ಯೋಧನಿಗೆ ಥರ್ಡ್ ಡಿಗ್ರಿ ಹಿಂಸೆ | ಸದಲಗಾ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಮಾನತು
ಸಿಆರ್ ಪಿಎಫ್ ಯೋಧನ ಮೇಲಿನ ಹಲ್ಲೆ ಪ್ರಕರಣವು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದು ಇದೀಗ ಗಂಟೆಗೊಂದು ತಿರುವು ಪಡೆದು ಕೊಲ್ಲುತ್ತಿದೆ.
ಇದೀಗ ಸದಲಗಾ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅನಿಲ್ ಕಂಬಾರ್ ಎಂಬವನನ್ನು ಅಮಾನತುಗೊಳಿಸಲಾಗಿದೆ.
ಯೋಧ ಸಚಿನ್ ಸಾವಂತ ಮಾಸ್ಕ್ ಧರಿಸಿರಲಿಲ್ಲ ಎನ್ನುವ ಕಾರಣಕ್ಕೆ ಆರಂಭವಾದ ಚರ್ಚೆ ಕೊನೆಗೆ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಯೋಧನ ಮೇಲೆ ಪೊಲೀಸರು ಮೊದಲು ಕೈ ಎತ್ತಿದ್ದರು.ನಡುವೆ ಪರಸ್ಪರ ಹಲ್ಲೆ ನಡೆಯಿತು. ನಂತರ ಸಚಿನ್ ನನ್ನು ಅಮಾನವೀಯವಾಗಿ ಠಾಣೆಗೆ ಕರೆದೊಯ್ದು ಹಿಂಸಿಸಲಾಗಿದೆ ಎಂದು ಆರೋಪ ಮಾಡಲಾಯಿತು.
ಈತನ ಕೈಗಳಿಗೆ ಕೋಳ ಹಾಕಿ ಠಾಣೆಗೆ ಕರೆದೊಯ್ಯುವ ಹಾಗೂ ಮೈಮೇಲೆ ಆದಂತಹ ಗಾಯಗಳ ಫೋಟೋಗಳು ಮೀಡಿಯಾಗಳಲ್ಲಿ ಬಹಳಷ್ಟು ವೈರಲ್ ಆಗಿವೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ವತಃ ಆಡಳಿತ ಪಕ್ಷ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಯಿತು. ಇದನ್ನು ಗಮನಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಕ್ಷಣ ತನಿಖೆಗೆ ಆದೇಶಿಸಿದ್ದರು. ಈ ಸಾಟಿ ಐಜಿಯಿಂದ ತನಿಖೆಗೆ ಆದೇಶಿಸಲಾಗಿತ್ತು.
ಇದೀಗ ತನಿಖೆ ತ್ವರಿತಗತಿಯಲ್ಲಿ ಸಾಗಿದ್ದು ತನಿಖೆ ವೇಳೆ ಕರ್ತವ್ಯಲೋಪ ಕಂಡು ಬಂದಿದ್ದು ಪಿಎಸ್ಐ ಅನಿಲ್ ಕಂಬಾರ್ ರನ್ನು ಅಮಾನತು ಮಾಡಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಹೇಳಿದ್ದಾರೆ.
ಈ ಘಟನೆಯ ಸಂಬಂಧ ಪೊಲೀಸ್ ಮತ್ತು ಸಿಆರ್ ಪಿ ಎಫ್ ಇತ್ತಂಡಗಳು ತಮ್ಮನ್ನು ಸಮರ್ಥಿಸಿಕೊಳ್ಳುತ್ತಿದೆ ಎಂಬ ಅಂಶವೂ ಕಂಡು ಬಂದಿತ್ತು. ಈಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಯೋಧನಿಗೆ ಥರ್ಡ್ ಡಿಗ್ರೀ ಶಿಕ್ಷೆ ನೀಡಲಾಗಿದೆ ಎಂಬ ಅಂಶ ಹೊರಬಿದ್ದಿದೆ. ಯೋಧನ ಪೃಷ್ಠ ಭಾಗಕ್ಕೆ ಬಲವಾದ ಹೊಡೆದ ಕಪ್ಪನೆಯ ಗಾಯಗಳು ಕಂಡು ಬಂದಿವೆ. ಈ ಸತ್ಯ ಯೋಧನ ವೈದ್ಯಕೀಯ ಪರೀಕ್ಷೆಯಿಂದ ಪತ್ತೆಯಾಗಿದೆ.
” ಯೋಧನ ಮೇಲಿನ ಗುರುತುಗಳು ಇದೊಂದು ಅತ್ಯಂತ ಹೇಯ ಕೃತ್ಯ ಎಂದು ಸಾಬೀತು ಪಡಿಸುತ್ತವೆ. ಇದು ಪೊಲೀಸರ ಕ್ರಿಮಿನಲ್ ವರ್ತನೆಯನ್ನು ತೋರಿಸುತ್ತದೆ. ಎಸ್ಪಿ ಅವರು ಪೊಲೀಸ್ ಹುದ್ದೆಯಲ್ಲಿ ಮುಂದುವರಿಯಲು ಅನರ್ಹ. ಘಟನೆಗೆ ಸಂಬಂಧಪಟ್ಟ ಎಲ್ಲಾ ಪೊಲೀಸ್ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಬೇಕು.”
ಎಂದು ಪೊಲೀಸರ ಬಗ್ಗೆ ಸಿಆರ್ಪಿಎಫ್ ನ ಹಿರಿಯ ಅಧಿಕಾರಿ ಮಿತಾಂಶು ಚೌಧರಿ ಅವರು ಕಠಿಣ ಶಬ್ದಗಳಲ್ಲಿ ಟ್ವೀಟ್ ಮಾಡಿದ್ದಾರೆ.
ಸಚಿನ್ ಸಾವಂತ್ ನನ್ನ ಈಗ ಬಿಮ್ಸ್ ಆಸ್ಪತ್ರೆಗೆ ಕರೆತರಲಾಗಿದ್ದು ಆತನಿಗೆ ವೈದ್ಯಕೀಯ ತಪಾಸಣೆ ನಡೆಯುತ್ತಿದೆ. ಈಗ ಪೊಲೀಸರ ಈ ವರ್ತನೆಯನ್ನು ದೇಶವನ್ನು ಪ್ರೀತಿಸುವ ಎಲ್ಲಾ ಜನರೂ ಖಂಡಿಸಬೇಕು. ಈ ಘಟನೆಯಲ್ಲಿ ಪಾಲ್ಗೊಂಡ ಎಸ್ ಪಿ ಸೇರಿದಂತೆ ಎಲ್ಲಾ ಪೊಲೀಸರಿಗೂ ಶಿಕ್ಷೆಯಾಗಬೇಕು.
ಕಡೆಯ ಪಕ್ಷ ಇಂತಹ ಕೇಸೊಂದರಲ್ಲಾದರೂ ಬೊಮ್ಮಾಯಿ ಬಾಯಿ ಬಿಡಬೇಕು. ಖುದ್ದು ನಿಂತು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ದೇಶವನ್ನು ಪ್ರೀತಿಸುವವರು ಯೋಧನನ್ನು ಬೆಂಬಲಿಸಬೇಕು ಎನ್ನುವುದು ಜನಧ್ವನಿ.