ಕೋರೋನಾದಿಂದ ಮೃತಪಟ್ಟ ಆಕೆ ಅಂತ್ಯಸಂಸ್ಕಾರದ ನಂತರ ಎದ್ದು ಬಂದಳು !

“ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು” ಎನ್ನುತ್ತಾರೆ. ಇದಕ್ಕೆ ಸ್ಪಷ್ಟ ನಿದರ್ಶನವೊಂದು ಇಲ್ಲಿದೆ. ಸರಕಾರ, ವೈಜ್ಞಾನಿಕ ತಂಡಗಳು, ಕುಟುಂಬಸ್ಥರು ಎಲ್ಲರೂ ಕಣ್ಣಾರೆ ಕಂಡಿದ್ದರೂ, ನೋಡಿದ್ದು ಸುಳ್ಳಾಗಿದೆ. ಸತ್ತವಳು ಅಂತ್ಯಸಂಸ್ಕಾರ ನಡೆದ ನಂತರ ಮತ್ತೆ ಎದ್ದು ಬಂದಿದ್ದಾಳೆ.

ಕೋರೋನಾ ಸೋಂಕಿನಿಂದ ಮೃತಪಟ್ಟ ಮಹಿಳೆ ಮತ್ತೆ ಜೀವಂತವಾಗಿ ಮನೆಯೆದುರು ಪ್ರತ್ಯಕ್ಷವಾದ ಆಶ್ಚರ್ಯಕರ ಘಟನೆಯೊಂದು ವರದಿಯಾಗಿದೆ. ಮೇಲ್ನೋಟಕ್ಕೆ ಇದು ವಿಸ್ಮಯ ಎಂದು ಕಂಡರೂ ನಂಬಲೇಬೇಕಾದ ಸತ್ಯವಾಗಿದೆ.  ಈ ಮಹಿಳೆಯನ್ನು ಸುಮಾರು 30 ದಿನಗಳ ಹಿಂದೆ ಕೊರೋನಾದಿಂದ ಮೃತಪಟ್ಟಳೆಂದು ಘೋಷಿಸಲಾಗಿತ್ತು ಹಾಗೂ ಆಕೆಯ ಅಂತ್ಯಕ್ರಿಯೆಯೂ ವೈಜ್ಞಾನಿಕ ವಿಧಾನದಲ್ಲಿ, ಕೋರೋನಾ ಪ್ರೋಟೋಕಾಲ್ ನ ಪ್ರಕಾರ ಸರಕಾರಿ ಅಧಿಕಾರಿಗಳ ಮುಂದೆ ನಡೆಸಲಾಗಿತ್ತು.

ಈ ಘಟನೆ ನಡೆದದ್ದು ಇಕ್ವಾಡೋರ್ ದೇಶದಲ್ಲಿ. ಮಾರ್ಚ್ 27 ರಂದು. ಈ ಮಹಿಳೆಗೆ ಜ್ವರ ಮತ್ತು ಉಸಿರಾಟದ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ಸ್ವಲ್ಪ ದಿನಗಳ ನಂತರ 74 ವರ್ಷದ ಆ ಮಹಿಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.

ವಾಸ್ತವವಾಗಿ, ಒಂದು ತಿಂಗಳ ಹಿಂದೆ, ಆಸ್ಪತ್ರೆಯ ಆಡಳಿತ ಮಂಡಳಿಯು ಸ್ಮಶಾನದಲ್ಲಿ ಶವವೊಂದನ್ನು ದೂರದಿಂದ ತೋರಿಸಿ ಇದು ನಿಮ್ಮ ಮನೆಯ ಮಹಿಳೆಯ ದೇಹವೆಂದು ತೋರಿಸಿದ್ದರು. ಕೋವಿಡ್-19 ಭಯದಿಂದ ಯಾರೂ ಶವದ ಹತ್ತಿರ ಹೋಗಲು ಸಾಧ್ಯವಾಗಿರಲಿಲ್ಲ. ಆಕೆಯ ಮುಖವನ್ನು ದೂರದಿಂದ ನೋಡಿದಾಗ, ಒಂದು ಕಡೆಯಿಂದ ನೋಡಿದರೆ ಆಕೆ ತಮ್ಮ ಸಂಬಂಧಿ ಅಲ್ಬಾ ಥರಾನೇ ಕಾಣುತ್ತಿದ್ದಳು. ಆಕೆಯ ಕೂದಲು ಮತ್ತು ಚರ್ಮದ ಬಣ್ಣವೂ ಅಲ್ಲಿದ್ದ ಶವದ ಜೊತೆ ಹೋಲಿಕೆಯಾಗುತ್ತಿತ್ತು. ಆದರೆ ಅದು ಅಲ್ಬಾ ಆಗಿರಲಿಲ್ಲ. ಬಳಿಕ ಆಕೆಯ ಅಂತ್ಯಸಂಸ್ಕಾರವನ್ನು ಆಸ್ಪತ್ರೆ ಮಂಡಳಿ ನಡೆಸತೊಡಗಿತು. ಆದರೆ ಅಲ್ಲಿ ಅಲ್ಬಾ ಎಂದುಕೊಂಡು ಬೇರೆ ಮಹಿಳೆಯ ಅಂತ್ಯಸಂಸ್ಕಾರ ನಡೆದಿತ್ತು.

ಆ ನಂತರ ಕೆಲ ದಿನಗಳ ನಂತರ ಅಲ್ಬಾ ಎಂಬ ಆ ಮಹಿಳೆಗೆ ಆಸ್ಪತ್ರೆಯಲ್ಲಿ ಪ್ರಜ್ಞೆ ಬಂದಾಗ ಆಕೆ ತನ್ನ ಕುಟುಂಬದ ಬಗ್ಗೆ ವೈದ್ಯರಿಗೆ ತಿಳಿಸಿದ್ದಾಳೆ. ನಂತರ ಆಸ್ಪತ್ರೆಯ ಆಡಳಿತ ಮಂಡಳಿಯು ಆಕೆಯ ಕುಟುಂಬ ಸದಸ್ಯರನ್ನು ಸಂಪರ್ಕಿಸಿತು. ಆದರೆ, ಕುಟುಂಬಸ್ಥರಲ್ಲಿ ಅಪನಂಬಿಕೆ ಮತ್ತು ಒಂದೆಡೆ ಆಸ್ಪತ್ರೆಯ ಸಿಬ್ಬಂದಿಯ ಈ ಉಡಾಫೆ ವರ್ತನೆಗೆ ಅಸಮಾಧಾನವಿದ್ದರೂ ಇನ್ನೊಂದೆಡೆ ಅಲ್ಬಾ ಮರಳಿ ಬದುಕಿ ಬಂದಳೆಂಬ ಖುಷಿ ಮನೆಯಲ್ಲಿ ಮನೆ ಮಾಡಿದೆ.

Leave A Reply

Your email address will not be published.