” ನನ್ನನ್ನು ಸೇನೆಗೆ ಸೇರಿಸಿಕೊಳ್ಳಿ, ಇಲ್ಲಾ ಮಗಳನ್ನು ಕಳಿಸುತ್ತೇನೆ ” ಹುತಾತ್ಮ ಯೋಧನ ಪತ್ನಿಯ ಆಕ್ರೋಶದ ಬೇಡಿಕೆ
” ನನ್ನನ್ನು ಸೇನೆಗೆ ಸೇರಿಸಿಕೊಳ್ಳಿ, ಇಲ್ಲಾ ಮಗಳನ್ನು ಕಳಿಸುತ್ತೇನೆ ” ಹುತಾತ್ಮ ಯೋಧನ ಪತ್ನಿ ಈ ಮಾತು ಹೇಳುತ್ತಿದ್ದರೆ ಎಂತಹಾ ವ್ಯಕ್ತಿಯ ಎದೆಯಲ್ಲೂ ಒಂದು ಕ್ಷಣ ಆಕ್ರೋಶದ ರೋಮಾಂಚನ. ಹೌದು, ಇವತ್ತು ಈ ರೀತಿ ಹೇಳುವ ಮೂಲಕ ಪಲ್ಲವಿ ಶರ್ಮಾ ಎಂಬ ಭಾರತೀಯ ಯೋಧನ ಪತ್ನಿ ನಮ್ಮ ಯೋಧರಿಗೆ ಮತ್ತವರ ಕುಟುಂಬಕ್ಕೆ ಸ್ಪೂರ್ತಿ ತುಂಬಿದ್ದಾರೆ.
ಮೊನ್ನೆ, ಮೇ 2 ರಂದು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾದಲ್ಲಿ ಭಾರತದ 5 ಜನ ಯೋಧರು ಪ್ರಾಣ ತ್ಯಾಗ ಮಾಡಿದ್ದರು. ಅವರಲ್ಲಿ ಒಬ್ಬರಾಗಿರುವ ಕರ್ನಲ್ ಅಶುತೋಶ್ ಶರ್ಮಾ ಎಂಬ ವೀರ ಯೋಧರ ಪತ್ನಿ ಈ ಪಲ್ಲವಿ ಶರ್ಮಾ.
ಪಲ್ಲವಿ ಶರ್ಮಾ ಈಗ ದೇಶ ಸೇವೆ ಮಾಡಲು ಭಾರತೀಯ ಸೈನ್ಯ ಸೇರುತ್ತೇನೆ ಎಂದು ಹೇಳಿದ್ದಾರೆ. ಒಂದು ವೇಳೆ ವಯಸ್ಸಿನ ಕಾರಣಕ್ಕೆ ನನಗೆ ಸೈನ್ಯ ಸೇರಲು ಸಾಧ್ಯವಾಗದಿದ್ದರೆ ನನ್ನ ಮಗಳನ್ನು ಸೈನ್ಯಕ್ಕೆ ಸೇರಿಸುತ್ತೇನೆ ಎಂದು ಶಪಥ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮಿನಿಷ್ಟ್ರಿಯೊಂದಿಗೂ ಮಾತನಾಡುತ್ತೇನೆ ಎಂದವರು ಹೇಳಿದ್ದಾರೆ.
ನಾನು ಸ್ವಯಂ ಪ್ರೇರಿತವಾಗಿ ಸೈನ್ಯ ಸೇರಲು ಬಯಸುತ್ತಿದ್ದೇನೆ. ಸಚಿವಾಲಯ ಅನುಮತಿ ನೀಡಿದರೆ ಸೈನ್ಯದ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಅಭಿಮಾನದ, ಸ್ಫೂರ್ತಿಯ ಮಾತುಗಳನ್ನು ಆಡಿದ್ದಾರೆ.
ಶರ್ಮಾ ಅವರಿಗೆ 11 ವರ್ಷದ ಮಗಳಿದ್ದು, ಆ ಉತ್ತರ ಪ್ರದೇಶ ಮೂಲದ ಕುಟುಂಬ ಜೈಪುರದಲ್ಲಿ ವಾಸವಾಗಿದ್ದಾರೆ. ಶರ್ಮಾ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ನಡೆದಿತ್ತು.
ಕರ್ನಲ್ ಅಶುತೋಶ್ ಶರ್ಮಾ ಅವರು ರಾಷ್ಟ್ರೀಯ ರೈಫಲ್ಸ್ 21 ನ ನೇತೃತ್ವ ವಹಿಸಿದ್ದರು. ಲಷ್ಕರ್ ಇ ತೋಯ್ಬಾ ಸಂಘಟನೆಯ ಉಗ್ರರು ಸ್ಥಳೀಯರನ್ನು ಒತ್ತೆ ಇಟ್ಟುಕೊಂಡಿದ್ದರು.
ಮೇ 2 ರಂದು ಒತ್ತೆ ಇಟ್ಟುಕೊಂಡವರನ್ನು ಉಗ್ರರ ಕೈನಿಂದ ಬಿಡಿಸಲು ಜಮ್ಮು ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ವೀರ ಯೋಧ ದೇಶಕ್ಕಾಗಿ ಪ್ರಾಣ ನೀಡಿದ್ದರು.