ಮಗನ ಅದ್ದೂರಿ ಮದುವೆಗೆಂದು ಕುಮಾರಸ್ವಾಮಿ ಇಟ್ಟಿದ್ದ 5.5 ಕೋಟಿ ದುಡ್ಡಿನಲ್ಲಿ 1 ಲಕ್ಷದ 4 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ರಾಮನಗರ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ತಮ್ಮ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆನ್ನುವ ಸಲುವಾಗಿ ಇಟ್ಟಿದ್ದ 5.5 ಕೋಟಿ ಹಣವನ್ನು ಕ್ಷೇತ್ರದ ಜನರ ಆಹಾರಕ್ಕಾಗಿ ವ್ಯಯಿಸುತ್ತಿದ್ದಾರೆ.

ಕುಮಾರಸ್ವಾಮಿ ಮತ್ತವರ ಕುಟುಂಬಸ್ಥರು ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯ ಜನರಿಗೆ ದಿನಸಿ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಮನಗರದ ಮಂಜುನಾಥ ಕನ್ವೆನ್ಷನ್ ಹಾಲ್‍ನಲ್ಲಿ ದಿನಸಿ ಕಿಟ್ ವಿತರಣೆ ಮಾಡಲು ಚಾಲನೆ ನೀಡಿದ ಈ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಮದುವನಗಿತ್ತಿ- ಸೊಸೆ ರೇವತಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೊದಲ ಬಾರಿಗೆ ಕುಟುಂಬದ ಜೊತೆ ನಿಖಿಲ್ ಪತ್ನಿ ರೇವತಿ ಕೂಡ ಆಗಮಿಸಿದ್ದರು. ಬಡ ಕುಟುಂಬಗಳು ಇದರ ಸಹಾಯ ಪಡೆದುಕೊಳ್ಳಲಿದ್ದು ಅಕ್ಕಿ, ಬೇಳೆ ಮತ್ತು ಸಕ್ಕರೆ ಇರುವ ಕಿಟ್‍ಗಳನ್ನ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ.

ಸುಮಾರು 1 ಲಕ್ಷದ 4 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ನಡೆಯಲಿದೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರಗಳ ಎಲ್ಲಾ ಮನೆಗಳಿಗೂ ಈ ಆಹಾರ ಕಿಟ್ ತಲುಪಲಿದೆ. ಮಗನ ಮದುವೆಯನ್ನು ರಾಮನಗರದಲ್ಲಿ ಮಾಡಬೇಕೆಂಬ ನನ್ನ ಆಸೆ ನಡೆಯಲಿಲ್ಲ. ಆದ್ದರಿಂದ ಮದುವೆಗೆ ನಾನು ಏನು ಹಣ ವೆಚ್ಚ ಮಾಡಬೇಕು ಎಂದುಕೊಂಡಿದ್ದೆನೋ, ಆ ವೆಚ್ಚವನ್ನ ಎರಡು ಕ್ಷೇತ್ರಗಳಿಗೆ ವಿನಿಯೋಗ ಮಾಡುತ್ತಿದ್ದೇನೆ. 5.5 ಕೋಟಿ ವೆಚ್ಚದ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಮಗ ಮತ್ತು ಸೊಸೆಯನ್ನು ಕರೆದುಕೊಂಡು ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಿದ್ದೇನೆ. ಆಯಾ ಕ್ಷೇತ್ರದ ಶಾಸಕರ ತಂಡ ಅವರವರ ಮನೆಗೆ ತಲುಪಿಸುವ ಕೆಲಸವನ್ನು ಈಗಾಗಲೇ ಶುರು ಮಾಡಿದ್ದಾರೆ ಎಂದು ತಿಳಿಸಿದರು.

Leave A Reply

Your email address will not be published.