ರಂಗದ ಮೇಲೆ ಬಳುಕುವ ನೃತ್ಯಗಾರ್ತಿ | ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ವಾಣಿ
ರಂಗದ ಮೇಲೆ ಬಳ್ಳಿಯಂತೆ ಬಳುಕುತ್ತಾ, ಲವಲವಿಕೆಯಿಂದ ನೃತ್ಯ ಮಾಡುವುದು ವಾಣಿಯ ವೈಶಿಷ್ಟ್ಯ. ಒಮ್ಮೆ ಭರತನಾಟ್ಯದಲ್ಲಿ ಕುಣಿದರೆ, ಇನೊಮ್ಮೆ ಪಾಶ್ಚಾತ್ಯ ನೃತ್ಯದ ರಂಗಿನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಪ್ರತಿಭೆ ವಾಣಿ
ಮೂಲತಃ ಪುತ್ತೂರು ತಾಲ್ಲೂಕಿನ ನೆಹರು ನಗರದ ನಿವಾಸಿಯಾದ ಎಂ.ವಿದ್ಯಾನಂದ ಪ್ರಭು ಮತ್ತು ಅನ್ನಪೂರ್ಣ ದಂಪತಿಗಳ ಪುತ್ರಿ.
ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನ ಸಂತ ವಿಕ್ಟರನ ಬಾಲಿಕಾ ಪ್ರೌಢ ಶಾಲೆಯಲ್ಲಿ ಮತ್ತು ಪಿ.ಯು.ಸಿಯನ್ನು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದ್ದಾರೆ. ಪ್ರಸ್ತುತ ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ.
ಐದನೇ ವರ್ಷದ ಬಾಲೆಯಾಗಿದ್ದಾಗಲೇ ಇವರು ಹಾಡು ಕೇಳಿದ ತಕ್ಷಣ ತನ್ನಷ್ಟಕ್ಕೆ ತಾನು ಮೈಕೈ ಕುಣಿಸುತ್ತಾ, ನೃತ್ಯಾಭಿಲಾಷೆ ವ್ಯಕ್ತಪಡಿಸಿದವರು. ನಂತರ ಕಲ್ಲೇಗದ “ಶಾರದ ಮಂದಿರ” ಎಂಬ ನೃತ್ಯಶಾಲೆಗೆ ಸೇರಿ, ಗುರುಗಳಾದ ಸುದರ್ಶನ್ ಎಂ.ಎಲ್.ಭಟ್ ರಲ್ಲಿ ಭರತನಾಟ್ಯವನ್ನು ಅಭ್ಯಸಿಸಿದರು. ಮುಂದೆ ಭರತನಾಟ್ಯದ ನಾನಾ ಆಯಾಮಗಳನ್ನು ಕಲಿಯುವ ತುಡಿತ ಹೆಚ್ಚಾಗಿ,ಬೆಳ್ಳೂರಿನ ಶ್ರುತಿ ರೋಶನ್ ನಲ್ಲಿ ಕಲಿಯಲು ಶುರು ಮಾಡಿದರು.
ಪಾಶ್ಚಾತ್ಯ ನೃತ್ಯವನ್ನು ಅಗಾಧವಾಗಿ ಪ್ರೀತಿಸುತ್ತಿದ್ದ ಇವರು,ಕಲ್ಲೇಗದ ಕಿರಣ್ ಮುರಳಿ ಅವರ “ಮುರಳಿ ಬ್ರದರ್ಸ್” ಗೆ ಸೇರಿ ,ಇಂದಿಗೂ ಪ್ರತಿ ಭಾನುವಾರ ಮತ್ತು ಶುಕ್ರವಾರ ನೃತ್ಯವನ್ನು ಕಲಿಯುತ್ತಿದ್ದಾರೆ.
ಇವರು ಪ್ರಥಮವಾಗಿ ನೃತ್ಯ ಕಾರ್ಯಕ್ರಮ ನೀಡಿದ್ದು, ಕಲ್ಲಡ್ಕದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿಯಲ್ಲಿ. ಹೀಗೆ ಶುರುವಾದ ನೃತ್ಯಯಾನ ಮುಂದೆ ಕಲ್ಲೇಗ , ಕಚ್ಚೂರು, ಮಂಗಳೂರು, ಉಡುಪಿ ಮುಂತಾದ ಕಡೆಗಳಲ್ಲಿ ನೃತ್ಯವನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದುವರೆಗೆ ಮುನ್ನೂರಕ್ಕೂ ಹೆಚ್ಚು ಕಾರ್ಯಕ್ರಮ ನೀಡಿರುವ ಇವರು, ಮಂಗಳೂರಿನಲ್ಲಿ ನಡೆದ “ಡ್ಯಾನ್ಸ್ ಕುಡ್ಲ ಡ್ಯಾನ್ಸ್” ನಲ್ಲಿ ಭಾಗವಹಿಸಿದಲ್ಲದೆ, ಹವಾನ್ ಐಲ್ಯಾಂಡ್ ನಲ್ಲಿ ನಡೆದ “ಡ್ಯಾನ್ಸ್ ರಿಯಾಲಿಟಿ ಶೋ” ಭಾಗವಹಿಸಿ, ಕೊನೆಯ ಸುತ್ತಿಗೆ ಆಯ್ಕೆಯಾದ ಹೆಗ್ಗಳಿಕೆ ಇವರದ್ದು. ಉತ್ತಮ ನೃತ್ಯಗಾರ್ತಿಯಾಗಬೇಕೆಂಬುದು ಇವರ ಹಂಬಲ.
ಮಧುಮಿತ ಕಡಂಬು
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು, ಪುತ್ತೂರು