ಕೊರೊನಾತಂಕ | ಅಪಾಯಕಾರಿ ಸ್ಥಿತಿಯತ್ತ ಕೇರಳ| ಪರಿಹಾರ ಕಾರ್ಯದಲ್ಲಿ ರಾಜಕೀಯ ಬೇಡ – ಬಿ.ಎಲ್ ಸಂತೋಷ್

ಬೆಂಗಳೂರು: ಕೋವಿಡ್‌–19 ನಿಯಂತ್ರಣದಲ್ಲಿ ‘ಕೇರಳ ಮಾದರಿ’ ಅನುಸರಿಸಬೇಕು ಎಂಬ ಚರ್ಚೆ ನಡೆಯುತ್ತಿರುವಾಗಲೇ, ಕೇರಳದಲ್ಲಿ ಕೋವಿಡ್‌ ಪರಿಸ್ಥಿತಿ ಗಂಭೀರವಾಗಿದ್ದು, ಇಡೀ ರಾಜ್ಯವೇ ಅಪಾಯಕಾರಿ ಸ್ಥಿತಿಯತ್ತ ಜಾರುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಆತಂಕ ವ್ಯಕ್ತಪಡಿಸಿದ್ದಾರೆ.

ತಮ್ಮ ಫೇಸ್‌ಬುಕ್‌ ಮೂಲಕ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಅಲ್ಲಿನ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇಡುಕ್ಕಿ, ಕೊಟ್ಟಾಯಂ, ಕೊಲ್ಲಂ, ತಿರುವನಂತಪುರಂ ಜಿಲ್ಲೆಗಳಲ್ಲಿ ಕೋವಿಡ್‌ನ ಹೊಸ ಪ್ರಕರಣಗಳು ವರದಿಯಾಗಿವೆ. ಬಹುತೇಕ ಇಡೀ ರಾಜ್ಯವೇ ಕೆಂಪು ವಲಯವಾಗಿ ಪರಿವರ್ತನೆಗೊಂಡಿದೆ ಎಂದು ಅವರು ಹೇಳಿದ್ದಾರೆ.

Facebook post

ಆರಂಭದಲ್ಲಿ ಕೇರಳ ಸರ್ಕಾರ ಘೋಷಿಸಿದ್ದ ₹ 20,000 ಕೋಟಿ ಪ್ಯಾಕೇಜ್ ಗಾಳಿಯಲ್ಲಿ ತೂರಿ ಹೋಗಿದೆಯೇ? ಸರ್ಕಾರಿ ನೌಕರರ ಸಂಬಳವನ್ನು ತಡೆ ಹಿಡಿದಿದೆ. ಈ ರೀತಿ ಸಂಬಳ ತಡೆ ಹಿಡಿದಿರುವ ಮೊದಲ ರಾಜ್ಯ ಕೇರಳ ಎಂದಿದ್ದಾರೆ.

ಬುಧವಾರ 4 ಹೊಸ ಪ್ರಕರಣಗಳು ವರದಿಯಾಗಿವೆ. 25 ಪ್ರಕರಣಗಳಲ್ಲಿ ಮರು ಪರೀಕ್ಷೆ ನಡೆಸಲು ಸೂಚಿಸಿರುವುದು ಏಕೆ? ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕೇರಳ ಘಟಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ತರಾಟೆಗೆ ತೆಗೆದುಕೊಂಡು ಪತ್ರ ಬರೆದಿರುವುದು ನಿಜವಲ್ಲವೆ ಎಂದು ಸಂತೋಷ್‌ ಪ್ರಶ್ನಿಸಿದ್ದಾರೆ.

ಕೇರಳದ ಹಣಕಾಸು ಸಚಿವ ಥಾಮಸ್‌ ಐಸಾಕ್‌ ಅವರು ರಾಜ್ಯದ ವಿತ್ತೀಯ ಸ್ಥಿತಿ ಸಂಪೂರ್ಣ ಕುಸಿದು ಹೋಗಿದೆ ಎಂದು ಹೇಳಿದ್ದಾರೆ. ಪರಿಸ್ಥಿತಿ ದಾರುಣವಾಗಿರುವಾಗ ಪ್ಯಾಕೇಜ್‌ ಘೋಷಿಸುವ ಅಗತ್ಯವೇನಿತ್ತು ಎಂದೂ ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ 55,504 ಪರೀಕ್ಷೆ ನಡೆಸಲಾಗಿದ್ದು, 534 ಪಾಸಿಟಿವ್‌ ಪತ್ತೆ ಆಗಿದೆ. ಕೇರಳದಲ್ಲಿ 23,980 ಪರೀಕ್ಷೆ ನಡೆಸಿ 2 ಲಕ್ಷ ಪರೀಕ್ಷೆ ಮಾಡಿರುವುದಾಗಿ ಹೇಳಿಕೊಂಡಿದೆ. ಅಷ್ಟು ಪರೀಕ್ಷೆ ನಡೆಸಲು ಕಿಟ್‌ಗಳು ಎಲ್ಲಿವೆ. ಅಷ್ಟೇ ಅಲ್ಲ ದೆಹಲಿಯ ತಬ್ಲೀಗ್‌ ಜಮಾತ್‌ ಧರ್ಮಸಭೆಗೆ ಹೋಗಿ ಬಂದ 284 ಜನರನ್ನು ಇನ್ನೂ ಪತ್ತೆ ಮಾಡಲು ಆಗಿಲ್ಲ. ಅವರ ಫೋನ್‌ಗಳು ಸ್ವಿಚ್‌ ಆಫ್‌ ಆಗಿದೆ ಎಂದು ಸಂತೋಷ್‌ ಹೇಳಿದ್ದಾರೆ.

ಕೊಲ್ಲಿ ರಾಷ್ಟ್ರಗಳಿಂದ ಹಿಂದಕ್ಕೆ ಬರಲು 3.5 ಲಕ್ಷ ಜನ ಈಗಾಗಲೇ ನೋಂದಣಿ ಮಾಡಿಸಿದ್ದಾರೆ. ನಿಮಗೆ ನೆರವಾಗಲು ಕೇರಳದ ಬಿಜೆಪಿಯ ಕಾರ್ಯಕರ್ತರ ಜಾಲ, ಉತ್ತಮ ಸಾಮಾಜಿಕ ವ್ಯವಸ್ಥೆ, ಸೇವಾಸಂಸ್ಥೆಗಳ ಕಾರ್ಯಕರ್ತರ ಜಾಲ ಮತ್ತು ಮಾಧ್ಯಮ ನಿಮ್ಮ ಜತೆಗಿದೆ. ಪರಿಹಾರ ಕಾರ್ಯದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಕೆಲಸ ಮಾಡಿ ಎಂದು ಬಿ.ಎಲ್. ಸಂತೋಷ್‌ ಹೇಳಿದ್ದಾರೆ.

Leave A Reply

Your email address will not be published.