ನಾಳೆಯಿಂದ ರಾಜ್ಯದಲ್ಲಿ ಏನೇನು ಇರುತ್ತೆ? ಏನಿರಲ್ಲ? …ಸಂಪೂರ್ಣ ಮಾಹಿತಿ ಇಲ್ಲಿದೆ
ಬೆಂಗಳೂರು: ನಾಳೆಯಿಂದ ಕೆಎಸ್ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರ ಆರಂಭವಾಗಲಿದೆ. ಸಾರಿಗೆ ವಾಹನಗಳು ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸಂಚಾರ ನಡೆಸಲಿವೆ. ರೈಲುಗಳು ಸಹ ರಾಜ್ಯದ ಒಳಗಡೆ ಓಡಾಟ ನಡೆಸಲಿವೆ ಎಂದು ಲಾಕ್ಡೌನ್ 4.0 ರ ಮಾರ್ಗಸೂಚಿ ಸಂಬಂಧಿಸಿದ ಸಭೆಯ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ ತಿಳಿಸಿದರು.
ಮಾರ್ಗಸೂಚಿಯ ಮುಖ್ಯಾಂಶಗಳು:
- ಕಂಟೋನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆ ಬಸ್ ಸಂಚಾರ ಆರಂಭ.
- ಪ್ರತೀ ಬಸ್ ಗಳಲ್ಲಿ 30 ಜನರಿಗೆ ಪ್ರಯಾಣಿಸಲು ಮಾತ್ರ ಅವಕಾಶ ನೀಡಲಾಗಿದೆ.
- ಮದುವೆಗಳಲ್ಲಿ 50 ಜನಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.
- ಆಟೋ, ಕ್ಯಾಬ್ಗಳಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಟೋ, ಟ್ಯಾಕ್ಸಿಗಳಲ್ಲಿ ಚಾಲಕ ಹೊರತು ಪಡಿಸಿ ಇಬ್ಬರು ಪ್ರಯಾಣ ಮಾಡಬಹುದು.
- ಮ್ಯಾಕ್ಸಿಕ್ಯಾಬ್ ನಲ್ಲಿ ಚಾಲಕ ಹೊರತು ಪಡಿಸಿ ಮೂವರು ಪ್ರಯಾಣ ಮಾಡಬಹುದು.
- ಜಿಮ್ ಓಪನ್ ಮಾಡುವಂತಿಲ್ಲ, ಕ್ರೀಡಾಂಗಣ ತೆರಯಲಾಗುವುದು ಆದರೆ ಗುಂಪು ಗುಂಪಾಗಿ ಜನರು ಸೇರುವಂತಿಲ್ಲ.
- ಪಾನಿಪುರಿ, ಫಾಸ್ಟ್ ಫುಡ್ ಸೇರಿದಂತೆ ಬೀದಿ ಬದಿ ವ್ಯಾಪಾರ ನಡೆಸಬಹುದಾಗಿದೆ.
- ಉದ್ಯಾವನಗಳನ್ನು ಬೆಳಗ್ಗೆ 7 ರಿಂದ 9 ಮತ್ತು ಸಂಜೆ 5 ರಿಂದ 7ರವರೆಗೆ ಮಾತ್ರ ತೆರೆಯಬಹುದು.
- ಚಿನ್ನದಂಗಡಿ ಹಾಗೂ ಸೆಲೂನ್ ಗಳಿಗೆ ಬಾಗಿಲು ತೆರೆಯಲು ಅವಕಾಶ ನೀಡಲಾಗಿದೆ.
ಇನ್ನು ಪ್ರತಿ ಭಾನುವಾರ ಕಂಪ್ಲೀಟ್ ಲಾಕ್ಡೌನ್ ಇರಲಿದ್ದು, ಜನರು ಮನೆಯಿಂದ ಹೊರ ಬರುವಂತಿಲ್ಲ. ಅಂತರರಾಜ್ಯ ಸಂಚಾರದ ಬಗ್ಗೆ ಮೇ 31ರ ನಂತರ ನಿರ್ಧರಿಸಲಾಗುವುದು ಹಾಗೂ ಸದ್ಯಕ್ಕೆ ತುರ್ತು ಸಂದರ್ಭ ಹೊರತುಪಡಿಸಿ ಅಂತರ್ ರಾಜ್ಯ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಆದೇಶ ನೀಡಿದರು.
ಈ ಮೊದಲಿನಂತೆ ಸಂಜೆ 7 ರಿಂದ ಬೆಳಗ್ಗೆ 7ರವರೆಗೆ ಕರ್ಫ್ಯೂ ಮುಂದುವರಿಯಲಿದೆ. ಹೊರ ರಾಜ್ಯದ ಜನರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು. ಕಂಟೇನ್ ಮೆಂಟ್ ಝೋನ್ ಗಳಲ್ಲಿ ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿಯಲ್ಲಿದ್ದು, ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.