ಆರೋಗ್ಯ ಸಚಿವರು ಆರೋಗ್ಯವಾಗಿದ್ದಾರೆಯೇ….? | ನಮಗೆ ಹಾಗಂತ ಅನ್ನಿಸುತ್ತಿಲ್ಲ !!

ಚಿತ್ರದುರ್ಗ: ಇಡೀ ಭಾರತದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕೊರೋನಾ ನಿಯಂತ್ರಣಕ್ಕೆ ದಿನದಿಂದ ದಿನಕ್ಕೆ ಉತ್ತಮ ಮಾರ್ಗಸೂಚಿಗಳನ್ನು ಹೊರತಂದು ಕೊರೋನಾ ನಿಯಂತ್ರಣಕ್ಕೆ ಉತ್ತಮ ಹೆಜ್ಜೆಗಳನ್ನು ಇಡುತ್ತಿವೆ.

ಕರ್ನಾಟಕವು ಇದರಿಂದ ಹೊರತಾಗಿಲ್ಲ. ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಆರೋಗ್ಯ ಇಲಾಖೆ ಅವಿರತ ಶ್ರಮ ನಡೆಸುತ್ತಿದೆ. ಆದರೆ ಕರ್ನಾಟಕದ ಆರೋಗ್ಯ ಸಚಿವರಿಗೆ ಇದರ ಅರಿವೇ ಇಲ್ಲ ಎಂಬಂತಾಗಿದೆ. ಕೆಲವೊಂದು ದಿನ ಸಾಮರ್ಥ್ಯಕ್ಕೂ ಮೀರಿ ಕೆಲಸ ಮಾಡುವ ಆರೋಗ್ಯ ಸಚಿವ ಶ್ರೀರಾಮುಲು ಒಮ್ಮೊಮ್ಮೆ ಕೆಟ್ಟ ನಡತೆಯನ್ನು ತೋರಿ ಜನರ ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಇಲ್ಲೊಂದು ಘಟನೆ ನಡೆದುಹೋಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಮಪುರ ದಲ್ಲಿ ವೇದಾವತಿ ನದಿಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರೋಗ್ಯ ಸಚಿವರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ನೂರಾರು ಕಾರ್ಯಕರ್ತರೊಂದಿಗೆ ಎತ್ತಿನಗಾಡಿ ತೆರಳಿ, ಮೆರವಣಿಗೆಯಲ್ಲಿ ಭಾಗವಹಿಸಿ ಬುದ್ಧಿವಂತ ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯೇನು ಕೊರೋನಾ ಹರಡುವಿಕೆಯಲ್ಲಿ ಕಡಿಮೆಯೇನಿಲ್ಲ. ಜಿಲ್ಲೆಯಲ್ಲಿ ನೂರಾರು ಪ್ರಕರಣಗಳು ದಾಖಲಾಗಿವೆ. ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳು ಸಾಕಾಗದೆ ಕೆಲವು ಹಾಸ್ಟೆಲ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಿದ್ದರೂ ಆರೋಗ್ಯ ಸಚಿವರು ಮಕ್ಕಳಂತೆ ವರ್ತಿಸುತ್ತಿದ್ದಾರೆ.

ನಮ್ಮ ಆರೋಗ್ಯ ಸಚಿವರು ಸ್ಥಿತಿ ಬೇಲಿಯೇ ಎದ್ದು ಹೊಲ ಮೇದಂತೆ ಆಗಿದೆ. ಕೊರೋನಾ ಹೋಗಲಾಡಿಸುವ ಬಗ್ಗೆ ಎಲ್ಲರಿಗಿಂತ ಮೊದಲು ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಾಗಿದ್ದ ರಾಜ್ಯದ ಆರೋಗ್ಯ ಸಚಿವರು ಈ ರೀತಿ ನಡೆದುಕೊಂಡಿರುವುದು ನಿಜಕ್ಕೂ ಕೆಟ್ಟ ವಿಚಾರವೇ ಸರಿ.

ಈ ಬಗ್ಗೆ ರಾಜ್ಯ ಸರ್ಕಾರ ಆದಷ್ಟು ಬೇಗ ಸಚಿವರಿಗೆ ಬುದ್ಧಿ ಹೇಳಿ ಸಚಿವರು ಸುಧಾರಿಸುವಂತೆ ನೋಡಿಕೊಳ್ಳಲಿ ಎಂಬುದು ರಾಜ್ಯದ ಜನರ ಆಶಯ ಮತ್ತು ಒತ್ತಾಯವಾಗಿದೆ. ಆರೋಗ್ಯ ಸಚಿವರು ಆರೋಗ್ಯವಾಗಿದ್ದಾರೆಯೇ ? ಎಂಬ ಅನುಮಾನ ನಮ್ಮಲ್ಲಿ ಮೂಡುತ್ತಿದೆ.

Leave A Reply

Your email address will not be published.