ನೈಟಿಂಗೇಲ್ ಎಂಬ ದೀಪದ ಬೆಳಕು

ಜಗತ್ತಿನಲ್ಲಿ ಅನೇಕ ಮಹಾಮಾರಿ ಕಂಟಕಗಳು ಎದುರಾದಾಗ ನಮ್ಮೆಲ್ಲರಿಗೆ ಹೆಗಲು ಕೊಡುತ್ತಾ ನಿಂತಿದ್ದು ದಾದಿಯರು. ಯುದ್ದದಲ್ಲಿ ಗಾಯಗೊಂಡವರ ಸೇವೆಯಿಂದ ಹಿಡಿದು ಇವತ್ತಿನ ಕೊರೊನಾ ಕಂಟಕದವರೆಗೆ ನಮ್ಮೆಲ್ಲರ ಬೆನ್ನ ಹಿಂದೆ ನಿಂತು, ರೋಗಿಗಳಿಗಿರುವ ರೋಗಕ್ಕೆ ಅಸಹ್ಯ ಪಡದೆ, ಆ ರೋಗ ತಮಗೂ ಬರಬಹುದೆಂಬ ಭಯ ಪಡದೆ ಸೇವೆಯೆಂಬ ಯಜ್ಞದಲ್ಲಿ ಸಮಿಧೆ ಉರಿಯುತ್ತಾ ಬಂದ ಮಾತೃ ವಾತ್ಸಲ್ಯಮಯಿಗಳು ನರ್ಸ್ ಗಳು.

ಮೇ 12 ನೇ ತಾರೀಖಿನಂದು ಪ್ರತಿ ವರ್ಷ ವಿಶ್ವ ನರ್ಸ್ ದಿನಾಚರಣೆಯಾಗಿ ಆಚರಿಸುತ್ತಾರೆ.

ಮೇ12 ದೀಪದ ಮಹಿಳೆ ‘ಫ್ಲಾರೆನ್ ನೈಟಿಂಗೇಲ್’ ಹುಟ್ಟಿದ ದಿನ. ತನ್ನ ನಿಸ್ವಾರ್ಥ ಸೇವೆಯ ಮುಖಾಂತರ ಜಗತ್ತಿಗೆ ಮಾನವತೆಯ ಪಾಠ ಹೇಳಿಕೊಟ್ಟ ಮಹಾನ್ ಚೈತನ್ಯ ಆಕೆ. 1820 ಮೇ12 ರಂದು ಇಟಲಿಯ ಫ್ಲಾರೆನ್ಸ್ ಪಟ್ಟಣದಲ್ಲಿ ಹುಟ್ಟಿದ ನೈಟಿಂಗೇಲ್ ಆಧುನಿಕ ನರ್ಸ್ ಶಿಕ್ಷಣ ಆರಂಭಿಸಿ ಅದಕ್ಕೊಂದು ಸಂಘಟನೆಯ ರೂಪ ಕೊಟ್ಟಾಕೆ.

1854-56 ರಲ್ಲಿ ಕ್ರಿಮಿಯನ್ ಯುದ್ದ ನಡೆದಾಗ ಇಟಲಿಯಿಂದ ಟರ್ಕಿ ದೇಶಕ್ಕೆ ಬ್ರಿಟಿಷ್ ಸೈನಿಕರ ಸೇವೆ ಮಾಡೋದಕ್ಕೆ 40ಜನ ದಾದಿಯರನ್ನು ನೇಮಿಸಲಾಯಿತು. ಆ ನಲವತ್ತು ಜನರಲ್ಲಿ ನೈಟಿಂಗೇಲ್ ಕೂಡ ಒಬ್ಬರು. ಆದರೆ ಅಂದು ಯುದ್ದದಲ್ಲಿ ಗಾಯಗೊಂಡವರ ಸೇವೆಯಲ್ಲಿ ಹಗಲಿರುಳು ಸೇವೆಗೆ ನಿಂತು ಶಹಬ್ಬಾಷ್ ಅನ್ನಿಸಿಕೊಂಡಿದ್ದು ನೈಟಿಂಗೇಲ್. ತನ್ನ ಸ್ವಂತ ಆರೋಗ್ಯವನ್ನೂ ಲೆಕ್ಕಿಸದೆ, ರಾತ್ರಿ ಹಗಲೆನ್ನದೆ ಗಾಯಗೊಂಡವರ ಸೇವೆ ಮಾಡಿ ಅವರನ್ನು ಉಪಚರಿಸುವಲ್ಲಿ ಯಶಸ್ವಿಯಾದರು.

ರಾತ್ರಿಯ ವೇಳೆ ದೀಪವನ್ನೆತ್ತಿಕೊಂಡು ಬಂದು ಅದರ ಬೆಳಕಿನಲ್ಲಿ ಗಾಯಾಳುಗಳನ್ನು ಉಪಚರಿಸುತ್ತಿದ್ದುದಕ್ಕಾಗಿ ಆಕೆಗೆ ‘ದೀಪದ ಮಹಿಳೆ’ ಅನ್ನೋ ಹೆಸರು ಬಂತು.
ನಂತರದಲ್ಲಿ ಲಂಡನ್ನಿನ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ಒಂದು ನರ್ಸಿಂಗ್ ಶಾಲೆ ಸ್ಥಾಪಿಸಿ ಅದಕ್ಕೆ ಸೇರುವಂತೆ ಬ್ರಿಟಿಷ್ ಮಹಿಳೆಯರನ್ನು ಪ್ರೋತ್ಸಾಹಿಸಿದರು. ಆಗ ಬ್ರಿಟನ್ನಿನ ಯಾವ ಆಸ್ಪತ್ರೆಗಳಲ್ಲೂ ಸರಿಯಾದ ಮೂಲಭೂತ ಸೌಕರ್ಯಗಳಿರಲಿಲ್ಲ. ನೈಟಿಂಗೇಲ್ ಈ ಪರಿಸ್ಥಿತಿಯನ್ನು ಸುಧಾರಿಸಿದರು.

ನರ್ಸಿಂಗ್ ಶಿಕ್ಷಣಕ್ಕಾಗಿ ಸ್ವತಂತ್ರ ಸಂಘಟನೆ ಮಾಡಿದರು. ತ್ಯಾಗದಿಂದ ಕೂಡಿದ ಅವರ ಜೀವನ ಅನೇಕ ಮಹಿಳೆಯರನ್ನು ಸೇವೆ ಮಾಡುವಂತೆ ಉತ್ತೇಜಿಸಿತು. ಕೋಟ್ಯಾನು ಕೋಟಿ ಯುವಕ ಯುವತಿಯರಿಗೆ ಸ್ಪೂರ್ತಿ ತುಂಬಿದ ನೈಟಿಂಗೇಲ್ ತನ್ನ ತೊಂಭತ್ತನೇ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದರು. ಆದರೆ ಅವರು ಕೊಟ್ಟ ಸೇವೆಯ ಮಂತ್ರ ಇಂದಿಗೂ ‘ನರ್ಸ್ ದಿನಾಚರಣೆಯ’ ಮೂಲಕ ಅವರನ್ನು ಸ್ಮರಿಸಿಕೊಳ್ಳುವಂತೆ ಮಾಡುತ್ತಿದೆ. ನೈಟಿಂಗೇಲ್ ಹಿಡಿದ ದೀಪದಿಂದ ಹರಿದ ಬೆಳಕು ಜಗತ್ತನ್ನು ಬೆಳಗುವ ಕಾರ್ಯ ಮಾಡುತ್ತಿದೆ.

ತಮ್ಮೆಲ್ಲಾ ಸುಖ-ಕಷ್ಟಗಳ ಮರೆತು ಆಸ್ಪತ್ರೆಗೆ ಬರುವ ಪ್ರತಿ ವ್ಯಕ್ತಿಯಲ್ಲಿ ಬಡವ-ಶ್ರೀಮಂತ, ಮೇಲು-ಕೀಳು ಭಾವನೆಯನ್ನು ನೋಡದೆ ಅವರ ಸೇವೆಗೆ ಮುಂದಾಗುವ ಎಲ್ಲಾ ನರ್ಸ್ ಗಳಿಗೆ ಈ ದಿನಾಚರಣೆ ಹೊಸ ಚೈತನ್ಯ ಕೊಡುವ ಸ್ಪೂರ್ತಿಯಾಗಲಿ.

ಸ್ವಸ್ತಿಕ್ ಕನ್ಯಾಡಿ

7022824146

Leave A Reply

Your email address will not be published.