ಅರೆ ಸೇನಾಪಡೆಯ ವೀರ ಯೋಧ ಕುಶಾಲಪ್ಪ ಗೌಡ ಬಲಂಬಿಲ ಸಾಧನೆ ನಮ್ಮ ಯುವಕರಿಗೆ ಸ್ಫೂರ್ತಿ
ಈ ವ್ಯಕ್ತಿಯನ್ನು ನನ್ನ ಗೆಳೆಯನೆಂದು ಹೇಳಿಕೊಳ್ಳಲು ಹೆಮ್ಮೆ ಮತ್ತು ಅವರನ್ನು ನಿಮಗೆ ಪರಿಚಯಿಸಲು ನನಗೆ ಖುಷಿ !
ಪ್ರಸ್ತುತ ದೆಹಲಿಯ CRPF ಸರ್ಕಲ್ ಇನ್ಸ್ಪೆಕ್ಟರ್ ದರ್ಜೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕುಶಾಲಪ್ಪಗೌಡ ಬಲಂಬಿಲ ಅವರು ಈ ದಿನದ ನಮ್ಮ ಅತಿಥಿ.
ಕಷ್ಟದ ಕೃಷಿ ಜೀವನದಿಂದ ಬೆಳೆದು ಇವತ್ತು ಇವರು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಕಮಾಂಡೆಂಟ್ ಸ್ಥಾನದವರೆಗೆ ಏರಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಡಿದಾದ ರಸ್ತೆಗಳು ಕೊನೆಯಾದರೆ ಅಲ್ಲಿದೆ ಬಲಂಬಿಲ ವೆಂಕಪ್ಪಗೌಡ ಮತ್ತು ದೇಜಮ್ಮ ದಂಪತಿಗಳ ಮನೆ. ಅವರ ಮೂರು ಜನ ಗಂಡು ಮಕ್ಕಳಲ್ಲಿ ಕುಶಾಲಪ್ಪ ಗೌಡರು ಕೊನೆಯವರು.
ತಮಗಿರುವ ಒಂದೂವರೆ ಎಕರೆ ಜಾಗದಲ್ಲಿೇ ಕೃಷಿ ಮಾಡಿ ಬದುಕಬೇಕಾದ ಪರಿಸ್ಥಿತಿ. ಹಾಗಾಗಿ ಕೃಷಿ ಕಾರ್ಯಕ್ಕೆ ಚಿಕ್ಕಂದಿನಲ್ಲೇ ಕೈ ಹಾಕಿದರು. ಮೈಮುರಿದು ದುಡಿದ ಪರಿಣಾಮ ಹೈಸ್ಕೂಲು ಮೆಟ್ಟಿಲು ಹತ್ತುತ್ತಿದ್ದಂತೆಯೇ ದೇಹ ಕಲ್ಲಾಗಿ ಹೋಗಿತ್ತು. ಇರುವ ಒಂದು ಮುಕ್ಕಾಲು ಎಕರೆ ಜಾಗದಲ್ಲಿ ಬೆಳೆ ತೆಗೆಯಲು ದೇಹವನ್ನು ಹಿಂಡಿ ಹಾಕಿ ದುಡಿದರು. ಮಳೆಗಾಲದಲ್ಲಿ ಭತ್ತ ಬೆಳೆದರು. ಉಳಿದಿರೋ ಜಾಗದಲ್ಲಿ ಬಾಳೆ ಬೆಳೆದರು. ಜಾಗ ಸಾಲಲ್ಲ ಅಂದಾಗ ಕೊರಗುತ್ತಾ ಕೂರಲಿಲ್ಲ. ತಮ್ಮೂರಲ್ಲಿ ಪಡೀಲ್ ಬಿದ್ದ ಜಾಗದಲ್ಲಿ ಲೀಸ್ ಹಾಕಿಕೊಂಡು ಬಾಳೆ ಬೆಳೆದರು. ಇದನ್ನೆಲ್ಲ ಅವ್ರು ತನ್ನ ಇಬ್ಬರು ಅಣ್ಣ ಮತ್ತು ತಂದೆಗೆ ಜತೆ ಜತೆಯಾಗಿ ಸೇರಿ ಮಾಡಿದರು.
ಕೃಷಿ ಜೊತೆಗೆ ತಮ್ಮ ವಿದ್ಯಾಭ್ಯಾಸ ಮುಂದುವರಿಸಿದ ಕುಶಾಲಪ್ಪಗೌಡ ಅವರು ಕಾಲೇಜು ಶಿಕ್ಷಣವನ್ನು ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಮುಗಿಸಿದರು. ಇವರು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲಿ ಮುಂದು. ಅವರು ಯುನಿವರ್ಸಿಟಿ ಮಟ್ಟದ ಕಬ್ಬಡ್ಡಿ ಮತ್ತು ವಾಲಿಬಾಲ್ ಆಟಗಾರ. ಹಲವು ಬಾರಿ ಕಾಲೇಜನ್ನು ಪ್ರತಿನಿಧಿಸಿದ್ದಾರೆ.
ಭರತ ನಾಟ್ಯ ಕಲಾವಿದೆ ಪತ್ನಿ ದೀಪ್ತಿ ಮತ್ತು ಮಗಳು ಪ್ರೀಶಾ ಗೌಡ ಜತೆ ಕುಶಾಲಪ್ಪ ಗೌಡ
ಮುಂದೆ ಅವರಿಗೆ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ನಲ್ಲಿ ಕೆಲಸ ಸಿಕ್ಕಿತು. ಕಾನ್ಸ್ಟೇಬಲ್ ಆಗಿ ಕೆಲಸಕ್ಕೆ ಸೇರಿದ ಇವರು ಮುಂದೆ ಒಂದೊಂದೇ ಮೆಟ್ಟಲು ಹತ್ತಿ, ಡಿಪಾರ್ಟ್ಮೆಂಟ್ ನ ಪರೀಕ್ಷೆ ಬರೆದು ಇವತ್ತು ನವ ದೆಹಲಿಯ ಡಿಜಿ ಆಫೀಸಿನಲ್ಲಿ ಗುಪ್ತಚರ ಇಲಾಖೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ದರ್ಜೆಯ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಾ ಇದ್ದಾರೆ.
ಅವರು ತಮ್ಮ ಸೇವಾವಧಿಯಲ್ಲಿ ಜಾರ್ಖಂಡ್ ನ ಪ್ರಕ್ಷುಬ್ದ ಆಂಟಿ ನಕ್ಸಲೈಟ್ ತಂಡದ ನೇತೃತ್ವ ವಹಿಸಿದ್ದರು. ಗ್ರೇ ಹೌಂಡ್ ಆಂಟಿ ನಕ್ಸಲ್ ಯೂನಿಟ್ ಹೆಡ್ ಆಗಿ ನಕ್ಸಲರನ್ನು ಬಗ್ಗು ಬಡಿದಿದ್ದರು. ರಕ್ತ ಹೆಪ್ಪುಗಟ್ಟುವ ಚಳಿಯ, ಕುಲುಮೆಯಂತಹ ಕಾಶ್ಮೀರಕ್ಕೆ ಅಂಟಿಕೊಂಡಿರುವ ಶ್ರೀನಗರದ ಆಂಟಿ ಟೆರರಿಸ್ಟ್ ಪಡೆಯ ಯಶಸ್ವಿ ನೇತೃತ್ವ ಕುಶಾಲಪ್ಪ ಗೌಡರದು.
ಎಲ್ಲೋ ದೂರದ ದುರ್ಗಮ ಊರುಗಳ ಕಾಡು ಬೆಟ್ಟಗಳಲ್ಲಿ ಸೊಂಟಕ್ಕೆ ಭಾರತೀಯ ಅರೆ ಸೇನಾಪಡೆಯ ರೈಫಲ್ ನ್ನು ಸಿಕ್ಕಿಸಿಕೊಂಡು ಜನರ ರಕ್ಷಣೆಗೆ ಇವರು ಇಳಿದೇ ಇವತ್ತಿಗೆ ಒಂದಲ್ಲಾ ಎರಡಲ್ಲ ಸುದೀರ್ಘ 15 ವರ್ಷಗಳೇ ಆಗಿವೆ. ಇವತ್ತು ಅರೆ ಸೇನಾಪಡೆಯ ಬೆಟಾಲಿಯನ್ ಗಳಲ್ಲಿ ಧೈರ್ಯಕ್ಕೆ ಸಾಹಸಕ್ಕೆ ಇನ್ನೊಂದು ಹೆಸರಾಗಿ ಇರುವವರು ಈ ನಮ್ಮ ಊರಿನ ಹೆಮ್ಮೆಯ ಮಗ ಕುಶಾಲಪ್ಪ ಗೌಡರು. ದುಷ್ಕರ್ಮಿಗಳ ವಿರುದ್ಧ ಸ್ವತಃ ಮುಂದೆ ನಿಂತು ಯುದ್ಧೋನ್ಮಾದದಲ್ಲಿ ಹೋರಾಡುವ ಇವರು ‘ ಲೀಡಿಂಗ್ ಫ್ರಮ್ ದ ಫ್ರಂಟ್ ‘ ಎಂಬುದಕ್ಕೆ ಒಂದು ದೊಡ್ಡ ಉದಾಹರಣೆ.
ತಾನು ಉನ್ನತ ಅಧಿಕಾರಿ ಎಂಬ ಜಂಬವಿಲ್ಲದೆ ಎಲ್ಲರೊಡನೆ ನಗುನಗುತ್ತಾ ಇರುವ ಇವರು ಕೊಡುಗೈ ದಾನಿಯೂ ಹೌದು. ಎಲ್ಲರೊಂದಿಗೂ ಬೆರೆತು ಬಾಳುವ ಸ್ನೇಹಜೀವಿ ; ಇದೀಗ ನಮ್ಮ ಯುವ ಜನತೆಗೆ ಸ್ಪೂರ್ತಿ.
ಸುದರ್ಶನ್ ಬಿ ಪ್ರವೀಣ್, ಬೆಳಾಲು (ಸಂ)