ಬೆಳ್ತಂಗಡಿಯ ಮತ್ತು ಕಡಬದ ಯುವಕರಿಗೆ ಸೈಬರ್ ವಂಚಕರು ಕರೆ ಮಾಡಿ ವಂಚನೆಗೆ ಸ್ಕೆಚ್ | ಜಾಣತನ ಮೆರೆದ ಯುವಕರು
ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಬಹುಶಃ ಆನ್ಲೈನ್ ಕಳ್ಳರಿಗೂ ಸಾಕಷ್ಟು ಸಮಯ ಸಿಗುತ್ತಿದೆ ಅನ್ನಿಸುತ್ತೆ. ನರೇಂದ್ರ ಮೋದಿಯವರು 2000 ರೂಪಾಯಿಯನ್ನು ನಿಮ್ಮ ಖಾತೆಗೆ ಜಮಾ ಮಾಡುವ ಸುದ್ದಿಯನ್ನೇ ಹಲವೆಡೆ ಕೆಲವು ರೀತಿಯಲ್ಲಿ ಬಳಸಿಕೊಂಡು ವಂಚನೆಗೆ ತೊಡಗಿದ್ದಾರೆ.
ನಿನ್ನೆ ಬೆಳ್ತಂಗಡಿ ತಾಲೂಕಿನ ಬೆಳಾಲು ಎಂಬಲ್ಲಿ ಎಲೆಕ್ಟ್ರಿಕಲ್ ಕಾಂಟ್ರಾಕ್ಟ್ ಆಗಿರುವ ಶಿವ ಎಲೆಕ್ಟ್ರಿಕಲ್ ನ ಮಾಲಕರಾದ ಬಾಲಕೃಷ್ಣ ಅಮುಂಜಿ ಎಂಬವರ ಫೋನಿಗೆ ಕರೆಯೊಂದು ಬಂದಿತ್ತು. ಉತ್ತರ ಕನ್ನಡ ಶೈಲಿಯಲ್ಲಿ ಮಾತನಾಡಿದ ವ್ಯಕ್ತಿಯು,” ಸರ್ ನಿಮ್ಮಲ್ಲಿ ಎಟಿಎಂ ಕಾರ್ಡ್ ಇದ್ಯಾ ” ಅಂದಿದ್ದಾನೆ. ಹೌದು ಇದೆ ಅಂತ ಬಾಲಕೃಷ್ಣ ಅವರು ಉತ್ತರಿಸಿದ್ದಾರೆ.
ನಿಮ್ಮ ಅಕೌಂಟ್ ಅನ್ನು ಆಧಾರ್ ಕಾರ್ಡು ಗೆ ಲಿಂಕ್ ಮಾಡಿದ ತಕ್ಷಣ ನಿಮ್ಮ ಅಕ್ಕೌಂಟ್ ಗೆ ಮೋದಿಯವರ 2000 ರೂಪಾಯಿ ಬರುತ್ತದೆ. ಲಿಂಕ್ ಮಾಡಲಾ ಬೇಡ್ವಾ ? ” ಎಂದು ಅವಸರಿಸಿದ್ದಾನೆ ಅತ್ತಲಿನ ವ್ಯಕ್ತಿ.
ಬಾಲಕೃಷ್ಣ ಅವರಿಗೆ ತಕ್ಷಣ ಇದು ವಂಚಕರ ಜಾಲ ಅಂತ ತಿಳಿದು ತಮ್ಮ ಗೆಳೆಯನ ಕೈಗೆ ಫೋನು ಕೊಟ್ಟಿದ್ದಾರೆ. ಅವರು ಏನು, ಎಲ್ಲಿ, ಯಾಕೆ ಅಂತ ವಿಚಾರಿಸಲಾಗಿ ಎದುರಿನ ವ್ಯಕ್ತಿ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ ಮತ್ತು ಕರೆ ಕಡಿತ ಮಾಡಿದ್ದಾನೆ.
ಇಂತದ್ದೇ ಇನ್ನೊಂದು ಘಟನೆ ಕಡಬದ ಯುವಕನಿಗೆ ಕರೆ ಮಾಡಿರುವ ವಿಷಯ ಇಂದು ಶುಕ್ರವಾರ ನಡೆದಿದೆ.
ಬೆಂಗಳೂರಿನ ಬ್ಯಾಂಕೊಂದರ ಮ್ಯಾನೇಜರ್ ಎಂದು ತನ್ನನ್ನು ಪರಿಚಯಿಸಿಕೊಂಡ ವ್ಯಕ್ತಿಯು ಕಡಬದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ್ದ. ಕರೆ ಮಾಡುವ ಕೆಲ ಕ್ಷಣಗಳ ಹಿಂದೆ ಅವರ ಮೊಬೈಲಿಗೆ ಒಟಿಪಿ ಒಂದು ಬಂದಿತ್ತು. ನಿಮ್ಮ ವಿಜಯಾ ಬ್ಯಾಂಕ್ ಅಕೌಂಟ್ ಗೆ ಪ್ರಧಾನಿ ಮೋದಿಯವರ 2000 ರೂ.ಗಳನ್ನು ಹಾಕಲಾಗುತ್ತಿದೆ. ಈಗ ಬಂದಿರುವ ಒಟಿಪಿ ಸಂಖ್ಯೆಯನ್ನು ಕೊಡಿ ಅಂತ ಆತ ಕೇಳಿದ್ದಾನೆ.
ಒಟಿಪಿ ನೀಡದೆ ಹಣ ಹಾಕುವುದಾದರೆ ಸ್ವಾಗತ. ಇಲ್ಲದಿದ್ದರೆ ಬೇಡ ಎಂದು ಕಡಬದ ವ್ಯಕ್ತಿಯು ಜಾಣ ಉತ್ತರ ನೀಡಿದ್ದರು. ಆಗ ವಂಚಕ ಅಶ್ಲೀಲ ಪದಗಳನ್ನು ಬಳಸಿ ಕರೆ ಕಡಿತಗೊಳಿಸಿದ್ದಾನೆ.
ಈ ಇಬ್ಬರು ಜಾಗೃತ ಯುವಕರ ಜಾಣತನದಿಂದಾಗಿ ಸಾವಿರಾರು ರೂ. ಕಳೆದುಕೊಳ್ಳುವುದು ತಪ್ಪಿದಂತಾಗಿದೆ.