ಅಮ್ಮ ನಿನ್ನ ಪ್ರೀತಿಗೆ ಸರಿ ಸಾಟಿಯೇ ಇಲ್ಲ

ಅಮ್ಮ….ಅಂದರೆ ಅದೇನೋ ಶಕ್ತಿ.
ಅತ್ತಾಗ ಸಾಂತ್ವನ ನೀಡುವ ಸ್ನೇಹಿತೆಯಾಗಿ, ಸೋತಾಗ ಕೈ ಹಿಡಿದು ನಡೆಸುವ ಗುರುವಾಗಿ,ತಪ್ಪು ಮಾಡಿದಾಗ ಬೈದು ಬುದ್ಧಿ ಹೇಳುವ ತಂದೆಯಾಗಿ ಅವಳೊಬ್ಬಳೇ ಎಲ್ಲರ ಸ್ಥಾನವನ್ನು ನಿಭಾಯಿಸಬಹುದು.ಆಕೆಯ ಪ್ರೀತಿಗೆ ಸರಿಸಾಟಿ ಯಾರೂ ಇಲ್ಲ.

ಬೇಸರವನಿಸಿದಾಗ ಆಕೆಯ ಮಡಿಲಲ್ಲಿ ಪುಟ್ಟ ಮಗುವಂತೆ ಇರಬೇಕು ಎಂಬ ಆಸೆ ಇದ್ದರೂ,ಇಂದು ಪುರುಸೊತ್ತು ಇಲ್ಲದಾಗಿದೆ.ಅಲ್ಲದೆ ನಮ್ಮ ನೋವಿಗೆ ಸ್ಪಂದಿಸುವ ಆ ಮುಗ್ದ ಮನಸ್ಸಿನ ನೋವು ಕೇಳಲು‌ ನಮ್ಮಿಗೂ ಸಮಯದ ಅಭಾವ ಕಾಡುತ್ತಿದೆ. ಆಕೆಯ ಬಗ್ಗೆ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.

ಆಕೆ ತನ್ನ ಖುಷಿಯನ್ನು ತ್ಯಾಗ ಮಾಡಿ,ತನ್ನವರ ಖುಷಿಗೋಸ್ಕರ ಬದುಕುತ್ತಿರುತ್ತಾಳೆ.ಬಾಲ್ಯದಲ್ಲಿ‌ ಮಗು‌ ಎಡವಿ ಬಿದ್ದಾಗ ಧೈರ್ಯ ತುಂಬಿ ನಡೆಸುತ್ತಾಳೆ. ಆಪ್ತಸ್ನೇಹಿತೆಯಾಗಿ ಗಂಡನ ಏಳು ಬೀಳಿನ ನಡುವೆ ಅವರ ಜೊತೆ ಇರುತ್ತಾಳೆ. ಅತ್ತೆ ಮಾವನ ಜೊತೆ ಕೂಡ ಮಗಳಾಗಿ ಅವರ ಲಾಲನೆ‌ ಪೋಷಣೆ ಮಾಡುತ್ತಾ ಅವರ ಸಂತೋಷದಲ್ಲಿ ತನ್ನ ಸಂತೋಷ ಕಾಣುತ್ತಾಳೆ.

ಬೆಳ್ಳಗಿನಿಂದ ರಾತ್ರಿಯವರೆಗೆ ಮನೆಯ ಕೆಲಸ ಮಾಡುವ ಈಕೆಗೆ ಖುಷಿ ನೀಡುವ ಸಂಗತಿ‌ ಅಂದರೆ, ಗಂಡ,ಮಕ್ಕಳು ಅವಳಿಗಾಗಿ‌ ನೀಡುವ ಸಮಯ.ಸಂಜೆಯ ಹೊತ್ತಿಗೆ ಮಕ್ಕಳು ಮನೆಗೆ ಬಂದು,ಶಾಲಾ ವಿಜಾರಗಳನ್ನು ಹೇಳಿಕೊಂಡಾಗ ಅವಳ‌ ಮನದಲ್ಲಾಗುವ ಸಂತೋಷಕ್ಕೆ ಮಿತಿಯೇ ಇರುದಿಲ್ಲ.

ಅದೆಷ್ಟೋ ಸಲ ಪರೀಕ್ಷೆಯಲ್ಲಿ ಮಾರ್ಕ್ ಕಮ್ಮಿ ಬಂತು ಎಂದು ಅಪ್ಪ ಬೈದಾಗ,ನಮ್ಮನ್ನು ಸಮಾಧಾನಿಸಿ “ಮುಂದೆ ಚೆನ್ನಾಗಿ ಓದು” ಅಂತ ಹೇಳುವುದು‌ ನಮ್ಮ ಅಮ್ಮನೇ ತಾನೇ.ಆ ಕ್ಷಣಕ್ಕೆ ಓದಲೇ ಬೇಕು ಎಂದು ಅನಿಸಿದರೂ,ಅಮ್ಮ ಇದ್ದಾಳಲ್ಲ ಎಂದೂ ಸುಮ್ಮನಾಗಿಬಿಡುತ್ತೇವೆ.

ಹೊತ್ತೂತ್ತಿಗೆ ಊಟ,ತಿಂಡಿ ರೆಡಿ ಮಾಡಿ ಬಡಿಸಿದರೂ, ಆಕೆಯ ಬಳಿ ಯಾರೂ ಕೂಡ ತಿಂಡಿ ತಿಂದಿಯಾ,ಊಟ ಮಾಡಿದಿಯಾ ಎಂದು ಕೇಳುವವರಿಲ್ಲ.ಆಕೆ ಮಾತ್ರ ಯಾವುದನ್ನೂ ಅಪೇಕ್ಷಿಸದೆ, ತನ್ನವರ ಖುಷಿಯಲ್ಲೇ ಎಲ್ಲಾ ಮರೆತಂತೆ ನಟಿಸುತ್ತಾಳೆ.
ಆಕೆ ನಡೆದು ಬಂದ ಹಾದಿ ಮುಳ್ಳಾದರೂ, ಯಾರ‌ ಜೊತೆನೂ ಹೇಳದೆ,ಸದಾ ನಗು ಮುಖದಿಂದ ಜೀವನ ನಡೆಸುತ್ತಿರುತ್ತಾಳೆ. ಸದಾ ಕುಟುಂಬದ ಖುಷಿಗಾಗಿ‌ ಬದುಕುತ್ತಿರುವ ಜೀವ ಅಂದರೆ ತಾಯಿ ಒಬ್ಬಳೇ. ಇನ್ನಾದರೂ ಆಕೆಯ ಜೊತೆ ಸಮಯ ಕಳೆಯೋಣ,ಮತ್ತು ಅವಳ ಕಷ್ಟ ಸುಖದಲ್ಲೂ‌ ಭಾಗಿಯಾಗೋಣ.

ಮಧುಮಿತ ಕಡಂಬು

ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ,
ವಿವೇಕಾನಂದ ಕಾಲೇಜು, ಪುತ್ತೂರು

Leave A Reply

Your email address will not be published.