ಎರಡು ಗ್ರಾ.ಪಂ.ಗೊಂದು ರೈತಮಿತ್ರರ ನೇರ ನೇಮಕ | ಹಡೀಲು ಬಿಟ್ಟ ಜಮೀನಿನ ಸಮೀಕ್ಷೆಗೆ ಸೂಚನೆ – ಮಂಗಳೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಾಯ ಮಾಡದೇ ಬೀಳು ಬಿಟ್ಟಿರುವ ಕೃಷಿ ಜಮೀನುಗಳ ಕುರಿತು ಸಮೀಕ್ಷೆ ನಡೆಸಿ, ಸಮಗ್ರ ವರದಿ ಸಲ್ಲಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಜಿಲ್ಲೆಯಲ್ಲಿನ ರೈತರ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಬೀಳು ಬಿಟ್ಟಿರುವ ಜಮೀನುಗಳ ಮಾಲೀಕರಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಬ್ಸಿಡಿ, ನೆರವು ಪಾವತಿ ಆಗುತ್ತಿರುವ ಕುರಿತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗಮನ ಸೆಳೆದರು.
ಈ ಕುರಿತು ಅಧಿಕಾರಿಗಳ ಬಳಿ ಮಾಹಿತಿ ಕೇಳಿದ ಸಚಿವರು, ‘ಎಲ್ಲ ಕೃಷಿ ಜಮೀನುಗಳ ಮಾಹಿತಿ ಸಂಗ್ರಹಿಸಿ. ಜಮೀನು ಬೀಳು ಬಿಟ್ಟಿರುವ ರೈತರಿಗೆ ಸಬ್ಸಿಡಿ ಪಾವತಿ ಆಗದಂತೆ ಎಚ್ಚರ ವಹಿಸಿ’ ಎಂದು ಸೂಚಿಸಿದರು.
ಬೀಳು ಬಿಟ್ಟಿರುವ ಜಮೀನುಗಳಲ್ಲಿ ಸಹಕಾರಿ ಪದ್ಧತಿ ಅಥವಾ ಗುತ್ತಿಗೆ ಪದ್ಧತಿಯಲ್ಲಿ ಕೃಷಿ ನಡೆಸಲು ಅನುಮತಿ ನೀಡುವಂತೆ ಶಾಸಕ ರಾಜೇಶ್ ನಾಯ್ಕ್ ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಪಾಟೀಲ್ ಭರವಸೆ ನೀಡಿದರು.
ಕಿಸಾನ್ ಕ್ರೆಡಿಟ್ ಕಾರ್ಡ್ ನಲ್ಲಿ ರೈತರ ಸಮಗ್ರ ವಿವರ ದಾಖಲಿಸಿ, ಅದನ್ನು ಫ್ರೂಟ್ಸ್ ಆ್ಯಪ್ ಜೊತೆ ಜೋಡಿಸುವ ಯೋಜನೆ ಇದೆ. ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸುವ ಕೆಲಸ ಪ್ರಗತಿಯಲ್ಲಿದೆ. ಇದು ಜಾರಿಯಾದರೆ ರೈತರು ತಮ್ಮ ಕೆಲಸಗಳಿಗೆ ಜಮೀನಿನ ದಾಖಲೆಗಳನ್ನು ಹೊತ್ತು ತಿರುಗುವುದು ತಪ್ಪುತ್ತದೆ ಎಂದು ಸಚಿವರು ಹೇಳಿದರು.
ಪ್ರತಿ ಎರಡು ಗ್ರಾಮ ಪಂಚಾಯಿತಿಗಳಿಗೆ ಒಬ್ಬರಂತೆ 2,236 ರೈತ ಮಿತ್ರರ ನೇರ ನೇಮಕಾತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಶೇಕಡ 85ರಷ್ಟು ಹುದ್ದೆಗಳನ್ನು ಕೃಷಿ ವಿಜ್ಞಾನದಲ್ಲಿ ಬಿಎಸ್.ಸಿ ಮತ್ತು ಡಿಪ್ಲೊಮಾ ಮಾಡಿದವರು ಹಾಗೂ ಶೇ 15ರಷ್ಟು ಹುದ್ದೆಗಳನ್ನು ಕೃಷಿ ವಿಜ್ಞಾನದಲ್ಲಿ ಪದವಿ ಪಡೆದವರಿಗೆ ನೀಡಲಾಗುವುದು ಎಂದರು.
ಬಜೆಟ್ ಘೋಷಣೆಯಂತೆ 742 ಮೊಬೈಲ್ ಕೃಷಿ ಹೆಲ್ತ್ ಕ್ಲಿನಿಕ್ ಆರಂಭಕ್ಕೆ ಪ್ರಕ್ರಿಯೆ ನಡೆದಿದೆ. ಶೀಘ್ರದಲ್ಲೇ ರೈತ ಸಂಪರ್ಕ ಕೇಂದ್ರಗಳಿಗೆ ಮೊಬೈಲ್ ಹೆಲ್ತ್ ಕ್ಲಿನಿಕ್ ಹಸ್ತಾಂತರ ಮಾಡಲಾಗುವುದು ಎಂದರು.
ಸಂಸದ ನಳಿನ್ ಕುಮಾರ್, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್,ಜಿಲ್ಲೆಯ ಶಾಸಕರು,ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.