ಕಳೆದು ಹೋದ ಮಗನಿಗಾಗಿ 10 ವರ್ಷದಿಂದ ಕಣ್ಣೀರಿಡುತ್ತಿದ್ದ ದಂಪತಿಗೆ ಮಗನನ್ನು ಕರುಣಿಸಿದೆ ದೂರ ಮಾಡುವ ರೋಗ ಕೊರೋನಾ !
ತುಮಕೂರು : ಹತ್ತು ವರ್ಷಗಳ ಹಿಂದೆ ನಾಪತ್ತೆಯಾದ ಮಗನನ್ನು ಮಾರಕ ಕಾಯಿಲೆ ವಾಪಸ್ ಮತ್ತೆ ಪೋಷಕರಿಗೆ ಕೊಡಿಸಿದೆ. ಜನರನ್ನು ದೂರ ಮಾಡುವ ( ಸಾಮಾಜಿಕ ಅಂತರದ ಮೂಲಕ ) ದೊಡ್ಡ ರೋಗ ಕೊರೋನಾ ಇಲ್ಲೊಂದು ಕಡೆ ಕರುಳಬಳ್ಳಿಯ ಸಂಬಂಧವನ್ನು ಹತ್ತಿರ ಮಾಡಿದೆ.
ಹತ್ತು ವರ್ಷಗಳ ಹಿಂದೆ ಮಗ ಮನೆಯಿಂದ ಕಣ್ಮರೆಯಾಗಿದ್ದ. ಪೋಷಕರು ಪೊಲೀಸರಿಗೆ ದೂರು ನೀಡಿದರೂ ಮಗನನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಮಗ ನಾಪತ್ತೆಯಾದ ಕೊರಗಿನಲ್ಲೇ ಸುದೀರ್ಘ ಹತ್ತು ವರ್ಷಗಳಿಂದ ಕೊರಗುತ್ತಿದ್ದ ಪೋಷಕರಿಗೆ ಅಚ್ಚರಿ ಕಾದಿತ್ತು. ಪವಾಡ ನಡೆದಂತೆ ಮಗ ಮನೆ ಮುಂದೆ ಪ್ರತ್ಯಕ್ಷವಾಗಿದ್ದಾನೆ.
ಕುಣಿಗಲ್ ತಾಲೂಕಿನ ಗುನ್ನಾಗರೆ ಗ್ರಾಮದ ಕೃಷ್ಣಪ್ಪ ದಂಪತಿಗೆ ಕೊರೊನಾ ವರವಾಗಿ ಪರಿಣಮಿಸಿದೆ. ಹತ್ತು ವರ್ಷಗಳ ಹಿಂದೆ ಮನೆ ತೊರೆದು ಹೋಗಿದ್ದ ಮಗ ಕೊರೋನಾ ಭೀತಿಯಿಂದ ಹಿಂತಿರುಗಿ ಬಂದಿ ದ್ದಾನೆ.
ಕೃಷ್ಣಪ್ಪ ಅವರ ಮಗ ರಂಗಸ್ವಾಮಿ 2011 ರಲ್ಲಿ ಶಾಲೆಗೆಂದು ಹೋದವ ವಾಪಸ್ ಬಂದಿರಲಿಲ್ಲ. ಆಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿದ್ದರೂ ಏನೂ ಪ್ರಯೋಜನ ಆಗಿರಲಿಲ್ಲ. ಅವರ ಮಗನ ಸುಳಿವೇ ಸಿಗಲಿಲ್ಲ. ಇದು ನಡೆದದ್ದು 2011ರಲ್ಲಿ. ಆತನ ಹೆತ್ತವರಿಗೆ ಮಗ ಮತ್ತೆ ಬರುವ ಆಸೆ ಬತ್ತಿಹೋಗಿತ್ತು. ಆದರೂ ಹೆತ್ತ ಕರುಳು ದೇವರ ಮೇಲೆ ಭಾರ ಹಾಕಿ ಕಣ್ಣೀರಿನಲ್ಲಿಯೇ ದಿನಗಳನ್ನು ನೂಕುತ್ತಿದ್ದರು.
ಆದರೆ ಮೊನ್ನೆ ಶುಕ್ರವಾರ ರಾತ್ರಿ ರಂಗಸ್ವಾಮಿ ಎನ್ನುವ ವ್ಯಕ್ತಿ ಶೆಟ್ಟಿಗೆರೆಯಲ್ಲಿರುವ ತನ್ನ ಅಜ್ಜಿಯ ಮನೆಗೆ ಬಂದು ತನ್ನ ಪರಿಚಯವನ್ನು ಹೇಳಿಕೊಂಡಾಗ ಆಶ್ಚರ್ಯವಾಗಿ, ತಂದೆ ತಾಯಿಯ ಗಮನಕ್ಕೆ ತಂದಿದ್ದಾರೆ. ಮಗ ಬಂದಿರುವ ಸುದ್ದಿ ತಿಳಿದು ಕೃಷ್ಣಪ್ಪ ದಂಪತಿ ಮಗನನ್ನು ನೋಡಲು ಉಟ್ಟ ಬಟ್ಟೆಯಲ್ಲೇ ಓಡೋಡಿ ಬಂದಿದ್ದಾರೆ.
ಅವತ್ತು ಮನೆಬಿಟ್ಟು ಅಲ್ಲಿ ಇಲ್ಲಿ ತಿರುಗಿದ ನಂತರ ರಂಗಸ್ವಾಮಿ ನಂತರ ಬೀದರ್ ಜಿಲ್ಲೆ ಭಾಲ್ಕಿ ತಲುಪಿದ್ದ. ಅಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಆದರೆ ಕೊರೋನಾ ಹಿನ್ನೆಲೆ ಕೆಲಸವಿಲ್ಲದೆ ಬೇಸತ್ತು ತವರಿಗೆ ಬರುವ ಮನಸ್ಸು ಮಾಡಿದ್ದಾರೆ ಎಂದು ಆತನ ಚಿಕ್ಕಪ್ಪ ಕುಮಾರ್ ಅವರು ತಿಳಿಸಿದ್ದಾರೆ.
ಮಗ ಸಿಕ್ಕ ಸಂಭ್ರಮದ ಮಧ್ಯೆ ಕೂಡಾ ಅವರ ಕುಟುಂಬ ಸಂಯಮ ಮೆರೆದಿದೆ. ಮಗ
ಮಹಾರಾಷ್ಟ್ರ ಗಡಿ ಭಾಗದಿಂದ ಬಂದಿರುವ ಕಾರಣ ಪೋಷಕರೇ ಎಚ್ಚೆತ್ತು, 10 ವರ್ಷದ ನಂತರ ಬಂದ ಮಗನನ್ನು ಮನೆಗೆ ಸೇರಿಸದೆ, ಆರೋಗ್ಯ ತಪಾಸಣೆಗೆಂದು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರು. ಇದೀಗ ರಂಗಸ್ವಾಮಿಯು ಹುಲಿಯೂರು ದುರ್ಗದ ಹೇಮಗಿರಿ ಬೆಟ್ಟದ ಬಳಿಯ ವಸತಿ ಶಾಲೆಗೆ ಕ್ವಾರಂಟೈನ್ ಮಾಡಲಾಗಿದೆ.