ದಕ್ಷಿಣಕನ್ನಡ ಸದ್ಯ ನಿರಾಳ | ಇನ್ನೊಂದು ಕೊರೋನಾ ಕೇಸು ಬಂದರೂ ದ.ಕ ರೆಡ್ ಝೋನ್ ಗೆ
ಮಂಗಳೂರು : ದಕ್ಷಿಣ ಕನ್ನಡದಲ್ಲಿ ಗುರುವಾರದಂದು ಲಭ್ಯವಾದ ಕೊರೋನಾ ಸಂಬಂಧಿತ ಎಲ್ಲಾ 92 ವರದಿ ನೆಗೆಟಿವ್ ಆಗುವ ಮೂಲಕ ಜಿಲ್ಲೆಯ ಜನತೆಯ ಸದ್ಯಕ್ಕೆ ನೆಮ್ಮದಿಯ ಉಸಿರಾಡುವಂತಾಗಿದೆ.
ನಿನ್ನೆ ಗುರುವಾರ ಒಟ್ಟು 147 ಮಂದಿಯ ಸ್ಯಾಂಪಲ್ ಅನ್ನು ಕಳುಹಿಸಿಕೊಡಲಾಗಿದೆ. ಹಿಂದಿನ ಮಾದರಿಗಳನ್ನು ಸೇರಿಸಿ ಒಟ್ಟು 272 ಸ್ವಾಬ್ ( ಗಂಟಲ ಮಾದರಿ) ಗಳ ಪರೀಕ್ಷೆ ಮತ್ತು ರಿಪೋರ್ಟ್ ನಿರೀಕ್ಷಿಸಲಾಗಿದೆ.
ಮೊನ್ನೆ ಬುಧವಾರದಂದು 3 ಪ್ರಕರಣಗಳು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಅಲ್ಲದೇ, ಒಂದು ವೇಳೆ ಇನ್ನೊಂದೇ ಒಂದು ಕೋರೋನಾ ಪಾಸಿಟಿವ್ ಕೇಸು ದಾಖಲಾದರೂ ಆಗ ದಕ್ಷಿಣ ಕನ್ನಡ ಅನಿವಾರ್ಯವಾಗಿ ರೆಡ್ ಝೋನ್ ಗೆ ಹೋಗಲಿದೆ. ಆದರೆ, ಇದೀಗ ಜನತೆ ನಿರಾಳರಾಗಿದ್ದಾರೆ. ಗುರುವಾರ ಲಭ್ಯವಾದ ಎಲ್ಲಾ ವರದಿಗಳು ನೆಗೆಟಿವ್ ಆಗುವ ಮೂಲಕ ಜನರ ಸದ್ಯದ ಆತಂಕ ದೂರವಾದಂತಾಗಿದೆ.
ದಕ್ಷಿಣ ಕನ್ನಡದಲ್ಲಿ ಈಗ ಒಟ್ಟು 12 ಮಂದಿ ಕೊರೋಣಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಉಪ್ಪಿನಂಗಡಿಯ, ವಕೀಲ ಹಾಗೂ ದೆಹಲಿ ರಿಟರ್ನ್ಡ್ ದಂಪತಿಗಳು ಕೂಡಾ ಸೇರಿದ್ದಾರೆ. ಅವರಿಬ್ಬರೂ ಗುಣ ಮುಖರಾಗಿದ್ದು ಇನ್ನೊಂದೆರಡು ದಿನಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಈಗಿರುವ 12ರಲ್ಲಿ 10 ಮಂದಿಯ ಆರೋಗ್ಯ ಸ್ಥಿರವಾಗಿದೆ. ಉಳಿದಿಬ್ಬರು ಇತರ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದು ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
ಇಲ್ಲಿಯತನಕ 2569 ಮಂದಿಯನ್ನು ಫಿವರ್ ಸೆಂಟರ್ ಗಳಲ್ಲಿ ಪರೀಕ್ಷೆ ನಡೆಸಿದ್ದಾರೆ.