ಮಗನ ಕೈಯಿಂದ ಏಟು ತಿನ್ನುವ ದುರದಷ್ಟ ತಾಯಿ | ಏಟಿಗೆ ಹೆದರಿ ರಾತ್ರಿ ಪಕ್ಕದ ಗುಡ್ಡದಲ್ಲಿ ಕಳೆದ ಅಜ್ಜಿ ಪುಳ್ಳಿಗಳು

ಸ್ವಂತ ಮಗನೇ ತನ್ನ ವೃದ್ಧ ತಾಯಿಯನ್ನು ಮತ್ತು ತನ್ನಿಬ್ಬರು ಪುಟ್ಟ ಮಕ್ಕಳಿಗೆ ಪೋಕ್ಕುಳ್ ಬರುವಂತೆ ಹೊಡೆದ ಘಟನೆ ಸುಳ್ಯದಿಂದ ಬಂದಿದ್ದು ಈಗ ಈ ಮೂವರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಬೈಲೆ ಸಮೀಪದ ಗುಳಿಗಪಾರೆ ಎಂಬಲ್ಲಿ ಉಮೇಶ ಎಂಬಾತ ಮದ್ಯದ ದಾಸನಾಗಿದ್ದ. ಮದ್ಯ ಸೇವಿಸಿ ತನ್ನ 80 ಇಳಿ ವಯಸ್ಸಿನ ವೃದ್ಧ ತಾಯಿಯನ್ನು ಹೊಡೆದಿದ್ದಾನೆ. ಜೊತೆಗೆ ಏನು ಅರಿಯದ ತನ್ನಿಬ್ಬರು ಮಕ್ಕಳನ್ನು ಮೈಯಲ್ಲಿ ಪೋಕ್ಕುಳ್ ಬರುವಂತೆ ಶಿಕ್ಷಿಸಿದ್ದಾನೆ.

ಇದೇ ರೀತಿ ಹೊಡೆದು-ಬಡಿದು ಆತನ ಹೆಂಡತಿ ತಿಂಗಳ ಹಿಂದೆ ದೇಲಂಪಾಡಿಯ ತನ್ನ ತವರು ಮನೆಗೆ ಹೋಗಿದ್ದಾರೆ. ಪತ್ನಿ ಮನೆ ಬಿಟ್ಟು ಹೋಗುವಾಗ ಮಕ್ಕಳನ್ನು ಕರೆದುಕೊಂಡು ಹೋಗಲು ಪತಿ ಉಮೇಶ ಬಿಡಲಿಲ್ಲ. ಮಕ್ಕಳು ಇಲ್ಲದೆ ಪತ್ನಿಗೆ ಹೋಗಲು ಮನಸ್ಸಿರಲಿಲ್ಲ. ಆದರೂ ಪತಿಯ ಹಿಂಸೆಗೆ ಹೆದರಿದ ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ಪತ್ನಿ ಹೋದ ಬಳಿಕ ತಾಯಿ ಹಾಗೂ ಮಕ್ಕಳಿಗೆ ಉಮೇಶ ಹೊಡೆಯಲು ಆರಂಭಿಸಿದ್ದಾನೆ.

ಆತ ಮೊನ್ನೆ ರಾತ್ರಿಯಿಡೀ ಕೂತು ಮನೆಯಲ್ಲೇ ಗೊಂಕುದ ಗಂಗಸರ ಬೇಯಿಸಿದ್ದ. ಅದನ್ನು ಕುಡಿದ ಮೇಲೆ ಆತ ರೌದ್ರಾವತಾರ ತಾಳಿದ್ದ. ಮನೆ ಬಿಟ್ಟು ಹೋಗುವಂತೆ ಅಮ್ಮ ಮಕ್ಕಳನ್ನು ತಾಕೀತು ಮಾಡಿದ್ದ.
ಇದರಿಂದ ಹೆದರಿದ ಅಜ್ಜಿ ಪುಳ್ಳಿಯರು ನಿನ್ನೆ ರಾತ್ರಿ ಹೆದರಿ ಸಮೀಪದ ಗುಡ್ಡದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ರಾತ್ರಿ ಕಳೆದಿದ್ದಾರೆ. ಚಳಿಗೆ ಮಕ್ಕಳು ಮತ್ತು ಅಜ್ಜಿ ಒಂದು ಸಮ ಆಗಿದ್ದಾರೆ.

ಬೆಳಗ್ಗೆ ಹೆದರಿ ಹೆದರಿಯೇ ಅನಿವಾರ್ಯವಾಗಿ ಮನೆಗೆ ಹೋದರೂ ಉಮೇಶ್ ಸ್ವಲ್ಪವೂ ಕರುಣೆ ತೋರಿಸದೆ ಜಗಳ ತೆಗೆದಿದ್ದಾನೆ. ಇದರಿಂದ ರೋಸಿ ಹೋದ ಅಜ್ಜಿ ಮಕ್ಕಳನ್ನು ಸ್ಥಳೀಯ ಪೊಲೀಸ್ ಸ್ಟೇಷನ್ನು ಮೊರೆಹೋಗಿದ್ದಾರೆ. ಅಲ್ಲಿಂದ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ಅಜ್ಜಿ ಗಂಗಮ್ಮ ಹಾಗೂ ಮಕ್ಕಳಾದ ರಾಜೇಶ್ ಮತ್ತು ಅನುಷಾಳ ಮೈಮೇಲೆ ಬರೆ ಬಾಸುಂಡೆಗಳು ಕಾಣಿಸಿವೆ. ಪೊಲೀಸರು ಗೊಂಕಿನ ಗಿರಾಕಿಯನ್ನು ಹುಡುಕುತ್ತಿದ್ದಾರೆ.

Leave A Reply

Your email address will not be published.