ದಕ್ಷಿಣಕನ್ನಡ ಉಡುಪಿ ತಂಪು ತಂಪು | ಅಲ್ಲಲ್ಲಿ ಸಿಡಿಲು ಗುಡುಗು, ಗಾಳಿ ಮಳೆ

ಇವತ್ತಿಗೆ ಇಡೀ ದಕ್ಷಿಣಕನ್ನಡ ಉಡುಪಿ ತಂಪು ತಂಪು. ಎಲ್ಲಾ ಕಡೆಯೂ ಹೆಚ್ಚು ಕಮ್ಮಿ ಮಳೆ ಸುರಿದಿದೆ. ಕೆಲವು ಕಡೆ ನೆಲ ಚಂಡಿಯಾಗುವಷ್ಟು ಮಾತ್ರ ಬಂದಿದ್ದರೆ, ಕೊಯ್ಯೂರು, ಗೇರುಕಟ್ಟೆ, ನಾರಾವಿ, ಕೊಕ್ಕಡ ಸುತ್ತಮುತ್ತ ಒಂದು ಗಂಟೆಗೂ ಅಧಿಕ ಜಡಿ ಬೊಳ್ಳ ಬರ್ಸ ಬಂದಿದೆ.

ಕಳೆದ ಕೆಲವು ಮಳೆಗಳು ಕೆಲವೇ ಕಡೆಗಳಲ್ಲಿ ಸುರಿದಿದ್ದವು. ಈ ಸಲ ಮಳೆರಾಯ ಅಂತಹಾ ಯಾವುದೇ ವಿನಾಯಿತಿ ತೋರದೆ ಎಲ್ಲ ಕಡೆಯಲ್ಲಿಯೂ ಹನಿಗಳ ಸಿಂಚನ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿವಿಧೆಡೆಗಳಲ್ಲಿ ರವಿವಾರ ಸಂಜೆ ಗುಡುಗು, ಮಿಂಚು ಗಾಳಿ ಸಹಿತ ಮಳೆಯಾಗಿದೆ. ಬೆಳ್ತಂಗಡಿ, ಗುರುವಾಯನಕೆರೆ, ನಾರಾವಿ, ಉಜಿರೆ ಮುಂಡಾಜೆ, ಮಡಂತ್ಯಾರು, ಬಂಟ್ವಾಳ, ಉಪ್ಪಿನಂಗಡಿ, ವಿಟ್ಲ, ಪುತ್ತೂರು, ಕಡಬ, ಸುಳ್ಯ, ಸುರತ್ಕಲ್‌, ಬಿ.ಸಿ.ರೋಡ್‌, ಮಣಿಪಾಲ, ಕಟಪಾಡಿ, ಕಾಪು, ಪಡುಬಿದ್ರಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ‌ಲ್ಲಿ ಉತ್ತಮ ಮಳೆಯಾಗಿದೆ.

ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ಉಜಿರೆ, ಕೊಯ್ಯೂರು, ಧರ್ಮಸ್ಥಳ, ಕೊಕ್ಕಡ, ಅರಸಿನಮಕ್ಕಿ, ಕಳೆಂಜ, ಗುರುವಾಯನಕೆರೆ, ಮಡಂತ್ಯಾರು ಸುತ್ತಮುತ್ತ ಮಿಂಚು-ಗುಡುಗು, ಗಾಳಿ ಸಹಿತ ಮಳೆಯಾಗಿದೆ.

ಕಡಬ ತಾಲೂಕಿನ ಕುಟ್ರಾಪ್ಪಾಡಿ ಗ್ರಾಮದ ಮೀನಾಡಿಯಲ್ಲಿ ಬಾಳಪ್ಪ ಗೌಡ ಅವರ ಮನೆಗೆ ಸಿಡಿಲಿನ ಒಂದು ಜ್ವಾಲೆ ಅಪ್ಪಳಿಸಿ ಒಂದು ಪಾರ್ಶ್ವ ಹಾನಿಗೀಡಾಗಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ.
ಇಚಿಲಂಪಾಡಿಯ ಪಾದೆ ನಿವಾಸಿ ಸಾಂತಪ್ಪ ಗೌಡರ ಮನೆಗೂ ಮಳೆಯಿಂದ ಭಾಗಶಃ ಹಾನಿಯಾಗಿದೆ. ಅವರ ಪತ್ನಿಗೆ ಗಾಯಗಳಾಗಿವೆ.

ಆಲಂಕಾರು ಆತೂರು ರಸ್ತೆಯಲ್ಲಿ ಗಾಳಿಗೆ ಬೃಹತ್‌ ಗಾತ್ರದ ಮರವೊಂದು ರಸ್ತೆಗೆ ಅಡ್ಡಡ್ಡ ಮಲಗಿದೆ. ಇದರ ಪರಿಣಾಮ ಕೆಲಕಾಲ ರಸ್ತೆ ತಡೆ ಉಂಟಾಗಿತ್ತು. ನಂತರ ಕಡಬ ಪೊಲೀಸರು ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿದ್ದಾರೆ. ಆತೂರು ನೆಲ್ಯಾಡಿ ರಸ್ತೆಯಲ್ಲಿ ವಿದ್ಯುತ್‌ ಕಂಬ ಮುರಿದು ರಸ್ತೆಗೆ ಬಿದ್ದಿತ್ತು.

ನೆರಿಯ ಗ್ರಾಮದ ಪುಲ್ಲಾಜೆಯಲ್ಲಿ ಸೀತಮ್ಮ ಅವರ ಮನೆಗೆ ಬೃಹತ್‌ ಮರವೊಂದು ಹಾಗೂ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಮನೆಯೊಳಗೆ ಲಾಕ್ ಡೌನ್ ಕಾರಣದಿಂದ ಮಾಡಲಾರದೆ ಶೇಖರಿಸಿಟ್ಟಿದ್ದ 2 ಕ್ವಿಂಟಾಲ್‌ ಅಡಿಕೆ, ದಿನಸಿ ಸಾಮಗ್ರಿ ನಷ್ಟವಾಗಿದೆ. ನೆರಿಯದ ಅಕ್ಕೊಲೆಯಲ್ಲಿ ಸಿಡಿಲಿಗೆ ಶಬೀರ್‌ ಎಂಬವರು ಗಾಯಗೊಂಡಿದ್ದಾರೆ.

ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಕೆಲವು ದಿನಗಳು ದೊಡ್ಡಮಟ್ಟದ ಮಳೆಯಾಗಲಿದೆ.

Leave A Reply

Your email address will not be published.