ಪುತ್ತೂರು-ಮಂಗಳೂರು ಮದ್ಯೆ ದರ ಏರಿಸಿ, ಸಾರ್ವಜನಿಕರ ಛೀಮಾರಿಯ ನಂತರ ದರ ಇಳಿಸಿದ ಕೆಯಸ್ಸಾರ್ಟಿಸಿ
ಪುತ್ತೂರು-ಮಂಗಳೂರು ಮದ್ಯೆ ಓಡಾಡುವ ಸರಕಾರಿ ಸ್ವಾಮ್ಯದ ಕೆಯಸ್ಸಾರ್ಟಿಸಿ ಬಸ್ಸುಗಳು ಮೇ 20 ರಂದು ಎಕಾಏಕಿ ಮಂಗಳೂರಿಗೆ ಹೋಗುವ ಬರುವ ಬಸ್ಸುಗಳಿಗೆ ದರ ಹೆಚ್ಚಳ ಮಾಡಿದ್ದ ಪುತ್ತೂರು ಡಿಪೋ ಮತ್ತೆ ದರ ಇಳಿಸಿ, ನಿನ್ನೆಯಿಂದ ಹಳೆಯ ದರದಿಂದಲೇ ಪ್ರಯಾಣ ಸಾಧ್ಯವಾಗುತ್ತಿದೆ.
ಪುತ್ತೂರಿನಿಂದ ಮಂಗಳೂರಿಗೆ ಹೋಗುವ ಬರುವ ಬಸ್ಸುಗಳಿಗೆ 61 ರೂಪಾಯಿ ಟಿಕೆಟ್ ಗೆ ಚಾರ್ಜ್ ಮಾಡಿದ ಪುತ್ತೂರು ಡಿಪೋ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿತ್ತು.
ರಾಜ್ಯದೆಲ್ಲೆಡೆ ಕೆ ಎಸ್ ಅರ್ ಟಿ ಸಿ ಬಸ್ಸು ಗಳನ್ನು ಲಾಕ್ ಡೌನ್ ಸಡಿಲಿಕೆ ಬಳಿಕ ನಾಗರಿಕರಿಗೆ ಪ್ರಯಾಣಕ್ಕೆ ರಸ್ತೆಗಿಳಿಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರ ಆದೇಶದ ಮೇರೆಗೆ ಎಲ್ಲೂ ಕೂಡಾ ದರ ಹೆಚ್ಚಳ ಮಾಡಿಲ್ಲ. ಆದರೆ ಪುತ್ತೂರು ಡಿಪೋ ಮಂಗಳೂರು-ಪುತ್ತೂರು ಮದ್ಯೆ ಖಾಸಗಿ ಬಸ್ಸ್ ಸಂಪೂರ್ಣ ಸ್ಥಗಿತವಾಗಿದ್ದರಿಂದ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿತ್ತು. ಕೋರೋನಾದ ತೊಂದರೆಯಿಂದ ಕಡಿಮೆ ಜನರನ್ನು ಮಾತ್ರ ಕೂಡಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇರುವ ಕಾರಣ ಯಾವುದೇ ಪ್ರೈವೇಟ್ ಬಸ್ಸುಗಳು ರಸ್ತೆಗೆ ಇಳಿದಿಲ್ಲ. ಹಾಗಾಗಿ ಪುತ್ತೂರು ಡಿಪೋ ಏಕಾಏಕಿ ದರ ಹೆಚ್ಚಳ ಮಾಡಿತ್ತು.
ಕೆ ಎಸ್ ಅರ್ ಟಿ ಸಿ ಬಸ್ಸುಗಳು ದರ ಹೆಚ್ಚಿಸಿ ಓಡಿಸುವುದನ್ನು ಕಂಡ ಖಾಸಗಿಯವರೂ ದರ ಏರಿಸಿ ಬಸ್ಸು ರಸ್ತೆಗೆ ಇಳಿಸಲು ನಿರ್ಧರಿಸಿದ್ದರು.
ಇದನ್ನು ಕಂಡು ಪುತ್ತೂರಿನ ಪುತ್ತೂರು- ಮಂಗಳೂರು ಬಸ್ಸು ಪ್ರಯಾಣ ಬಳಕೆದಾರರ ಸಂಘಟಣೆಯ ಮುಂದಾಳು ಓರ್ವರು ಸಾರಿಗೆ ಸಚಿವ ಶ್ರೀ ಲಕ್ಷ್ಮಣ ಸವದಿ ಯವರಿಗೆ ಟ್ವೀಟ್ ಮಾಡಿದ್ದರು. ಅದಲ್ಲದೇ ಮಂಗಳೂರು ಮತ್ತು ಪುತ್ತೂರು ಕೆಯಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿಗಳ ಬಳಿ ಸ್ಪಷ್ಟೀಕರಣ ಕೇಳಿದ್ದರು. ಜನರು ಕೂಡಾ ಸೋಷಿಯಲ್ ಮೀಡಿಯಾಗಳಲ್ಲಿ ಕೋರೋನಾ ಪ್ರಕ್ಷುಬ್ಧತೆಯಲ್ಲಿ ದುಡ್ಡು ಮಾಡಲು ಹೊರಟ ಪುತ್ತೂರು ಡಿಪೋಗೆ ಸಖತ್ ಛೀಮಾರಿ ಹಾಕಿದ್ದರು.
ಮತ್ತೆ, ಒಂದೇ ದಿನದ ದರ ಹೆಚ್ಚಳದ ನಂತರ ನಿನ್ನೆಯಿಂದ ದರ ಇಳಿಸಿ ಹಳೆಯ ದರವನ್ನೆ ವಿಧಿಸಲಾಗುತ್ತಿದೆ. ಈ ಅವದಿಯಲ್ಲಿ ಏರಿಕೆ ದರದ ಟಿಕೇಟು ದರ ಪಾವತಿಸಿ ಪ್ರಯಾಣಿಸಿದವರಿಗೆ ಕೆಯಸ್ಸಾರ್ಟಿಸಿ ಉಂಡೆ ನಾಮ ಹಾಕಿದ್ದಾರೆಂದು ಪ್ರಯಾಣಿಕರು ಅಳಲನ್ನು ತೋಡಿಕೊಂಡಿದ್ದಾರೆ. ಇನ್ನಾದರೂ ಸರಕಾರಿ ಸ್ವಾಮ್ಯದ ಸೇವೆಗಳಲ್ಲಿ ವಿನಾಕಾರಣ ಪ್ರಕಟಣೆ ವಿನಾ ದರ, ನಿಯಮ ಬದಲಾವಣೆ ಮಾಡಲು ಮುಂದಾಗಬಾರದೆಂದು ಜನಪ್ರತಿನಿಧಿಗಳಿಗೆ ಜನರು ಸಲಹೆ ಮಾಡಿದ್ದಾರೆ.