರುವ ಆದಾಯದ ಮೂಲ!

ತಂಬಾಕಿನಿಂದ ಸಮಸ್ಯೆ ಏನು?

ತಂಬಾಕು ಸೇವನೆಯಿಂದ ಜೀವಕೋಶದ ಮೇಲೆ ದುಷ್ಪರಿಣಾಮ ಬೀಳುತ್ತದೆ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸಕೋಶ ಸಂಬಂಧಿ, ಕ್ಯಾನ್ಸರ್ ಕಾಯಿಲೆಗಳು ಉಚಿತ.
ಸರ್ಕಾರ ಪ್ರತಿವರ್ಷ ತಂಬಾಕಿನ ಆದಾಯಕ್ಕಿಂತಲೂ ಅಧಿಕ ಹಣವನ್ನು ಅದರ ಚಿಕಿತ್ಸೆಗಾಗಿ ವಿನಿಯೋಗಿಸುತ್ತಿದೆ.
ತಂಬಾಕು ಕೇವಲ ಸೇವಿಸುವವ ಮತ್ತು ಬಳಕೆದಾರನ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲದೆ ಆತನ ಸುತ್ತಮುತ್ತಲಿನ ಪರಿಸರ, ಆತನ ಇಡೀ ಕುಟುಂಬದ ಮೇಲೆ
ಪರಿಣಾಮ ಬೀರಬಲ್ಲದು. ತಂಬಾಕು ಬೆಳೆಯುವ ಪರಿಸರದಲ್ಲೂ ಅವುಗಳು ಹೊರಸೂಸುವ ಗಾಳಿಯನ್ನು ಸೇವಿಸಿದವರಲ್ಲ ಹೃದಯ ಮತ್ತು ಶ್ವಾಸ ಸಂಬಂಧಿ ರೋಗಗಳು ಕಂಡು ಬರುವುದು ಸರ್ವೇ ಸಾಮಾನ್ಯವಾಗಿದೆ.

ಯುವಜನತೆ ಮತ್ತು ಅಭಿವೃದ್ಧಿ:

ತಂಬಾಕಿನಿಂದ ಸಂಭವಿಸುವ ಸಾವುಗಳಲ್ಲಿ ಸುಮಾರು 80ರಷ್ಟು ಸಾವುಗಳು ಅಭಿವೃದ್ಧಿ ಹೊಂದುತ್ತಿರು ರಾಷ್ಟ್ರಗಳಲ್ಲಿ ಸಂಭವಿಸುತ್ತಿದೆ.
ತಂಬಾಕು ಉತ್ಪನ್ನಗಳ ಕುರಿತಾದ ಜಾಹೀರಾತು ನೀಡುವುದು ಕಾನೂನಿನ ಪ್ರಕಾರ ಅಪರಾಧ ಮತ್ತು ಸಂಪೂರ್ಣ ನಿಷಿದ್ಧ. ಅದರ ಬದಲಾಗಿ ಪ್ರತಿ ವರ್ಷ ಭಾರತದಲ್ಲಿ 57.5 ಕೋಟಿ ರೂಪಾಯಿಗಳನ್ನು ಕೇವಲ ತಂಬಾಕು ಸೇವನೆ ಅಪಾಯಕಾರಿ ಎಂಬುದನ್ನು ತಿಳಿಸುವ ಜಾಹಿರಾತಿಗಾಗಿ ಖರ್ಚು ಮಾಡಲಾಗುತ್ತದೆ. ಆದರೂ ತಂಬಾಕು ಬೆಂಬಿಡದ ಬೇತಾಳ.
ತಂಬಾಕಿಗೆ ಬಲಿಯಾಗುವವರು ಮತ್ತು ಈ ಚಟಕ್ಕೆ ಬೀಳುವವರಲ್ಲಿ ಯುವಕರೇ ಅಧಿಕ ಪ್ರಮಾಣದಲ್ಲಿದ್ದಾರೆ.
ಇಂದು ಪ್ರತಿ ಕಾಲೇಜಿನ ಬೆಂಚು ಡೆಸ್ಕುಗಳಲ್ಲಿ ದೊರೆಯುವ ಸಣ್ಣ ತಂಬಾಕಿನ ಚೀಲಗಳು ಮಾದಕದ್ರವ್ಯ ಜಾಲದ ಹುನ್ನಾರಗಳನ್ನು, ಮೋಸದಿಂದ ವಿದ್ಯಾರ್ಥಿಗಳನ್ನು ಬಲಿಪಶುವನ್ನಾಗಿಸುತ್ತಿರುವ ಪರಿಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತವೆ. 2010 ರಿಂದ ಈಚೆಗೆ ಶಾಲಾ-ಕಾಲೇಜು ಆವರಣದಿಂದ ನೂರು ಮೀಟರ್ ಅಂತರದಲ್ಲಿ ಯಾವುದೇ ತಂಬಾಕು, ಆಲ್ಕೋಹಾಲ್ ಉತ್ಪನ್ನಗಳನ್ನು ಮಾರಬಾರದೆಂಬ ನಿಯಮವಿದ್ದರೂ ಸಣ್ಣ ಪಾಕೆಟ್ನಲ್ಲಿ ಹೊಸ ರೂಪದಲ್ಲಿ ಇವೆಲ್ಲವೂ ತೆರೆದ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಪರಿಹಾರ:

ಸರ್ಕಾರ ತಂಬಾಕು ಬೆಳೆಗಾರರಿಗೆ ಪರ್ಯಾಯ ಬೆಳೆಗಳನ್ನು ಸೂಚಿಸಬಹುದು ಜೊತೆಗೆ ಬೀಡಿಕಾರ್ಮಿಕರಿಗೆ ಪರ್ಯಾಯ ಉದ್ಯೋಗದ ವ್ಯವಸ್ಥೆ ಮಾಡಿ ತಂಬಾಕಿಗೆ ಇತಿಶ್ರೀ ಹಾಡಬಹುದು. ಅಥವಾ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಬೆಳೆದು ರಫ್ತಿಗೆ ಮಾತ್ರ ಬಳಸುವ ಕಾನೂನು ಜಾರಿಗೊಳಿಸಬೇಕು. ಬಳಕೆದಾರರ ಮನಸ್ಸು ಮೊದಲು ಬದಲಾಗಬೇಕು. ತಂಬಾಕು ಹಾನಿಕಾರಕ ಎಂಬ ಅರಿವಿರದ ಬಳಕೆದಾರರು ಸಿಗಲಾರರು. ಅರಿವಿದ್ದೂ ಬಳಸುತ್ತಿದ್ದಾರೆಂದರೆ ಇದು ನಮ್ಮ ಉದ್ಧಟತನ.
ತಂಬಾಕು ನಿಷೇಧ ದಿನ ಕೇವಲ ಆ ದಿನಕ್ಕೆ ಮಾತ್ರ ಸೀಮಿತವಾಗದೆ ತಂಬಾಕು ನಿಷೇಧಕ್ಕೆ ಎಲ್ಲರದೂ ಪ್ರಯತ್ನ ಬೇಕಾಗಿದೆ.

ಸ್ವಸ್ತಿಕ್ ಕನ್ಯಾಡಿ
7022824146

Leave A Reply

Your email address will not be published.