ಸುಳ್ಯ | ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಬೆಂಕಿ ಅವಘಡ | ಬಾಲಕಿಯ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ವರದಿ : ಹಸೈನಾರ್ ಜಯನಗರ
ಸುಳ್ಯ: ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಕಚೇರಿಯೊಳಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಘಟನೆ ಇಂದು ಮುಂಜಾನೆ ಸಂಭವಿಸಿದೆ.
ಮುಂಜಾನೆ 4.30 ರ ಸುಮಾರಿಗೆ ಶಾಲೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಇನ್ವರ್ಟರ್ ನಲ್ಲಿ ಬೆಂಕಿ ಎದ್ದು ಉರಿಯುತ್ತಿತ್ತು, ಅದೇವೇಳೆ ಎದುರುಗಡೆಯ ಮನೆಯವರಿಗೆ ಶಾಲೆಯತ್ತ ನೋಡಿದಾಗ ಬೆಂಕಿ ಕಾಣಿಸಿ ಕೊಂಡಿತು.
ರಂಜಾನ್ ತಿಂಗಳ ಸಮಯವಾದ ಕಾರಣ ಶಹರಿ ಕಾರ್ಯಕ್ರಮಕ್ಕೆ ಸ್ಥಳೀಯ ಮುಸಲ್ಮಾನ ಬಾಂಧವರು ತಮ್ಮ ತಮ್ಮ ಮನೆಯಲ್ಲಿ ಎದ್ದು ಭೋಜನ ವ್ಯವಸ್ಥೆಗೆ ತೊಡಗಿಕೊಂಡಾಗ ಪಕ್ಕದ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಸಣ್ಣ ಮಟ್ಟಿಗೆ ಬೆಂಕಿ ಜ್ವಾಲೆ ಕಾಣಿಸತೊಡಗಿತು.ಸ್ಥಳೀಯ ಕೆಲವರು ಕಸಕ್ಕೆ ಬೆಂಕಿ ಹಾಕಿ ಇರಬಹುದೆಂಬುದು ಊಹಿಸತೊಡಗಿದರು. ಇನ್ನೂ ಕೆಲವರು ಇಬ್ಬನಿಯ ಹನಿಗಳು ಆಗಿರಬಹುದೆಂದು ತಿಳಿದಿದ್ದರು. ಆದರೆ ಇದನ್ನು ಸೂಕ್ಷ್ಮತೆಯಿಂದ ನೋಡಿದ ಖಾದರ್ ಎಂಬವರ ಮನೆಯಲ್ಲಿ ಬಾಡಿಗೆಗೆ ವಾಸವಿರುವ ಉತ್ತರ ಕರ್ನಾಟಕ ಭಾಗದ ಶಿರಸಿ ಮುಂಡಗೋಡು ನಿವಾಸಿ ನಜೀರ್ ರವರ ಮಗಳು ನಜರಾನಾ ಎಂಬ ಐದನೆಯ ತರಗತಿಯ ವಿದ್ಯಾರ್ಥಿನಿ ಬೆಂಕಿ ಬಿದ್ದಿರುವ ವಿಷಯವನ್ನು ಪಕ್ಕದ ಮನೆಯ ಮರಿಯಮ್ಮ ಎಂಬುವರಿಗೆ ಓಡಿಹೋಗಿ ತಿಳಿಸಿರುತ್ತಾಳೆ. ಈ ವಿದ್ಯಾರ್ಥಿನಿ ಗಾಂಧಿನಗರ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ.
ಕೂಡಲೆ ಮರಿಯಮ್ಮ ಎಂಬುವವರು ಅಕ್ಕಪಕ್ಕದ ಮನೆಯವರಿಗೆ ವಿಷಯವನ್ನು ಮುಟ್ಟಿಸುತ್ತಾರೆ. ಸ್ಥಳೀಯರು ತಕ್ಷಣ ದುರುವಾಣಿಯ ಮೂಲಕ ಶಾಲೆಯ ಆಡಳಿತದವರಿಗೆ ವಿಷಯ ತಿಳಿಸಿದರು. ಪುಟ್ಟ ಬಾಲಕಿಯ ಸಮಯ ಪ್ರಜ್ಞೆಯಿಂದಾಗಿ ಸಂಭವಿಸುವ ಭಾರಿ ಅನಾಹುತ ತಪ್ಪಿದಂತಾಗಿದೆ.
ವಿಷಯ ತಿಳಿದ ಆಡಳಿತಾಧಿಕಾರಿ ಅಗ್ನಿಶಾಮಕ ಕಚೇರಿಗೆ ವಿಷಯ ತಿಳಿಸಿರು. ನಂತರ ಊರವರು ಹಾಗೂ ಅಗ್ನಿಶಾಮಕ ದಳದವರು ಸೇರಿ ಬೆಂಕಿ ನಂದಿಸಿದರು. ಘಟನೆಯಿಂದ ಕೆಲವು ದಾಖಲೆಗಳು ಬೆಂಕಿಗಾಹುತಿಯಾಗಿದೆ. ಉಳಿದಂತೆ ಬಹುಮುಖ್ಯವಾದ ದಾಖಲೆಗಳು ಸುಭದ್ರವಾಗಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.