ದಾಹ ತಾಳಲಾರದೆ ಸ್ನೇಹಿತನ ಮಡಿಲಲ್ಲಿ ಪ್ರಾಣಬಿಟ್ಟ ಯುವಕ: ವಲಸೆ ಕಾರ್ಮಿಕರ ಕೂಗು ಕೇಳುವವರ್ಯಾರು..!?
ಭೋಪಾಲ್: ತವರು ಸೇರಿಕೊಳ್ಳಲು ಕಾಲ್ನಡಿಗೆ, ಸರಕು ಸಾಗಾಟದ ವಾಹನದ ಮೂಲಕ ಸಾಗುತ್ತಿರುವ ವಲಸೆ ಕಾರ್ಮಿಕರ ಕರುಣಾಜನಕ ಕಥೆಗೆ ಕೊನೆ ಇಲ್ಲದಂತಾಗಿದೆ. ಗುಜರಾತ್ನಿಂದ ಉತ್ತರಪ್ರದೇಶದಲ್ಲಿರುವ ತನ್ನ ಮನೆಯತ್ತ ಟ್ರಕ್ ಏರಿ ಹೊರಟ ಕಾರ್ಮಿಕನೊಬ್ಬ ಮಧ್ಯಪ್ರದೇಶದ ಶಿವಪುರಿ ಜಿಲ್ಲೆ ತಲುಪಿದಾಗ ತೀವ್ರ ಜ್ವರ ಹಾಗೂ ವಾಂತಿ ಮಾಡಲಾರಂಭಿಸಿದ. ಆಗ ಟ್ರಕ್ ಚಾಲಕ ಕಾರ್ಮಿಕನನ್ನು ಮಧ್ಯಪ್ರದೇಶದಲ್ಲಿ ಬಿಟ್ಟು ಉಳಿದ ಕಾರ್ಮಿಕರೊಂದಿಗೆ ತನ್ನ ಪ್ರಯಾಣ ಮುಂದುವರಿಸಿದ. ಕಾರ್ಮಿಕ ಅಮೃತ್ಗೆ ಇನ್ನೋರ್ವ ಕಾರ್ಮಿಕ ಯಾಕುಬ್ ಸಹಾಯಕ್ಕೆ ಬಂದ. ಯಾಕುಬ್ ಸ್ನೇಹಿತನನ್ನು ರಸ್ತೆಯಲ್ಲಿ ತನ್ನ ತೊಡೆ ಮೇಲೆ ಮಲಗಿಸಿಕೊಂಡು ದಾರಿಹೋಕರಲ್ಲಿ ಸಹಾಯ ಯಾಚಿಸಿದ. ಯಾರೂ 24ರ ಹರೆಯದ ಯುವಕನ ಸಹಾಯಕ್ಕೆ ಬರಲಿಲ್ಲ. ಆದರೆ ಯುವಕ ಗಂಟೆಗಳ ಬಳಿಕ ವಿಪರೀತ ಉಷ್ಣಾಂಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ.
ಅಮೃತ್ ಗುಜರಾತ್ನಿಂದ ಉತ್ತರಪ್ರದೇಶಕ್ಕೆ ಟ್ರಕ್ನಲ್ಲಿ ಹೊರಟ ಕಾರ್ಮಿಕರ ಗುಂಪಿನಲ್ಲಿದ್ದ. ಸೂರತ್ನಲ್ಲಿ ಗಾರ್ಮೆಂಟ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಮೃತ್ ಕೆಲಸ ಕಳೆದುಕೊಂಡ ಕಾರಣ ಉತ್ತರಪ್ರದೇಶದ ಬಸ್ತಿಗೆ ತೆರಳಲು ಇಂದೋರ್ಗೆ ತೆರಳುತ್ತಿದ್ದ ಟ್ರಕ್ನವನಿಗೆ 4000 ರೂ. ಕೈಗಿಟ್ಟು, ನಿಂತುಕೊಂಡೇ ಪ್ರಯಾಣ ಆರಂಭಿಸಿದ್ದ. ಪ್ರಯಾಣದ ವೇಳೆ ಅಮೃತ್ಗೆ ಅನಾರೋಗ್ಯ ಕಾಡಿತು. ಆಗ ಅಮೃತ್ನನ್ನು ಶಿವಪುರಿ ಜಿಲ್ಲೆಯಲ್ಲಿ ಟ್ರಕ್ ಚಾಲಕ ಕೆಳಗಿಳಿಸಿದ. ಅಮೃತ್ನ ಸ್ನೇಹಿತ ಯಾಕುಬ್ ಆತನ ಸಹಾಯಕ್ಕೆ ನಿಂತ.
ಯಾಕುಬ್ ತನ್ನ ಸ್ನೇಹಿತನನ್ನು ಮಡಿಲಲ್ಲಿ ಮಲಗಿಸಿಕೊಂಡು ದಾರಿಹೋಕರಲ್ಲಿ ನೆರವು ಯಾಚಿಸಿದ. ಯಾರೂ ಕೂಡ ಅವರತ್ತ ತಿರುಗಿ ನೋಡಲಿಲ್ಲ. ಈ ಚಿತ್ರವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದರು. ಈ ಚಿತ್ರ ವೈರಲ್ ಆಗುವಾಗ ಅಮೃತ್ ಪ್ರಾಣಪಕ್ಷಿ ಹಾರಿಹೋಗಿತ್ತು.
ಅಮೃತ್ ತೀವ್ರ ಜ್ವರ ಹಾಗೂ ವಾಂತಿಯಿಂದ ಬಳಲುತ್ತಿದ್ದರು. ವಿಪರೀತ ಉಷ್ಣಾಂಶದ ಲಕ್ಷಣ ಕಾಣಿಸುತ್ತಿದೆ.ಲಆದರೆ, ಕೋವಿಡ್-19 ಪರೀಕ್ಷೆಯ ಫಲಿತಾಂಶ ಬಂದ ಬಳಿಕವೇ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಶಿವಪುರಿ ಸರಕಾರಿ ಆಸ್ಪತ್ರೆಯ ಸರ್ಜನ್ ಡಾ.ಪಿ.ಕೆ. ಖಾರೆ ಹೇಳಿದ್ದಾರೆ.
ಅಮೃತ್ಗೆ ಸಹಾಯ ಮಾಡಿದ್ದ ಯಾಕುಬ್ರನ್ನು ಜಿಲ್ಲಾಸ್ಪತ್ರೆಯ ವಾರ್ಡ್ನಲ್ಲಿ ಕ್ವಾರಂಟೈನ್ನಲ್ಲಿಡಲಾಗಿದ್ದು, ಅವರ ಪರೀಕ್ಷೆಯ ಫಲಿತಾಂಶ ಬರುವುದು ಬಾಕಿ ಇದೆ.