ಸೀಲ್ ಮಾಡಿದ ಮದ್ಯದಂಗಡಿ ಗಳಿಂದ ಮದ್ಯ ಮಾಯ ಮಾಡಿದವರು ಯಾರೂ ? | ತನಿಖೆಗೆ ಡಿಸಿ ಸಿಂಧೂ ರೂಪೇಶ್ ಆದೇಶ
ಮಂಗಳೂರು : ಕೋವಿಡ್ 19 ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಮದ್ಯದಂಗಡಿಗಳನ್ನು, ಇತರ ವ್ಯವಹಾರಗಳನ್ನು ಬಂದ್ ಮಾಡಿದಂತೆ ಬಂದ್ ಮಾಡಲಾಗಿತ್ತು. ಆದರೆ ಅಲ್ಲಿ ಅವ್ಯವಹಾರಗಳು ನಡೆದಿರುವ ಬಗ್ಗೆ ಸುದ್ದಿಗಳ ಘಾಟು, ಮದ್ಯದ ವಾಸನೆಗಿಂತಲೂ ಜೋರಾಗಿ ಕೇಳಿಬರುತ್ತಿದೆ.
ಮದ್ಯ ಮಳಿಗೆಗಳಿಗೆ ಹೊರಗಿನಿಂದ ಬೀಗ ಜಡಿದಿದ್ದರೂ ಒಳಗಿದ್ದ ಮದ್ಯ ಒಂದೊಂದೇ ಮಂಗ ಮಾಯವಾಗಿರುವ ಬಗ್ಗೆ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿತ್ತು. ಸ್ವತಃ ವೈನ್ ಶಾಪ್ ಮಾಲಕರ ಜತೆ ಅಧಿಕಾರಿಗಳು ಕೂಡ ಈ ಅವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಹೋದಲ್ಲಿ ಒಳಗಿದ್ದ ಮದ್ಯ ಎಲ್ಲಿ ಹೋಯಿತು ಎಂಬ ಪ್ರಶ್ನೆ ಎಲ್ಲರನ್ನು ಕಾಡತೊಡಗಿದೆ.
ಎಲ್ಲಾ ಮದ್ಯ ಮಾರಾಟ ಮಳಿಗೆಗಳನ್ನು ಬೀಗ ಮುದ್ರೆಗೊಳಿಸಿದ್ದರೂ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟ ಮಾಡಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರಾಜ್ಯ ಅಬಕಾರಿ ಆಯುಕ್ತರು, ಬಾರ್ ಮತ್ತು ವೈನ್ಶಾಪ್ ಸಹಿತ ಎಲ್ಲ ಮದ್ಯ ಮಾರಾಟ ಅಂಗಡಿಗಳಲ್ಲಿ ಇರುವ ದಾಸ್ತಾನು ತಪಾಸಣೆ ಮಾಡುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಇದರ ಅನುಸಾರ ಜಿಲ್ಲಾಧಿಕಾರಿ ದಾಸ್ತಾನಲ್ಲಿ ಏನೇ ವ್ಯತ್ಯಾಸ ಕಂಡುಬಂದರೂ ತಕ್ಷಣ ತನಿಖೆ ನಡೆಸಿ ಅಂತಹ ಸನ್ನದುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ಆದರೆ ಈಗಾಗಲೇ ಸರಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಹೇಗೂ ಹೊಸ ಮದ್ಯ ಅಂಗಡಿಗಳಿಗೆ ಬರಲೇಬೇಕು. ಈಗ, ಲೆಕ್ಕ ತಪ್ಪಿಸುವುದು ಅದೆಷ್ಟು ದೊಡ್ಡ ಕೆಲಸ? ಅಥವಾ ಮಧ್ಯ ಬಂದ್ ಮಾಡಿ ಸರ್ಕಾರ ಸಾಧಿಸಿದ್ದು ಏನು ಇಲ್ಲ ಸರಕಾರದ ಬೊಕ್ಕಸಕ್ಕೆ ನಷ್ಟ. ಕಾಳಸಂತೆಯಲ್ಲಿ ಕೊಂಡ ಜನರಿಗೂ ಲಾಸ್. ಮದ್ಯದಂಗಡಿ ಅವರು ಮತ್ತು ಅಧಿಕಾರಿಗಳು ಇವರಿಬ್ಬರ ಮಧ್ಯದಲ್ಲಿ ಲಾಭ ಮಾಡಿಕೊಂಡರು ಅಷ್ಟೇ.