Celebration: ಈ ಸಲ ಕಪ್‌ ನಮ್ದೇ.. ತೋಟಕ್ಕೆ ಮದ್ದು ಬಿಟ್ಟಿಲ್ಲಂದ್ರೆ ಕೊಳೆನೂ ನಮ್ದೇ.. – ಪ್ರಬಂಧ ಅಂಬುತೀರ್ಥರ ಸೀರಿಯಸ್‌ ಹಾಸ್ಯ ಚಟಾಕಿ

Share the Article

Celebration:ಮದ್ಯ ರಾತ್ರಿ ಪಟಾಕಿ ಸದ್ದಿಗೆ ಊಟಕ್ಕಿಂತ ಜಾಸ್ತಿ ಮಾತ್ರೆ ಉಂಡಿದ್ದ ಮಂಞಾಥಯ್ಯನಿಗೆ ಹಾರ್ಟ್ ಹಾರದಂಗಾಗಿ ಎದ್ದು ಕೂತರು..

ಅವರ ಐಡಿಯಾ ಪಾಕಿಸ್ತಾನದವರು ಭಾರತದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡೇ ಬಿಟ್ಟರು ಅಂತ…!! ಅಯ್ಯೋ ಈಗೆಂಥ ಮಾಡದು… ಯಾವ ಸರಕಲಲ್ಲಿ ಅಡಿಕಿಕೂತಗಣದು… ? ಅಂತ ಮಂಡೆ ಬಿಸಿಯಾಗಿ ಪಕ್ಕದಲ್ಲಿ ಮನಿಗಿದ್ದ ಪತ್ನಿ ಯಶೋದಕ್ಕನ ಎಬ್ಬಿಸಿ … ನೆಡಿ ನೆಡಿ ಹೊರಗೆ ಓಡಣ.. ಬೆಂಕಿಬಿದ್ದ ಪಾಕಿಸ್ತಾನದವು ಭಾರತದ ಮೇಲೆ ಬಾಂಬ್ ಹಾಕೇ ಬಿಟ್ಟರು ಅಂತ ಕಾಣುತ್ತದೆ.. ಬೇಗ ಹೊರಗೆ ಓಡೋಣ… ಅಂದರು.

ಯಶೋದಕ್ಕನಿಗೆ ಇದು ಹುಡುಗರ ಕ್ರಿಕೆಟ್ ಮ್ಯಾಚ್ ನ ಗಮ್ಮತ್ ಅಂತ ಗೊತ್ತಿತ್ತು… ಅದನ್ನು ಮಂಞಾಥಯ್ಯಗೆ ಹೇಳಿದರು. ಮಂಞಾಥಯ್ಯನಿಗೆ ಮೈ ತುಂಬಾ ಉರಿತು‌. ಅಂಗಿ ಪಂಚೆ ಉಟ್ಟು ಹೊರಗೆ ರಸ್ತೆಗೆ ಬಂದು ಗುಂಪಿನಲ್ಲಿ ಆರ್ ಸಿ ಬಿ ಗೆದ್ದ ಖುಷಿಲಿ ಕುಣಿತಿದ್ದ ತಮ್ಮ ಮಗ ಪ್ರಮೋದನ್ನ ನೋಡಿದರು… ಪ್ರಮೋದ – ಜೋರಾಗಿ ಕಪ್ ನಮ್ಮದೇ ಕಪ್ ನಮ್ಮದೇ ….” ಅಂತ ಖುಷಿಲಿ‌ ಕೂಗ್ತಿದ್ದ.
ಮಂಞಾಥಯ್ಯನಿಗೆ ರಪ್ಪ ಸಿಟ್ ನೆತ್ತಿಗೇರಿ ಮಗನಿಗೆ ಬಾಯಿಗೆ ಬಂದಂಗ್ ಬೈಯ್ಯಕೆ ಶುರುಮಾಡಿದರು.

“ಹೌದು ಹೌದು ಹಿಂಗ್ ಮಳೆ ಬರ್ತನೇ ಇದ್ದರೆ ಕಪ್ಪು ನಮ್ಮದೇ ಕೊಳೆಯೂ ನಮ್ದೇ…!! ನೀ ತ್ವಾಟಕ್ಕೆ ಹೋಗದೇ ಎಷ್ಟು ದಿನಾ ಆತ…? ತ್ವಾಟದ ಕಪ್ (ಕೇದಿಗೆ) ಕೀಸಕ್ಕೆ ಆ ಮಹೇಶ್ ನಿಗೆ ಹೇಳಿ ಕರಕೊಂಡು ಬಾ ಅಂತ ಹೇಳಿ ನಿಂಗೆ ನಾ ಹೇಳಿ ಎಷ್ಟು ದಿನಾ ಆತು.? ಅವನಿಗೆ ಫೋನ್ ಮಾಡಿದರೆ ಅವ ಫೋನೇ ನೆಗ್ಗಲ್ಲ… ಫೋನ್ ನೆಗ್ಗಿದರೂ ಇನ್ನೊಂದೆರೆಡು ದಿನ ಇನ್ನೊಂದೆರೆಡು ದಿನ ಅಂತ ಮುಂದುಕ್ತಾ ಮುಂದಾಕ್ತಾ ಕೆಲಸಕ್ಕೆ ಬರದಿತೆ ತಪ್ಪಿಸಿಕಿ ಓಡಾಡ್ತದಾನೆ…!! ಈ ಸತಿ ಊರಿಗೆ ಮಂಚೆ ಮಳೆ ಬೇರೆ ಹಿಡಕಂಡ್ ಕೂತಿದೆ… !! ಹಿಂಗೆ ಮಳೆ ಮುಂದುವರಿದ್ರೆ ಹ್ವಾದ್ ವರ್ಷದ ನಮೂನೆಯಲ್ಲೇ ನಮಗೆ ಉಳಿಯದ್ ಮೂರೇ ಮೂರ್ ಕಾಳು ಅಡಿಕೆಯೇಯೈ ಸೈ… ನೀ ತ್ವಾಟದ ಬದಿ ಹೋಗಿ ನೋಡಿದ್ಯ..? ಮಂಗ್ ಉಳಿಸಿದ್ದ ನಮಗೆ ಅನ್ನೋ ಹಂಗಾಗಿದೆ..

ಇದರ ಮದ್ಯ ಕಪ್ಪು ಕಟ್ಟಿಕೊಂಡು ಕೂತದೆ.. ಇನ್ ಮಹೇಶನ ಕಾಯ್ತ ಕೂರಕ್ಕೆ ಆಗೋಲ್ಲ… ನಾಳೆಯಿಂದ ಕಪ್ ನಿಂದೆ .. ಬೆಳಗಾತ ಎದ್ ವನೇ ಗುದ್ಲಿ‌ ಹಿಡಕೊಂಡ್ ತ್ವಾಟದ ಬದಿಗೇ ಹೋಗದೇ ಮಾಡಬಹುದು… ನಾಳೆ ಬೆಳಿಗ್ಗೆ ಕೊನೆ ಕೃಷ್ಣಮೂರ್ತಿಗೆ ಫೋನ್ ಮಾಡು.‌.. ಔಷಧ ಹೊಡಿಯದ್ ಯಾವತ್ತೂ ಅಂತ ಮಾತಾಡು… ಇನ್ನೂ ಔಷಧ ಹೊಡಿಲ ಅಂತಾದರೆ ಕಷ್ಟ… ನಮಗೆ “ಕೊನೆ ಕೃಷ್ಣಮೂರ್ತಿ” ಮುಖ್ಯ.. “ಕೊಹ್ಲಿ‌ ಅಲ್ಲ…”

ಹುಡುಗ್ರ ಯಾವುದೋ ಆಟ ಗೆದ್ದದ್ದಕ್ಕೆ ಈ ನಮೂನಿ ಸಂಭ್ರಮ ಪಡಬೇಕಾ…? ವಯಸ್ಸಾದ ಮುದುಕರು ಪದುಕರು ಊರಲ್ಲಿ ಇದೀವಿ ಈ ಮದ್ಯ ರಾತ್ರಿ ಪಟಾಕಿ ಹೊಡೀತೀರಲ್ಲ.. ಈ ಸೌಂಡ್ ಗೆ ಹಾರ್ಟ್ ಫೈಲ್ ಆದರೆ ಗತಿ ಏನು…? ಕ್ರಿಕೆಟ್ ನೋಡಬಕು ಖುಷಿ ಲಿ ಮನಕಂಬೇಕು… ಈ ಕ್ರಿಕೆಟ್
ಆಟದೋರು ಹರಿಶ್ಚಂದ್ರನ ತರ ಹರಾಜ್ ಆಗಿರ್ತಾರೆ… ಯಾರೋ ವೀರಬಾಹು ತರದ ಓನರ್ ಗಳಿಗೆ ಈ ಕಲಿಯುಗದಲ್ಲಿ ಮಾರಾಟ ಆಗಿರ್ತಾರೆ… ಎಲ್ಲಾ ದುಡ್ಡಿಗಾಗಿ ..

ಮನುಷ್ಯರು ಯಾಪಾರ ಆಗಿ ಹಿಂಗೆ ದುಡಿಯೋದು ಎಂಥ ಚಂದ.. ಯಂಥ ಆರ್ ಸಿಬಿ … ಒಂದು ದೇಶ ಅಲ್ಲ, ಒಂದು ತಂಡ ಅಲ್ಲ ..!! ಯಾರಿಗಾಗಿ ನೀವು ಸಂಬ್ರಮ ಪಡ್ತೀರ…? ಎಲ್ಲಾ ಮನೆಗೆ ಹೋಗಿ ಮಲಕಳ್ರಿ…. ನೆಡಿ ಪ್ರಮೋದ… ಕಪ್ ನಮ್ಮದೇ ಹಿಂಗ್ ಮಳೆ ಬಂದರೆ ಕೊಳೆಯೂ ನಮ್ಮದೇ….”
ಅಂತ ಕೂಗಿ ಮಂಞಾಥಯ್ಯ ಮನೆ ಕಡೆ ತಿರುಗಿದರು…ಹುಡುಗರ ಉಸ್ತಾಹ ತಣ್ಣಗೆ ಆಗಿತ್ತು..

ಚಿತ್ರ – ಶೇಷ ಭಟ್ಟರು ಹೇರಂಬಾಪುರ.
-ಪ್ರಬಂಧ ಅಂಬುತೀರ್ಥ
94818801869

Comments are closed.