ಇನ್ನು ಮುಂದೆ ಮೊಬೈಲ್ ಸಂಖ್ಯೆ 10 ರಿಂದ 11 ಅಂಕಿಗೆ ಹೆಚ್ಚಿಸಲು ಟ್ರಾಯ್ ಶಿಫಾರಸು
ನವದೆಹಲಿ: ದೇಶದಲ್ಲಿರುವ ಮೊಬೈಲ್ ಬಳಕೆದಾರರಿಗೆ ಅಗತ್ಯ ಮಾಹಿತಿಯೊಂದು ಇಲ್ಲಿದೆ. ಎಲ್ಲಾ ಬಳಕೆದಾರರು ತಮ್ಮ ಮೊಬೈಲ್ ನಂಬರಿಗೆ ಮತ್ತೊಂದು ಅಂಕಿ ಸೇರಿಸಬೇಕಾದ ಸಾಧ್ಯತೆ ಕಂಡುಬರುತ್ತಿದೆ.
ಪ್ರತಿ ಮೊಬೈಲ್ ನಂಬರಿನ ಆರಂಭದಲ್ಲಿ 9 ಸೇರಿಸಲು ಟ್ರಾಯ್ ಶಿಫಾರಸು ಮಾಡಿದೆ. ಅದೇ ರೀತಿ ಸ್ಥಿರ ದೂರವಾಣಿಯಿಂದ ಮೊಬೈಲ್ ಗೆ ಕರೆ ಮಾಡುವ ಸಂದರ್ಭದಲ್ಲಿ ಆರಂಭದಲ್ಲಿ ಸೊನ್ನೆ ಸೇರಿಸಲು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ( ಟ್ರಾಯ್) ಈ ಸಂಬಂಧ ಶಿಫಾರಸು ಮಾಡಿದೆ. ಇದು ಯಾವಾಗ ಜಾರಿಗೆ ಬರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇಗಾಗಲೇ ಇರುವ ಹತ್ತು ಅಂಕಿಯ ನಂಬರಿನಿಂದ ನೂರು ಕೋಟಿ ಜನರಿಗೆ ಮೊಬೈಲ್ ಬಳಕೆ ಮಾಡಲು ಅವಕಾಶ ಆಗುತ್ತದೆ. ಹೆಚ್ಚುತ್ತಿರುವ ಮೊಬೈಲ್ ಬಳಕೆ ಮತ್ತು ದಿನೇ ದಿನೇ ಏರುವ ಜನಸಂಖ್ಯೆಗೆ ಅನುಗುಣವಾಗಿ ಮೊಬೈಲ್ ಬಳಕೆದಾರರ ಅಗತ್ಯ ಪೂರೈಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಇರುವ ಹತ್ತು ಸಂಖ್ಯೆಯನ್ನು ನೆನಪಿನಲ್ಲಿಡಲು ಕಷ್ಟವಾಗುವ ನಮಗೆ ಇದೀಗ ಒಂದು ಅಂಕಿ ಸೇರ್ಪಡೆಯಾದರೆ ಅದನ್ನು ನೆನಪಿನಲ್ಲಿಡುವುದು ಸವಾಲಾಗಿ ಪರಿಣಮಿಸಲಿದೆ.