ರಾಮನಗರ | ಭೂ ಸೇನೆಯ ಲಾಂಚರ್ಗಳು ಪತ್ತೆ..!ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ.
ರಾಮನಗರ ಜಿಲ್ಲೆಯ ಕನಕಪುರ ಬಳಿಯ ಕಾವೇರಿ ನದಿ ತೀರದಲ್ಲಿ ಅಚ್ಚರಿಯೆಂಬಂತೆ ಸೇನೆಯ ಲಾಂಚರ್ಗಳು ಪತ್ತೆಯಾಗಿವೆ. 6 ಲಾಂಚರ್ಗಳು ಕಾಣಸಿಕ್ಕಿದ್ದು, ಅವುಗಳ ಪೈಕಿ ಒಂದು ಲಾಂಚರ್ ಜೀವಂತವಾಗಿದೆ. ಸ್ಥಳಕ್ಕೆ ತಕ್ಷಣ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಪತ್ತೆಯಾದ ಎಲ್ಲಾ ಲಾಂಚರ್ ಗಳು ಭಾರತೀಯ ಭೂಸೇನೆಯ ಸೈನಿಕರಿಗೆ ತರಬೇತಿಯಲ್ಲಿ ಬಳಸುವ ಲಾಂಚರ್ಗಳು ಎಂದು ತಿಳಿದುಬಂದಿದೆ. ಸಿಕ್ಕ 6 ಲಾಂಚರ್ಗಳ ಪೈಕಿ ಒಂದು ಜೀವಂತವಾಗಿದ್ದು, ಉಳಿದ ಐದು ಲಾಂಚರ್ ಸ್ಪೋಟಗೊಂಡಿವೆ.
ಈ ಲಾಂಚರ್ಗಳು ಸುಮಾರು 15 ರಿಂದ 18 ವರ್ಷಗಳ ಹಿಂದಿನವು ಎಂದು ಅಭಿಪ್ರಾಯಿಸಲಾಗಿದೆ. ಆ ಸಮಯದಲ್ಲಿ ಭೂಸೇನೆಯ ಸೈನಿಕರಿಗೆ ವರ್ಷದಲ್ಲಿ ಎರಡು ಬಾರಿ ಕಾವೇರಿ ನದಿಯ ದಡದ ಮೇಕೆದಾಟು ಹಾಗು ಬೊಮ್ಮಸಂದ್ರದ ಬಳಿ ತರಬೇತಿ ಶಿಬಿರ ನಡೆಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಬಳಸುತ್ತಿದ್ದ ಲಾಂಚರ್ಗಳು ಇವು ಎಂಬ ಮಾಹಿತಿ ಇದೆ.ನದಿಯಲ್ಲಿ ನೀರು ಕಡಿಮೆಯಾಗಿದ್ದರಿಂದ ಹತ್ತಾರು ವರ್ಷಗಳ ಹಿಂದಿನ ಲಾಂಚರ್ಗಳು ಈಗ ಸಿಕ್ಕಿವೆ.