ವೈನ್ ಶಾಪ್ ನಿಂದ ನೇರ ರಿಪೋರ್ಟ್ | ಶರಾಬಿನಂಗಡಿಯ ಸನ್ಮಿತ್ರರ ಬಗ್ಗೆ ಒಂದಿಷ್ಟು !!
ಲಾಕ್ ಡೌನ್ 2.0 ಮುಗಿದಿದೆ. ಲಾಕ್ ಡೌನ್ ತ್ರೀ ಪಾಯಿಂಟ್ ಝೀರೋ ಶುರುವಾಗಿದೆ. ಜನಜೀವನ ಸಹಜ ಸ್ಥಿತಿಯತ್ತ ಮರಳಲು ಇವತ್ತು ಮೊದಲ ಟ್ರಯಲ್ ಡೇ !
ಜನ ಎಲ್ಲೆಡೆ ಹೊರಬರಲಾರಭಿಸಿದ್ದಾರೆ. ದಿನಸಿ, ತರಕಾರಿ ಮತ್ತು ಔಷಧ ಮುಂತಾದ ಅಗತ್ಯ ವಸ್ತುಗಳಿಗೆ ಏನೂ ಸಮಸ್ಯೆ ಹಿಂದೆಯೂ ಇರಲಿಲ್ಲ, ಮುಂದೂ ಆ ಸಮಸ್ಯೆ ಇರುವುದಿಲ್ಲ.
ರೈಲು, ಮೆಟ್ರೋ, ವಿಮಾನ ಸಂಚಾರ ಇರಲ್ಲ. ಅಂತರ್ ರಾಜ್ಯಗಳ ನಡುವೆ ಬಸ್ ಸಂಚಾರ ಇರಲ್ಲ. ಶಾಲೆ ಕಾಲೇಜು, ದೇಗುಲ, ಆತಿಥ್ಯ ಸೇವೆ ಇರಲ್ಲ. ಥಿಯೇಟರ್, ಶಾಪಿಂಗ್ ಮಾಲ್, ಜಿಮ್ ಬಾರ್ ಅಂಡ್ ರೆಸ್ಟೋರೆಂಟ್ ಗಳು ಇರುವುದಿಲ್ಲ.
ಇವೆಲ್ಲ ಮಾಮೂಲಿ ಸುದ್ದಿಗಳೇ.
ಇವನ್ನೆಲ್ಲ ಹೊರತು ಪಡಿಸಿ ನೋಡಿದರೆ, ಇವತ್ತು ಮದ್ಯಪ್ರಿಯರಿಗೆ ( ಕುಡುಕರಿಗೆ ಅಲ್ಲ) ಸಂಭ್ರಮ ಆಚರಿಸುವ ದಿನ. ಪ್ರೊಫೆಷನಲ್ ಕುಡುಕರೇನೋ ತಮ್ಮ ಮಾಲು ತಾವು ಹುಟ್ಟಿಸಿಕೊಳ್ಳುವ ಕೆಪ್ಯಾಸಿಟಿ ಇರುವವರು. ಅವರ ಬಳಿ ಯಾವತ್ತಿಗೂ ಒಂದು ಆಲ್ಟರ್ನೇಟ್ ಪ್ಲಾನ್ ಇದ್ದೇ ಇರುತ್ತದೆ. ಆದರೂ ಈ ಬಾರಿ 45 ದಿನಗಳಷ್ಟು ದೀರ್ಘ ಕಾಲ ಲಾಕ್ಡೌನ್ ಅನುಭವಿಸಿದ ಮದ್ಯಪ್ರಿಯರು ಅಕ್ಷರಶ: ಕಂಗಾಲಾಗಿ ಹೋಗಿದ್ದರು. ತಮಗಿರುವ ಬದಲಿ ವ್ಯವಸ್ಥೆಯಲ್ಲಿ ಅವರಿಗೆ ಸಾಕಷ್ಟು ದೊರೆಯುತ್ತಿರಲಿಲ್ಲ. ಮತ್ತು ಅದು ತಮ್ಮ ಕೊಳ್ಳುವ ಸಾಮರ್ಥ್ಯವನ್ನು ಮೀರಿದ್ದ ಸಂಗತಿಯಾಗಿತ್ತು!
ಇವತ್ತು ಕರ್ನಾಟಕದಾದ್ಯಂತ ಮದ್ಯದಂಗಡಿಗಳನ್ನು ತೆರೆದಿದ್ದು ಅವರಿಗೆ ಬಹುದೊಡ್ಡ ರಿಲೀಫ್. ಮನೆಯಿಂದ ಹೊರಟ ಅವರೆಲ್ಲರ ಮುಖದಲ್ಲೂ ಕುಸಿಯೋ ಕುಸಿ. ಅವರೆಲ್ಲ ಬಿರುಸಿನಿಂದ ಪೇಟೆಯತ್ತ ನಡೆದಿದ್ದಾರೆ. ಅವರ ನಡಿಗೆಯಲ್ಲಿ ವೇಗ. ಮನಸ್ಸಿನಲ್ಲಿ ಆವೇಗ. ಗುರಿಯಲ್ಲಿ ಖಚಿತತೆ !
ಇಲ್ಲಿ ನೋಡಿ ಉಜಿರೆಯ ‘ ಜುಗುಲ್ ವೈನ್ ‘ ಎಂಬ ಮಾದಕ ಹೆಸರಿನ ಮದ್ಯದಂಗಡಿಯ ಮುಂದೆ ಶ್ರದ್ಧೆಯಿಂದ ನಿಂತ ಜನರು. ಎಲ್ಲರ ಮುಖದಲ್ಲಿಯೂ ಮಾಸ್ಕ್ ಇದೆ. ಮಾಸ್ತಿ ನ ಒಳಗಡೆ ಪ್ರತಿಯೊಬ್ಬರೂ ಮುಗುಳ್ನಗುತ್ತಿದ್ದಾರೆ.
ಇವತ್ತು ವೈನ್ ಶಾಪ್ ಗಳ ಮುಂದೆ ಹಾಕಲ್ಪಟ್ಟ ಸಾಮಾಜಿಕ ಅಂತರ ನಿರ್ಮಿಸುವ ಬಾಕ್ಸ್ ಗಳ ಮಧ್ಯದಲ್ಲಿ ಶ್ರದ್ಧೆಯಿಂದ ಮದ್ಯಪ್ರಿಯರು ಕಂಡು ಬರುತ್ತಿದ್ದಾರೆ. ಈಗ ಅದೇನೋ ಸರಕಾರ ದೊಡ್ಡ ಮನಸ್ಸು ಮಾಡಿಕೊಂಡು ರೆಡ್ ಝೋನ್ ಸಹಿತ ಎಲ್ಲಾ ಕಡೆಯೂ ಮಧ್ಯ ವಿತರಿಸಲು ಅನುಮತಿ ನೀಡಿದೆ. ಒಂದೊಮ್ಮೆ ನಾವುಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ, ಅವಸರಕ್ಕೆ ಬಿದ್ದರೆ ಮತ್ತೆ ಮದ್ಯ ಬಂದ್ ಮಾಡಿದರೆ ಎಂಬ ಆತಂಕ ಮದ್ಯಪ್ರಿಯರದು. ಅದಕ್ಕೇ ಈ ಮಟ್ಟಿಗಿನ ಶಿಸ್ತು, ಸಂಯಮ ಎಲ್ಲಾ !
ಇದೇ ತರಹದ ವಾತಾವರಣ ಪುತ್ತೂರು ಸುಳ್ಯ ಬೆಳ್ತಂಗಡಿ ಕಡಬ ಸುಬ್ರಹ್ಮಣ್ಯ ಮಂಗಳೂರು ಉಡುಪಿ ಮತ್ತಿತರ ಕಡೆಗಳಲ್ಲೂ ಕಂಡುಬಂದಿದೆ. ಊರು ಪಟ್ಟಣ ಜನರು ಬೇರೆ ಬೇರೆಯಾಗಿರಬಹುದು. ಜನರ ಮನಸ್ಥಿತಿ ಬಹುಪಾಲು ಒಂದೇ !
ಈಗ ಮದ್ಯ ಕೊಳ್ಳುವಾಗ ಜನರೇನೋ ಸಾಮಾಜಿಕ
ಪಾಲಿಸುತ್ತಿರುವುದು ಕಂಡುಬರುತ್ತಿದೆ. ಆದರೆ ಒಂದಷ್ಟು ದ್ರವ ಗಂಟಲೊಳಕ್ಕೆ ಇಳಿದರೆ ಆಗ ಇದೇ ಥರದ ಪ್ರಜ್ಞೆ ಅವರಲ್ಲಿ ಇರುತ್ತದೆಯಾ ಎನ್ನುವುದು ಕಾದು ನೋಡಬೇಕಷ್ಟೇ.
ಇದೀಗ ಬಂದ ಸುದ್ದಿಯ ಪ್ರಕಾರ ಜನರು ಈಗಾಗಲೇ ಮೊದಲ ಹಂತದ ಖರೀದಿಯನ್ನು ಮಾಡಿದ್ದು ತಮ್ಮ ಮನೆಯ ಪಕ್ಕದ ರಬ್ಬರ್ ತೋಟಗಳ ನೆರಳಿನ ಆಶ್ರಯ ಪಡೆಯುತ್ತಿದ್ದಾರೆ. ಮನೆಯಿಂದ ಅಡಗಿಸಿ ತಂದ ಬಾಟಲಿಯ ನೀರನ್ನು ಮತ್ತು ಬಣ್ಣದ ಮಾದಕ ದ್ರವವನ್ನು ಪ್ಲಾಸ್ಟಿಕ್ ಗ್ಲಾಸಿಗೆ ಹುಯ್ದುಕೊಂಡು ” ಹಾ ಅಂತ ಸೌಂಡ್ ಮಾಡಿ ” ವಾ ಕೈಪೆ ಮಾರಾಯ ” ಎಂದು ಗೆಳೆಯನನ್ನೊಮ್ಮೆ ವಿಚಿತ್ರವಾಗಿ ನೋಡಿ ಆತ ಮನೆಯತ್ತ ಹೆಜ್ಜೆ ಹಾಕಿದ್ದಾನೆ. ಬ್ಯಾಗಿನೊಳಗೆ ಎರಡು ವಾರಕ್ಕಾಗುವಷ್ಟು ಮಾಲು ಬೆಚ್ಚಗೆ ಕುಳಿತಿದೆ.
ಇಷ್ಟು ದಿನ ಮನೆಯಲ್ಲಿ ಸುದ್ದಿ ಸುರಾನ ಇಲ್ಲದೆ ತಲೆ ಕಂತ ಹಾಕಿ ಕಳ್ಳಬೆಕ್ಕಿನಂತೆ ಓಡಾಡುತ್ತಾ ಇದ್ದ. ಆತನನ್ನು ಈ ನಲ್ವತ್ತೈದು ದಿನಗಳಲ್ಲಿ ಗಮನಿಸುತ್ತಾ ಬಂದಿದ್ದ ಆತನ ಹೆಂಡತಿ ಮೀಸೆಯಿಲ್ಲದ ಮುಖದ ಒಳಗೇ ಆತನ ಪಾಡು ನೋಡಿ ನಗುತ್ತಿದ್ದಳು. ಇಷ್ಟು ದಿನ ನೆಮ್ಮದಿಯಾಗಿದ್ದ ಮನೆಯಲ್ಲಿ ಆಕೆ ಯಜಮಾನಿ. ಮುಂದಕ್ಕೆ…..? ನಿಮ್ಮ ಊಹೆಗೆ ಬಿಟ್ಟಿದ್ದು…….!!
ಸುದರ್ಶನ್ ಬಿ. ಪ್ರವೀಣ್, ಬೆಳಾಲು