ಫಾರ್ವರ್ಡ್ ಮಾಡಿದ್ದ ಸಂದೇಶವನ್ನು ತಿರುಚಿ ರವಾನಿಸಿದ ಆರೋಪ| ರವಿಪ್ರಸಾದ್ ಶೆಟ್ಟಿಗೆ ಮಧ್ಯಂತರ ಜಾಮೀನು
ಪುತ್ತೂರು: ಪುತ್ತೂರಿನ ವೈದ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಫಾರ್ವರ್ಡ್ ಮಾಡಿದ ಸಂದೇಶವನ್ನು ವ್ಯಕ್ತಿಯೊಬ್ಬರು ತಿರುಚಿ ರವಾನಿಸಿದ ಮತ್ತು ಇದೇ ವಿಚಾರಕ್ಕೆ ವಿದೇಶದಿಂದ ವೈದ್ಯರಿಗೆ ಬಂದಿರುವ ಬೆದರಿಕೆ ಕರೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಆರೋಪಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಮಹಾವೀರ ಮೆಡಿಕಲ್ ಸೆಂಟರ್ನ ಡಾ. ಸುರೇಶ್ ಪುತ್ತೂರಾಯ ಅವರು ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ಸಂದೇಶವನ್ನು ಫಾರ್ವರ್ಡ್ ಮಾಡಿದ್ದರು. ರವಿಪ್ರಸಾದ್ ಶೆಟ್ಟಿ ಬನ್ನೂರು ಎಂಬವರು ಆ ಸಂದೇಶವನ್ನು ಫೇಸ್ಬುಕ್ನಲ್ಲಿ ತಿರುಚಿ ಫಾರ್ವರ್ಡ್ ಮಾಡಿದ್ದರು. ಇದರಿಂದಾಗಿ ಡಾ. ಸುರೇಶ್ ಪುತ್ತೂರಾಯ ಅವರಿಗೆ ವಿದೇಶದಿಂದ ಬೆದರಿಕೆ ಕರೆ ಬರುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೂಲಕ ರವಿಪ್ರಸಾದ್ ಶೆಟ್ಟಿ ಅವರ ವಿರುದ್ಧ ಖಾಸಗಿ ದೂರು ನೀಡಿದ್ದರು.
ನ್ಯಾಯಾಲಯ ಪ್ರಕರಣ ದಾಖಲಿಸುವಂತೆ ಪುತ್ತೂರು ನಗರ ಪೊಲೀಸ್ ಠಾಣೆಗೆ ನಿರ್ದೇಶನ ನೀಡಿತ್ತು. ಈ ನಿಟ್ಟಿನಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ರವಿಪ್ರಸಾದ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಾಗಿತ್ತು.
ರವಿಪ್ರಸಾದ್ ಶೆಟ್ಟಿಯವರು ಜಾಮೀನು ಕೋರಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ರವಿಪ್ರಸಾದ್ ಶೆಟ್ಟಿ ಪರವಾಗಿ ನ್ಯಾಯವಾದಿ ಚಾಣಾಕ್ಯ ಲಾ ಛೇಂಬರ್ನ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ಅವರು ಮಂಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಆನ್ಲೈನ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.