ಪುತ್ತೂರಿನಿಂದ ತವರಿಗೆ ತೆರಳಿದ ಬಿಹಾರದ ವಲಸೆ ಕಾರ್ಮಿಕರು

ಉತ್ತರ ಭಾರತದ ಸುಮಾರು 1400 ವಲಸೆ ಕಾರ್ಮಿಕರನ್ನು ವಾಪಸ್ ಕಳುಹಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ, ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಹಾಗೂ ಕೇಂದ್ರ ರೈಲ್ವೇ ಸಹಾಯಕ ಸಚಿವರಾದ ಸುರೇಶ್ ಅಂಗಡಿ ಇವರ ಸಹಕಾರದಿಂದ ಪುತ್ತೂರು ಶಾಸಕರಾದ *ಶ್ರೀ ಸಂಜೀವ ಮಠಂದೂರು* ರವರ ನೇತೃತ್ವದಲ್ಲಿ ಬಿಹಾರ ರಾಜ್ಯಕ್ಕೆ ವಿಶೇಷ ರೈಲಿನಲ್ಲಿ ಇಂದು ಅಪರಾಹ್ನ ಪುತ್ತೂರು ರೈಲ್ವೇ ಸ್ಟೇಷನ್ ನಿಂದ ಸುರಕ್ಷಿತವಾಗಿ ಕಳುಹಿಸಿಕೊಡಲಾಯಿತು.

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಚರಿಸಲು ಎರಡು ರಾಜ್ಯಗಳ ಒಪ್ಪಿಗೆ ಪಡೆದು ಷರತ್ತುಗಳೊಂದಿಗೆ ಈ ರೈಲುಗಳು ನಾನ್‌ಸ್ಟಾಪ್ ಸಂಚಾರ ನಡೆಸುತ್ತದೆ. ಪುತ್ತೂರಿನಿಂದ ಬಿಹಾರಕ್ಕೆ ಹೊರಟ ರೈಲಿಗೆ ಸಂಬಂಧಿಸಿ ರೈಲ್ವೇ ನಿಲ್ದಾಣದಲ್ಲಿ ಜನಜಂಗುಳಿಯಾಗದಂತೆ, ಸೂಕ್ತ ಬಂದೋಬಸ್ತ್, ಟಿಕೇಟ್ ಪರಿಶೀಲನೆ, ಮೆಡಿಕಲ್ ಚೆಕ್‌ಅಪ್‌ಗೆ ವ್ಯವಸ್ಥೆ ಮಾಡಲಾಗಿತ್ತು.

ಪುತ್ತೂರು ಉಪವಿಭಾಗಕ್ಕೆ ಸಂಬಂಧಿಸಿ ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕುಗಳಿಂದ ಸುಮಾರು ೧೪೨೮ ಮಂದಿ ಬಿಹಾರದ ವಲಸೆ ಕಾರ್ಮಿಕರನ್ನು ಬಿಹಾರಕ್ಕೆ ಕಳುಹಿಸಲಾಯಿತು.

ಬೆಳಿಗ್ಗೆ ಆಯಾ ತಾಲೂಕುಗಳಿಂದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ವಲಸೆ ಕಾರ್ಮಿಕರನ್ನು ಕರೆದುಕೊಂಡು ಬಂದು ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ಎಲ್ಲರನ್ನು ಸೇರಿಸಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಬಳಿಕ ಅಲ್ಲಿಂದ ರೈಲ್ವೇ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅವರ ಆಧಾರ್ ಕಾರ್ಡ್ ಆಧಾರದಲ್ಲಿ ಪ್ರಯಾಣಿಕರನ್ನು ರೈಲ್‌ನಲ್ಲಿ ಕುಳ್ಳಿರಿಸಿದರು.


ಸಾಮಾಜಿಕ ಅಂತರ ಕಾಪಾಡಲು ವ್ಯವಸ್ಥೆ: ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕಾರ್ಮಿಕರನ್ನು ರೈಲ್ವೆ ಸ್ಟೇಷನ್ ಹೊರಗೆ ಸರತಿ ಸಾಲಿನಲ್ಲಿ ನಿಲ್ಲಿಸಿ ಒಳಗೆ ಬಿಡಲಾಯಿತು. ಪ್ರತಿಯೊಬ್ಬ ಪ್ರಯಾಣಿಕನಿಗೆ ಸ್ಯಾನಿಟರೈಸ್ ಹಾಕಿ, ಮಾಸ್ಕ್ ನೀಡಿ ರೈಲ್‌ನ ಒಳಗಡೆ ಕಳುಹಿಸಲಾಯಿತು.
ರೈಲಿನ ಒಳಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಸಂಚಾರಕ್ಕೂ ಮುನ್ನ ಸ್ಕ್ರೀನಿಂಗ್ ನಡೆಸಲಾಯಿತು. ಪ್ರಯಾಣಿಕನ ಸಂಪೂರ್ಣ ವಿಳಾಸ ಹಾಗೂ ಫೋನ್ ನಂಬರ್ ಪಡೆದುಕೊಂಡು, ರೈಲು ಪ್ರವೇಶಿಸುವ ಮೊದಲು ಪ್ರತಿ ಪ್ರಯಾಣಿಕನು ಕೋವಿಡ್ ೧೯ ರಹಿತ ಎಂಬುದು ಖಾತ್ರಿ ಮಾಡಲಾಯಿತು.


ಊಟದ ವ್ಯವಸ್ಥೆ: ಎಲ್ಲಾ ಪ್ರಯಾಣಿಕರಿಗೆ ಊಟ ಮತ್ತು ನೀರಿನ ವ್ಯವಸ್ಥೆಯನ್ನು ಮಾಡಲಾಯಿತು. ಊಟದ ವ್ಯವಸ್ಥೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಮಾಡಲಾಯಿತು. ಕುಡಿಯುವ ನೀರಿನ ವ್ಯವಸ್ಥೆಯನ್ನು ನರಿಮೊಗರು ಬಿಂದು ಸಂಸ್ಥೆಯವರು ಮಾಡಿದ್ದರು.
ಶಾಸಕ ಸಂಜೀವ ಮಠಂದೂರು, ಎಡಿಷನಲ್ ಎಸ್ಪಿ ವಿಕ್ರಮ್ ಜಿ. ಅಮ್ಟೆ, ಸಹಾಯಕ ಕಮೀಷನರ್ ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು, ಡಿವೈಎಸ್ಪಿ ದಿನಕರ ಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮುಂದಾಳತ್ವ ವಹಿಸಿದ್ದರು. ರೈಲು ನಿಲ್ದಾಣದ ಹೊರಗೆ ಮತ್ತು ಒಳಗೆ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಹಯೋಗದೊಂದಿಗೆ ಪುತ್ತೂರು ರೈಲು ನಿಲ್ದಾಣದಿಂದ 22 ಬೋಗಿಗಳಲ್ಲಿ ೧೪೨೮ ಕಾರ್ಮಿಕರನ್ನು ಸ್ಕ್ರೀನಿಂಗ್ ಮಾಡಿ, ಅವರಿಗೆ ಊಟ ಮತ್ತು ನೀರನ್ನು ಕೊಟ್ಟು ಕಳಿಸಿದ್ದೇವೆ. ಊಟದ ವ್ಯವಸ್ಥೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಮಾಡಿದ್ದಾರೆ. ನೀರಿನ ವ್ಯವಸ್ಥೆಯನ್ನು ಬಿಂದು ವಾಟರ್ ಫ್ಯಾಕ್ಟರಿ ನರಿಮೊಗರು ಇವರು ಮಾಡಿದ್ದಾರೆ. ನಮ್ಮ ಇಲಾಖೆಯ ಎಲ್ಲ ಸಿಬ್ಬಂದಿಗಳು ಹಾಗೂ ಪೊಲೀಸರು ಸೇರಿ ವಲಸೆ ಕಾರ್ಮಿಕರು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಒಂದು ಬಸ್‌ನಲ್ಲಿ ೩೬ ಮಂದಿಯಂತೆ ಕೂರಿಸಿ ಕರೆದುಕೊಂಡು ಬರಲಾಗಿದೆ. ಪ್ರತಿಯೊಬ್ಬರಿಂದ ಬಸ್ಸು ಮತ್ತು ರೈಲು ಪ್ರಯಾಣ ದರವನ್ನು ಪಡೆಯಲಾಗಿದೆ.

-ಯತೀಶ್ ಉಳ್ಳಾಲ್, ಸಹಾಯಕ ಕಮೀಷನರ್ ಪುತ್ತೂರು

ಏನು ಸಮಸ್ಯೆ ಆಗಿಲ್ಲ: 40 ಬಸ್ಸುಗಳಲ್ಲಿ ೧೩೯೮ ಕಾರ್ಮಿಕರನ್ನು ಕರೆದುಕೊಂಡು ಬಂದು ಅವರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿ ಕಳುಹಿಸಿದ್ದೇವೆ. ಜಿಲ್ಲಾಡಳಿತ, ಪೊಲೀಸ್, ಸಹಾಯಕ ಕಮೀಷನರ್ ಸಹಕಾರದೊಂದಿಗೆ ಎಲ್ಲವೂ ಸುವ್ಯವಸ್ಥೆಯಾಗಿ ನಡೆದಿದೆ. ನಿಗದಿ ಪಡಿಸಿದ ಸಮಯದೊಳಗೆ ಎಲ್ಲ ಕೆಲಸವನ್ನು ಮುಗಿಸಿದ್ದೇವೆ.

-ಮುರಳೀಧರ ಆಚಾರ್ಯ, ಕೆಎಸ್‌ಆರ್‌ಟಿಸಿ ಅಧಿಕಾರಿ


ಬೆಳ್ತಂಗಡಿ, ಸುಳ್ಯ, ಕಡಬ, ಪುತ್ತೂರು ತಾಲೂಕಿನ ಅಲ್ಲಲ್ಲಿ ವಲಸೆ ಕಾರ್ಮಿಕರು ಕೆಲಸವಿಲ್ಲದೆ ಪುನರ್ವಸತಿ ಕೇಂದ್ರಗಳಲ್ಲಿ ಇದ್ದವರನ್ನು ಇವತ್ತು ಪುತ್ತೂರು ರೈಲ್ವೆ ಸ್ಟೇಷನ್‌ನಿಂದ ಸದರ್ನ್ ರೈಲ್ವೆ ಮುಖಾಂತರ ಬಿಹಾರದ ಪಾಟ್ನಾದ ಪಕ್ಕದಲ್ಲಿರುವ ರೈಲ್ವೇ ಸ್ಟೇಷನ್‌ಗೆ ಕಳಿಸಿಕೊಡುವ ಕೆಲಸವಾಗಿದೆ.

Leave A Reply

Your email address will not be published.