ಸವಣೂರು | ಬದುಕಿಗೊಂದು ಆಸರೆ ಕಲ್ಪಿಸಿದ ಯುವಕರ ತಂಡ

ಸವಣೂರು : ಗ್ರಾಮದ ಇಡ್ಯಾಡಿ ನಿವಾಸಿಯಾದ ಯುಮುನಾ ಇಡ್ಯಾಡಿ ಅವರ ಮನೆಯು ಮಳೆಗಾಲದಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂಪೂರ್ಣವಾಗಿ ಕುಸಿದಿದ್ದು 2 ವರ್ಷಗಳಿಂದ ಪ್ಲಾಸ್ಟಿಕ್ ಹೊದಿಕೆಯಲ್ಲಿ ಅದೇ ಮನೆಯ ಅಳಿದುಳಿದ ಗೋಡೆಗಳ ಮಧ್ಯೆ ಜೀವನ ನಡೆಸುತ್ತಿದ್ದರು.

ಈ ಸಂಧರ್ಭದಲ್ಲಿ ಊರಿನ ಸಮಾನ ಮನಸ್ಕ ಯುವಕರು ಸೇರಿಕೊಂಡು ಕಟ್ಟೋಣ ಬಾಳಿಗೊಂದು ಆಸರೆ ವ್ಯಾಟ್ಸಾಪ್ ಗ್ರೂಪ್ ರಚಿಸಿ ಮನೆ ನಿರ್ಮಾಣಕ್ಕೆ ನಿರ್ಧರಿಸಿ,ಈಗ ಮನೆ ನಿರ್ಮಿಸಿ ಕುಟುಂಬಕ್ಕೆ ಗೃಹ ಪ್ರವೇಶ ಮಾಡಿ ಹಸ್ತಾಂತರ ಮಾಡುವ ಕ್ಷಣಗಳಿಗೆ ಕಾತರವಾಗಿದ್ದಾರೆ.

ಮನೆ ನಿರ್ಮಾಣದ ಕಾರ್ಯದಲ್ಲಿ ಗ್ರಾಮದ ಧಾರ್ಮಿಕ,ರಾಜಕೀಯ ಮುಖಂಡರುಗಳ ಹಾಗೂ ಸಂಘ ಸಂಸ್ಥೆಗಳ ಮಾರ್ಗದರ್ಶನದಲ್ಲಿ, ಊರಿನ ಉತ್ಸಾಹಿ ಯುವಕರ ಶ್ರಮದಾನ,ದಾನಿಗಳ‌ ನೆರವು ಪ್ರಮುಖವಾಗಿದೆ.

ಎಪ್ರಿಲ್ 26ರಂದು ಶಿಲಾನ್ಯಾಸ ಮಾಡುವ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.ಈಗ ಮೇ.27ಕ್ಕೆ ಗೃಹಪ್ರವೇಶ ಮಾಡಿ ಹಸ್ತಾಂತರ ಮಾಡುವ ಸಂಭ್ರಮ.

ಕೇವಲ ಒಂದೇ ತಿಂಗಳಲ್ಲಿ ದಾನಿಗಳ ನೆರವಿನಿಂದ ಶ್ರಮದಾನೀ ಯುವಕರ ಸತತ ಪ್ರಯತ್ನದಿಂದ ಮನೆ ನಿರ್ಮಾಣವಾಗಿದೆ.

ಮಳೆಯಿಂದ ತನ್ನ ಮನೆ ಕುಸಿದು ದಿಕ್ಕೆ ತೋಚದಂತಾಗಿತ್ತು.ಅಲ್ಲಿ ಇಲ್ಲಿ ಕಾಲ ಕಳೆಯುವ ಸಂಕಷ್ಟ ಎದುರಾಗಿತ್ತು.ಊರಿನ ಸಮಾನ ಮನಸ್ಸಿನ ಯುವಕರ ತಂಡ ತನಗೆ ಮನೆ ನಿರ್ಮಾಣದ ಕುರಿತು ತಿಳಿಸಿದಾಗ ಸಂತೋಷವಾಯಿತು.
ಒಂದೇ ತಿಂಗಳಲ್ಲಿ ನನಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ.ಕೈ ಜೋಡಿಸಿದ ಎಲ್ಲಾ ಮನಸ್ಸುಗಳಿಗೆ ಧನ್ಯವಾದಗಳು.
-ಯಮುನಾ ಇಡ್ಯಾಡಿ,

Leave A Reply

Your email address will not be published.