ಮಡಿಕೇರಿಯಿಂದ ಮಂಗಳೂರಿಗೆ ಕಾಲ್ನಡಿಗೆಯಲ್ಲಿ ಹೊರಟ ಕಾರ್ಮಿಕ | ಕುಸಿದುಬಿದ್ದ ಕಾರ್ಮಿಕನನ್ನು ಉಪಚರಿಸಿದ ಸುಳ್ಯ ಯುವಕರು

ಸುಳ್ಯದ ಕೆಲವು ಯುವಕರು ಮಾನವೀಯತೆ ಮೆರೆದು ಕಾಲ್ನಡಿಗೆಯಲ್ಲಿ ಹೊರಟಿದ್ದ ವ್ಯಕ್ತಿ ಅಸ್ವಸ್ಥಗೊಂಡು ಸುಳ್ಯದಲ್ಲಿ ಬಿದ್ದ ವ್ಯಕ್ತಿಯನ್ನು ಉಪಚರಿಸಿ ಸ್ವಗ್ರಾಮಕ್ಕೆ ತೆರಳಲು ವ್ಯವಸ್ಥೆ ಮಾಡಿದ ಘಟನೆ ಇಂದು ನಡೆದಿದೆ.

ಮಂಗಳೂರಿನ ಕಟೀಲು ನಿವಾಸಿ ನಾರಾಯಣ ರೈ ಯವರು ಮಡಿಕೇರಿಯಲ್ಲಿ ಕೂಲಿ ಕಾರ್ಮಿಕರಾಗಿದ್ದರು. ದೇಶದಾದ್ಯಂತ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಕೆಲಸ ಇಲ್ಲದೆ ಇತ್ತ ಊರಿಗೂ ತೆರಳಲಾಗದೆ ಮಡಿಕೇರಿಯಲ್ಲೇ ‌ಇದ್ದರು. ಐದು ದಿನಗಳ ಹಿಂದೆ ಮಡಿಕೇರಿಯಿಂದ ಕಾಲ್ನಡಿಗೆಯಲ್ಲೇ ಊರಿಗೆ ಹೊರಟರು.

ಇಂದು ಸುಳ್ಯ ಜ್ಯೋತಿ ಸರ್ಕಲ್ ಅಪೋಲೋ ಟಯರ್ಸ್ ಮುಂಭಾಗ ತಲುಪುವಾಗ ಅಲ್ಲಿ ಪ್ರಜ್ಞಾಹೀನರಾಗಿ ಬಿದ್ದರು. ಇದನ್ನು ಕಂಡ ರಶೀದ್ ಜಟ್ಟಿಪಳ್ಳ ,ರಜಾಕ್ ‌ಕೆ.ಎಂ, ಹಮೀದ್ ಬಿ.ಕೆ, ದೀಕ್ಷಿತ್ ಕಾನತ್ತಿಲ, ನೌಶಾದ್ ಎಂ.ಎಸ್, ರಜಾಕ್ ನೆಲ್ಲಿಕಾಡ್ ಮುಂತಾದವರು ಅವರನ್ನು ಉಪಚರಿಸಿ ಊಟ ತಂದುಕೊಟ್ಟು, ಸಹಾಯ ಧನ ನೀಡಿ
ಸುಳ್ಯ ಪೋಲಿಸ್ ಠಾಣೆಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಆಗಮಿಸಿದ ಸುಳ್ಯ ಠಾಣಾಧಿಕಾರಿ ಹರೀಶ್ ಅವರು ನಾರಾಯಣ ರೈಯವರನ್ನು ಠಾಣೆಗೆ ಕರೆದುಕೊಂಡು ಹೋಗಿ ಮಂಗಳೂರಿಗೆ ಕಳುಹಿಸಿ ಕೊಡುವ ವ್ಯವಸ್ಥೆಯನ್ನು ಮಾಡಿದರೆಂದು ತಿಳಿದುಬಂದಿದೆ.

Leave A Reply

Your email address will not be published.