ನಾಡೋಜ ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್ ಅಸ್ತಂಗತ
ನವ್ಯ ಕಾವ್ಯ ಪರಂಪರೆಯ ನಿತ್ಯೋತ್ಸವದ ಕವಿ ನಿಸಾರ್ ಅಹಮದ್ ಅವರು ನಿಧನರಾಗಿದ್ದಾರೆ. ಕನ್ನಡ ಸಾಹಿತ್ಯದ ತಾರೆಯೊಂದು ಅಸ್ತಂಗತವಾಗಿದೆ.
ಮೂಲತ: ಬೆಂಗಳೂರಿನ ದೇವನಹಳ್ಳಿ ಯಲ್ಲಿ ಜನಿಸಿದ ನಿಸಾರ್ ಅಹಮದ್ ಅವರಿಗೆ 84 ವರ್ಷ ವಯಸ್ಸಾಗಿತ್ತು.
ಪ್ರೊ. ಕೆ.ಎಸ್.ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ 1936 ರ ಫೆಬ್ರುವರಿ 5ರಂದು ಜನಿಸಿದರು. 1959 ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು. ವೃತ್ತಿಯಲ್ಲಿ ವಿದ್ಯಾನಗರ ಜೊತೆಗಿತ್ತು, ಪ್ರವೃತ್ತಿಯಲ್ಲಿ ಸಾಹಿತ್ಯ ಅವರ ಸಂಗಾತಿಯಾಗಿತ್ತು.
ಪ್ರೊ.ಕೆ.ಎಸ್.ನಿಸಾರ್ ಅಹಮದ್ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಶ್ರೀ ಅಹಮದ್ ರವರ ಪೂರ್ಣ ಹೆಸರು ‘ಕೊಕ್ಕರೆ ಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್’ ಎಂದು.
ಗದ್ಯ ಮತ್ತು ಕವನ ಸಾಹಿತ್ಯಗಳನ್ನು ಪಳಗಿದ್ದ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು ಒಟ್ಟು ಹದಿನೇಳು ಕವನ ಸಂಕಲನಗಳನ್ನು ಬರೆದಿದ್ದಾರೆ.
ಆದರೆ ಕಾವ್ಯ ಅವರ ಆಯ್ಕೆಯಾಗಿತ್ತು. ಅವರು ನಿತ್ಯೋತ್ಸವದ ಕವಿ ಎಂದೇ ಜನಸಾಮಾನ್ಯರಿಗೆ ಪರಿಚಿತ. ಮನಸು ಗಾಂಧಿಬಜಾರು, ನೆನೆದವರ ಮನದಲ್ಲಿ, ನವೋಲ್ಲಾಸ, ನಿತ್ಯೋತ್ಸವ ಅವರ ಪ್ರಸಿದ್ಧ ಕೃತಿಗಳು
ಅಷ್ಟೇ ಅಲ್ಲದೆ ಇಂಗ್ಲೀಷಿನಿಂದ ಹಲವಾರು ಕೃತಿಗಳನ್ನು ಅನುವಾದಿಸಿದ್ದಾರೆ. ಷೇಕ್ಸ್ ಪಿಯರ್ ನ ಓತೆಲೋ ನಾಟಕವನ್ನು ಕನ್ನಡೀಕರಿಸಿದ್ದಾರೆ. ಇದು ಬರಿ-ಬೆಳಗಲ್ಲೋ ಅಣ್ಣಾ, ಅಚ್ಚು-ಮೆಚ್ಚು ಇವರ ಮತ್ತೆ ಕೆಲವು ಗದ್ಯಕೃತಿಗಳು. ಅವರ ಎಷ್ಟೋ ಕವಿತೆಗಳು ಸುಗಮ ಸಂಗೀತ ಗಾಯನಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿವೆ.
ಅವರಿಗೆ ನಾಡಿನ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ನಾಡೋಜ ಪ್ರಶಸ್ತಿ ಮತ್ತು ಇನ್ನೂ ಹಲವಾರು ಗೌರವಗಳು ಸಂದಿವೆ.
ಇವರು ಕುವೆಂಪು ಬೇಂದ್ರೆ ಮುಂತಾದ ದಿಗ್ಗಜರೊಂದಿಗೆ ಸಂಪರ್ಕವಿಟ್ಟುಕೊಂಡು ಬೆಳೆದವರು. ಇವರ ನಿಧನದ ಮೂಲಕ ನವ್ಯ ಕಾವ್ಯ ನವ್ಯೋತ್ತರ ಕಾವ್ಯ ಪರಂಪರೆಯ ಬೆಸೆದುಕೊಂಡ ಕೊಂಡಿಯೊಂದು ಕಳಚಿದಂತಾಗಿದೆ. ಆ ಮೂಲಕ ಒಟ್ಟಾರೆ ಕನ್ನಡ ಸಾಹಿತ್ಯ ಬಡವಾಗಿದೆ.
ಅವರ ಪ್ರಸಿದ್ಧ ಕವನ ಸಂಕಲನಗಳು
‘ಮನಸು ಗಾಂಧಿ ಬಜಾರು’
‘ನಿತ್ಯೋತ್ಸವ’
‘ನೆನದವರ ಮನದಲ್ಲಿ’
‘ನಾನೆಂಬ ಪರಕೀಯ’
‘ಅನಾಮಿಕ ಆಂಗ್ಲರು’
‘ಸುಮಹೂರ್ತ’
‘ಸಂಜೆ ಐದರ ಮಳೆ’
‘ಸ್ವಯಂ ಸೇವೆಯ ಗಿಳಿಗಳು’
ಗದ್ಯ ಸಾಹಿತ್ಯ
‘ಅಚ್ಚುಮೆಚ್ಚು’
‘ಇದು ಬರಿ ಬೆಡಗಲ್ಲೊ ಅಣ್ಣ’
‘ಷೇಕ್ಸ್ ಪಿಯರ್‍ನ ‘ಒಥೆಲ್ಲೊ’ ಹಾಗೂ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
ಪ್ರಶಸ್ತಿ ಪುರಸ್ಕಾರಗಳು
೨೦೦೬ ರ ಮಾಸ್ತಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಗೊರೂರು ಪ್ರಶಸ್ತಿ
ಅನಕೃ ಪ್ರಶಸ್ತಿ
ಕೆಂಪೇಗೌಡ ಪ್ರಶಸ್ತಿ
ಪಂಪ ಪ್ರಶಸ್ತಿ
೧೯೮೧ ರ ರಾಜ್ಯೋತ್ಸವ ಪ್ರಶಸ್ತಿ
೨೦೦೩ ರ ನಾಡೋಜ ಪ್ರಶಸ್ತಿ
೨೦೦೬ ರ ಅರಸು ಪ್ರಶಸ್ತಿ
೨೦೦೬ ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ,’೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ’ರಾಗಿ ಆಯ್ಕೆಯಾಗಿದ್ದರು.