ಅಕ್ಷರ ಜಾತ್ರೆಯೊಳಗಿನ ಜ್ಞಾನ ದರ್ಶನ ಹೇಗೆ ?

ನಿನ್ನೆ ಯಾವುದೋ ಟೆಂಕ್ಷನ್ ನಲ್ಲಿ ವಾಟ್ಸಾಪ್ ನೋಡುತ್ತಾ ಕುಳಿತಿದ್ದವನಿಗೆ ಹಾಯ್! ಅನ್ನೋ ನಾಮಕರಣವಿಲ್ಲದ ನಂಬರಿನಿಂದ ಬಂದ ಸಂದೇಶ ಹೊಸದೆನಿಸಿತು. ಸ್ನೇಹಿತರು ಹೆಚ್ಚಾಗಿ ಪದೇ ಪದೇ ನನ್ನನ್ನು ಮೂರ್ಖನನ್ನಾಗಿಸಿ ಹುಚ್ಚು ಸಂತೋಷ ಪಡುತ್ತಿದ್ದುದರ ಅರಿವಿದ್ದುದರಿಂದ ಹೊಸ ಸಂಖ್ಯೆಗಳಿಗೆ ಉತ್ತರಿಸಲು ಯಾಕೋ ಒಂಥರಾ ದಿಗಿಲು.‌ ಆದರೂ ಯಾರೋ ಸಹಾಯ ಕೇಳಲೂ ಆಗಿರಬಹುದು. ರಿಪ್ಲೈ ಮಾಡು ಅನ್ನೋ ಮನಸ್ಸಿನ ಮಹಾರಾಜನ ಆಣತಿಯ ಮೇರೆಗೆ ಉತ್ತರಿಸುವಂತವನಾದೆ.
“ಅಣ್ಣಾ ನಾನೂ ನಿಮ್ಮ ತರಹವೇ ಮಾತನಾಡಬೇಕು, ಬರೀಬೇಕು” ಅಂತ ಅತ್ತ ಕಡೆಯಿಂದ ಬಂತು.
ಸಹಜವಾಗಿ ಕಿತಾಪತಿಯ ಮನಸ್ಸು ಈ ಸಂಧರ್ಭಗಳಲ್ಲಿ ತುಸು ಹೆಚ್ಚು ಓಡುತ್ತದೆ.
ನಿಮಗೆ ವಯಸ್ಸೆಷ್ಟು ಕೇಳಿದೆ.
”ಇಪ್ಪತ್ತು ಅಣ್ಣ”
“ಇಷ್ಟು ವರ್ಷ ನೀವು ಮಾತನಾಡಲು ಕಲಿಯಲೇ ಇಲ್ವಾ? ಶಾಲೆ-ಕಾಲೇಜು ಮೆಟ್ಟಲು ಹತ್ತಿಲ್ವಾ ಕೇಳಿದೆ”
ಆತ್ಮೀಯತೆಗೆ ಅದೊಂದು ಹಾಸ್ಯ ಸಾಕೆನಿಸಿತು. ಒಂದಿಷ್ಟು ಇಮೋಜಿಗಳು ವಾಟ್ಸಾಪ್ ಗೋಡೆಯ ತುಂಬಾ ಹರಿದಾಡಿದವು.
“ಸ್ವಲ್ಪ ಹೊತ್ತಿನ ಬಳಿಕ ಅವರೇ ಅಣ್ಣಾ ನೀವು ಹೆಚ್ಚು ಓದ್ತೀರಾ?” ಕೇಳಿದ್ರು.
ಹಾ ಅವರು ಕೇಳಿದಾಗ ನಾನಂತೂ ಉತ್ತರಿಸಿದೆ. ಆದರೆ ಆ ಉತ್ತರ ನಿಮ್ಮಲ್ಲೂ ಅನೇಕರಿಗೆ ಪ್ರಯೋಜನಕ್ಕೆ ಬರಬಹುದೆಂದು ಈ ಲೇಖನ ಬರೆಯುತ್ತಿದ್ದೇನೆ.

ನಾನು ಓದಲು ಶುರು ಮಾಡಿದ್ದು ಚಿಮಿಣಿ ದೀಪದ ಮಬ್ಬು ಬೆಳಕಿನಲ್ಲಿ. ಇವತ್ತಿಗೂ ದೀಪದ ಬೆಳಕಿನಲ್ಲಿ ಓದೋದೆ ನನಗೆ ಅಭ್ಯಾಸ. ಹಾಗೆ ಓದಿದ್ದೇ ಹೆಚ್ಚು ನೆನಪಿನಲ್ಲುಳಿಯೋದು ಕೂಡ.
ಈ ಓದು ಒಂದು ತರಹಾ ತಪಸ್ಸಿದ್ದ ಹಾಗೆ ಕಣ್ರಿ. ಅಕ್ಷರ ಜಾತ್ರೆಯೊಳಗೆ ಹೊಕ್ಕಾಗಲೂ ಬಣ್ಣದ ಬುಗುರಿಗೆ, ಆಟಿಕೆಗಳಿಗೆ ಮಾರು ಹೋಗದೆ ತನಗೆ ಬೇಕಾದ ದರ್ಶನಕ್ಕೆ, ಜ್ಞಾನದ ಹಸಿವಿಗೆ ಮಸ್ತಕದ ಪುಟಗಳೊಳಗೆ ದಾಖಲಿಸುತ್ತಾ ಸಾಗುವುದೆ ಓದು.
ಮಗ್ನರಾಗಿ ಓದುವುದು ಸಹಜವಾಗಿ ಎಲ್ಲರಿಗೂ ಕರಗತವಾದ ವಿಧ್ಯೆಯಲ್ಲ…
ಅದಕ್ಕೊಂದು ಸ್ವಾರಸ್ಯಕರ ಘಟನೆ ಹೇಳ್ತೀನಿ ಕೇಳಿ.

ಬಾಲ್ಯದಲ್ಲಿ ಒಮ್ಮೆ ಚಿಮಿಣಿ ದೀಪದಡಿಯಲ್ಲಿ ಓದುತ್ತಿದ್ದಾಗ ಮೈಮರೆತಿದ್ದೆ. ಆಗೆಲ್ಲಾ ಈ ಚಿತ್ರ ಕಥೆಗಳ ಸಂಚಿಕೆಗಳು ಹಿಡಿಸುತ್ತಿದ್ದ ಹುಚ್ಚು ಕಾಡಿ-ಬೇಡಿ ಐದಾರು ರುಪಾಯಿ ಚಿಲ್ಲರೆ ಹೊಂದಿಸಿ ತಿಂಗಳಿಗೆರಡು ಬರುತ್ತಿದ್ದ ತುಂತುರು, ಬಾಲಮಂಗಳ, ತಿಂಗಳಿಗೊಂದು ಬರುತ್ತಿದ್ದ ಚಂದಮಾಮ, ಚಂಪಕ ಇವೆಲ್ಲಾ ಏನೋ ಸಂಚಲನ ಉಂಟು ಮಾಡುತ್ತಿದ್ದ ಬರಹಗಳು. ಚಿತ್ರಕಥೆಗಳಂತೂ ಬೇರೊಂದು ಲೋಕಕ್ಕೆ ವರ್ಗಾಯಿಸ ಬಿಡುತ್ತಿದ್ದವು. ಹೀಗೆ ಓದುತ್ತಾ ಓದುತ್ತಾ ಮೈಮರೆತಿದ್ದ ನಾನು ಉರಿಯುತ್ತಿದ್ದ ದೀಪಕ್ಕೆ ಅದ್ಯಾವಾಗ ತಲೆ ಕೊಟ್ಟಿದ್ದೆನೋ ಗೊತ್ತಿಲ್ಲ. ಭಗ್ಗನೆ ತಲೆಗೆ ಬೆಂಕಿ ಹಿಡಿದಾಗಲೇ ಅರಿವಾಗಿದ್ದು. ಅಷ್ಟು ಓದಿನಲ್ಲಿ ಮುಳುಗಿರುತ್ತಿದ್ದ ಕಾಲ.
ಮನೆಗೆ ವಿದ್ಯುತ್ ದೀಪ ಬಂದ ನಂತರ ಓದುವ ಮನಸ್ಸಾಗಿಲ್ಲವೆಂದಲ್ಲ. ಆದರೆ ಯಾಕೋ ಓದಿದ್ದು ನೆನಪಿನಲ್ಲುಳಿಯೋದು ದೀಪದ ಅಡಿಯಲ್ಲಿಯೇ
ಅದಕ್ಕೇ ಕೆಲವೊಮ್ನೆ ಎಲ್ಲವನ್ನೂ ಆರಿಸಿ ದೀಪ ಉರಿಸಿ ಕುಳಿತುಬಿಡುತ್ತೇನೆ. ದೀಪ ಉರಿದಂತೆಲ್ಲಾ ಚಿಂತನೆ ಹೆಚ್ಚುತ್ತದೆಯೆಂಬ ಮೌಢ್ಯದ ಸಾಲುಗಳು ( ! )ಎಲ್ಲೋ ಓದಿದ್ದು ತಲೆಯೊಳಗೆ ಹಾಗೆ ಕುಳಿತಿರಬೇಕು ನೋಡಿ. ಹಾಗಾಗತ್ತೆ.

ಇನ್ನು ನನ್ನ ಪ್ರಾಧ್ಯಾಪಕರ ಜೊತೆ ಇದನ್ನು ಚರ್ಚಿಸಿದರೆ ಬೇರೆಯದೇ ವ್ಯಾಖ್ಯಾನ ಕೊಟ್ಟು ಬಿಡುತ್ತಾರೆ.
ಓದಿಗೆ ಪೂರಕ ವಾತಾವರಣ ಬೇಕು ನಿಜ. ಹಾಗಂತ ಎಲ್ಲವೂ ದೊರಕುವಂತಿರಬಾರದು. ಸೋಫಾದ ಮೇಲೆ, ಮಂಚದ ಮೇಲೆ ಕುಳಿತು ಬೆನ್ನಿಗೆ ತಲೆದಿಂಬು ಹಚ್ಚಿ ಓದುತ್ತೇನೆಂದರೆ ಆತನಿಗೆ ನಿದ್ರೆ ಬರಬಹುದೇ ವಿನಃ ಓದಿದ್ದು ತಲೆಗೆ ಹತ್ತಲಾರದು ಎಂಬುದು ಅವರ ಒಮ್ಮತ. ಅದಕ್ಕೇ ಅಲ್ವೇ ನಮ್ಮ ಹಿರಿಯರು ಬೀಜದ ಮರದ ಗೆಲ್ಲಿನಲ್ಲೋ… ಹುಣಸೆ ಮರದ ಬೇರಿನ ಕೆಳಗೋ ಓದಲು ಕುಳಿತುಕೊಳ್ಳುತ್ತಿದ್ದದ್ದು. ಓದಲು ಕುಳಿತುಕೊಂಡಾಕ್ಷಣ ನಿದ್ರೆ ಬರುತ್ತದೆ ಅನ್ನುವವರು ಇದನ್ನು ಗಮನಿಸಿಕೊಳ್ಳಬಹುದು.

ನನ್ನ ಸ್ನೇಹಿತರೊಬ್ಬರಿಗೆ ಓದಲು ಕುಳಿತ ತಕ್ಷಣ ಹಸಿವಾಗುತ್ತದೆಯಂತೆ. ಅವರಿಗೆ ಮಾತ್ರವಲ್ಲ ನಮ್ಮೆಲ್ಲರಿಗೂ ಹಾಗನಿಸುತ್ತದೆ. ಓದಲು ಕುಳಿತವು ಹೊಟ್ಟೆ ತುಂಬಿಸಿಕೊಂಡು ಕುಳಿತರೆ ಆಕಳಿಕೆಯೇ ಹೆಚ್ಚು. ಅದಕ್ಕೆ ಕೆಲವರು ಪಕ್ಕದಲ್ಲಿ ಕಡಲೆಕಾಯಿ, ಬಿಸ್ಕತ್ತು, ಒಣದ್ರಾಕ್ಷಿ ಇತ್ಯಾದಿಗಳನ್ನು ಇಟ್ಟುಕೊಳ್ಳುವುದುಂಟು. ನನಗ್ಯಾಕೋ ಅವೆಲ್ಲಾ ತಿನ್ನುವ ಮನಸ್ಸಿದೆ. ಆದರೆ ಕೈ ಹಾಕುವ ನೆಪದಲ್ಲಿ ಅದುವೇ ನೆನಪಾಗಿ ನೆಪವಾಗುವುದು ಜಾಸ್ತಿ. ಹಾಗಾಗಿ ಅವುಗಳಿಂದ ಸದಾ ದೂರ.
ಓದುವಾಗ ಹೆಚ್ಚು ನೀರು ಕುಡಿದರೆ ಒಳ್ಳೆಯದಂತೆ. ಎಲ್ಲೋ ಓದಿದ್ದು. ಹಾಗಾಗಿ ಹತ್ತಿರವೊಂದು ನೀರಿನ ಬಾಟಲ್ ಇದ್ದೇ ಇರುತ್ತದೆ. ಬಾಯಾರಿಕೆಯಾಗೋದು ಕಡಿಮೆಯೇ ಆದರೂ ಅದರ ನೆಪದಲ್ಲಿ ಓಡಾಟ ತಪ್ಪುತ್ತದೆ.

ಕಾಲೇಜಿಗೆ ಬಹಳಷ್ಟು ಸಾರಿ ನಾನು ಬ್ಯಾಗು ಪುಸ್ತಕ ಹೊತ್ತೊಯ್ದಿದ್ದು ವಿರಳ. ಕೈಯಲ್ಲೊಂದು ಡೈರಿಯಾಡಿಸುತ್ತಾ ಕಾರಿಡಾರು ಸುತ್ತಿದ್ದೇ ಹೆಚ್ಚು. ಅನೇಕರು ಆ ಪುಸ್ತಕದಲ್ಲೇನಿದೆ ಅಂತ ತಲೆ ಕೆರೆದುಕೊಂಡು ನೋಡಿ ಅರ್ಥವಾಗದೆ ಕೈಗಿಟ್ಟಿದ್ದೂ ಇದೆ. ಪಾಪ ಅವರಿಗೆ ಹೇಗೆ ಗೊತ್ತಾಗಬೇಕು ನಾನು ಓದಿರುವ ಅಕ್ಷರಗಳು. ಅಷ್ಟು ಸರಳವಾಗು ಪಾಯಿಂಟ್ ಮಾಡಿಕೊಳ್ಳುವುದು ಅಭ್ಯಾಸ. ಪಾಯಿಂಟ್ ಮಾಡಿಕೊಳ್ಳೋದು ಬಹಳ ಮುಖ್ಯವೆನಿಸುವ ಅಂಶ. ಓದಿದ ಪುಸ್ತಕದಲ್ಲಿ ನಮಗ್ಯಾವುದು ಅತೀ ಮುಖ್ಯವೆನಿಸುತ್ತದೋ ಅದನ್ನು ನೋಟ್ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಇದು ಕೇವಲ ಓದಿಗೆ ಮಾತ್ರ ಸೀಮಿತವಲ್ಲ. ಯಾವುದೇ ಪ್ರವಚನಗಳಿಗೂ ಅನ್ವಯಿಸುವ ವಸ್ತು ಅಥವಾ ವಿಷಯ. ಪದೇ ಪದೇ ಪುಸ್ತಕಗಳು ದೊರೆಯುತ್ತವೆ. ಎಲ್ಲಾ ಸ್ಥಳಕ್ಕೂ ಹೊತ್ತೊಯ್ಯುವುದು ಕಷ್ಟವಾದಾಗ ಕೈಪಿಡಿ ಸಹಾಯಕ್ಕೆ ಬರುತ್ತದೆ. ಆದರೆ ನಾನು ಯಾವ ಪುಸ್ತಕದಲ್ಲಿ ಓದಿದ್ದೇನೆ ಅನ್ನುವ ನೆನಪು ಸದಾ ಇರಬೇಕಷ್ಟೆ. ಆಗ ಮಾತ್ರ ಕೈಪಿಡಿಯಲ್ಲೂ ಸರಿಯಾಗಿ ಹುಡುಕಬಹುದು. ಇಲ್ಲವಾದರೆ ಬರಿಯ ಕೈಪಿಡಿಯನ್ನೇ ಮತ್ತೆ ಮತ್ತೆ ಜಾಲಾಡುತ್ತಿರಬೇಕಷ್ಟೆ.

ಹೊಸ ಸ್ನೇಹಿತರಿಗೆ ನಾನು ಉತ್ತರಿಸಿದ್ದಿಷ್ಟೆ. ನಾನೇನು ಹೆಚ್ಚು ಓದಲಾರೆ. ಆದರೆ ಓದಿದ್ದನ್ನ ಮರೆಯಲಾರೆ. ಓದಿದ್ದನ್ನ ವಿಮರ್ಶಿಸುವುದು ಬಹಳ ಮುಖ್ಯ. ಯಾರೋ ಹೇಳಿದ್ದನ್ನ, ಕೇಳುಸಿಕೊಂಡಿದ್ದನ್ನ ನಮ್ಮ ಹಾದಿಯಲ್ಲಿ ಹೊಸ ಅಂಶಗಳನ್ನ ಸೇರಿಸಿ, ಪದಗಳೊಂದಿಗೆ ಆಟವಾಡಿ ಬಣ್ಣಿಸೋದು ಮಖ್ಯವಾಗುತ್ತದೆಯಾದರೂ ಓದು ಎಲ್ಲದಕ್ಕೂ ಮೂಲ. ಹಾಗಾಗಿ ಓದು ಎಂಬ ಸಾಗರದಲ್ಲಿ ಮುಳುಗುವಾಗ ಏನಾದರೂ ಪಡೆದೇ ಹೊರಬರುತ್ತೇವೆಂಬ ಹುಮ್ಮಸ್ಸಿನಲ್ಲಿ ಮುಳುಗಿ ಮೇಲೆದ್ದಾಗ ಅಮೂಲ್ಯ ರತ್ನಗಳು ಸಿಗದಿದ್ದರೂ ಒಂದು ಹಿಡಿ ಮರಳಾದರೂ ಸಿಗಬಹುದು.

ಸ್ವಸ್ತಿಕ್ ಕನ್ಯಾಡಿ

1 Comment
  1. swasthikkanyadi says

    Tq

Leave A Reply

Your email address will not be published.