ವಿಶ್ವ ಪುಸ್ತಕ ದಿನ | ಬದುಕು ನಂಬಿಕೆಯ ಕಡಲು ಪುಸ್ತಕ ಪರಿಚಯ
“ಒಂದು ಪುಸ್ತಕ ಹತ್ತು ಜನ ಸ್ನೇಹಿತರಿಗೆ ಸಮ” ಎಂಬ ಮಾತಿದೆ. ವಿಶ್ವ ಪುಸ್ತಕ ದಿನದ ಪ್ರಯುಕ್ತ ಎಷ್ಟು ಜನ ಒಳ್ಳೆಯ ಸ್ನೇಹಿತರು ನಮಗೆ ಜೀವನದಲ್ಲಿ ಲಭಿಸುತ್ತಾರೆಯೋ ತಿಳಿಯದು, ಆದರೆ ಪುಸ್ತಕಗಳನ್ನು ಓದುವುದಕ್ಕೆ ಶುರು ಮಾಡಿದ ಮೇಲೆ ಪುಸ್ತಕಕ್ಕಿಂತ ಒಳ್ಳೆಯ ಸ್ನೇಹಿತ ನಮಗೆ ಇನ್ನೊಬ್ಬರಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಪುಸ್ತಕ ದಿನದ ಈ ಸಂದರ್ಭದಲ್ಲಿ ಲೇಖಕಿ ಶ್ರೀಮತಿ ಆರತಿ ಪಟ್ರಮೆ ಅವರು ಬರೆದ “ಬದುಕು ನಂಬಿಕೆಯ ಕಡಲು” ಎಂಬ ಪುಸ್ತಕದ ಪರಿಚಯ ಮಾಡಿಕೊಡುವ ಪ್ರಯತ್ನ ಇಲ್ಲಿದೆ.
ಈ ಪುಸ್ತಕದ ಶೀರ್ಷಿಕೆಯೇ ಹೆಚ್ಚು ಹತ್ತಿರವಾಗಿ ಬಿಡುತ್ತದೆ. ಇದರಲ್ಲಿ ಇರುವ ಮೂವತ್ತೇಳು ಲೇಖನಗಳೂ ಕೂಡ ಅಷ್ಟೇ ಮನಸ್ಸಿಗೆ ಆಪ್ತವಾಗುತ್ತವೆ. ಏಕೆಂದರೆ ಇದರಲ್ಲಿ ಹೇಳಿರುವ ಸಂಗತಿಗಳ ಮಹತ್ವ ಸರಳ ಭಾಷೆಯಲ್ಲಿ ಮನಮುಟ್ಟುವಂತಿದೆ. ಈ ಪುಸ್ತಕದ ವಸ್ತು ಮನೆ ಮತ್ತು ಮನೆಯನ್ನೇ ಕರ್ಮಭೂಮಿಯನ್ನಾಗಿಸಿಕೊಂಡ ಮಹಿಳೆ ಕುಟುಂಬ ವ್ಯವಸ್ಥೆಯನ್ನು ಪೋಷಿಸುವ ಜವಾಬ್ದಾರಿಯ ಕುರಿತಾಗಿದೆ.
ತಂತ್ರಜ್ಞಾನ ಬೆಳೆದಂತೆಲ್ಲಾ ವಿಶ್ವ ಕಿರಿದಾಗುತ್ತಿರುವುದೇನೋ ನಿಜ. ಆದರೆ ಹತ್ತಿರವಾಗಬೇಕಾದ ಮತ್ತು ಹತ್ತಿರವೇ ಇರಬೇಕಾದ ಸಂಬಂಧಗಳು ದೂರವಾಗುತ್ತಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಇದಕ್ಕೆ ಉತ್ತಮ ಉದಾಹರಣೆ, ಫೇಸ್ಬುಕ್, ಇನ್ಸ್ಟಾಗ್ರಾಮ್ ಇತ್ಯಾದಿ ಸಾಮಾಜಿಕ ಜಾಲಾತಾಣಗಳಲ್ಲಿ ಸಾವಿರಾರು ಜನ ಸ್ನೇಹಿತರು, ಫಾಲೋವರ್ಸ್ ಗಳು ಇರುತ್ತಾರೆ. ಆದರೆ ನಮಗೆ ಕಷ್ಟವೆಂದು ಬಂದಾಗ ಎಷ್ಟು ಜನ ಸಹಾಯಕ್ಕೆ ಬರುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಸಾಮಾಜದ ಆಗುಹೋಗುಗಳಿಗೆ ಲೈಕ್, ಕಮೆಂಟ್ ,ಶೇರ್ ಮಾಡುವ ಮೂಲಕ ಸ್ಪಂದಿಸುವ ನಾವುಗಳು ನಮ್ಮ ನಾಳೆಗಳಿಗಾಗಿ ದುಡಿಯುವ ಮತ್ತು ದುಡಿಯಲಿರುವ ಮನೆಮಂದಿಯ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆಯೇ ಎನ್ನುವುದು ಯಕ್ಷಪ್ರಶ್ನೆ? ಮೊದಲು ಮನೆಯ ಸಂಬಂಧ ಗಟ್ಟಿಗೊಳ್ಳಬೇಕು. ಆಗ ಸಮಾಜ ಸಮರ್ಥವಾಗುತ್ತದೆ. ಅದಕ್ಕಾಗಿ ಮನೆಯ ಒಳಗೆ ಮೊಬೈಲ್ ಬಳಕೆಯನ್ನು ನಿಯಂತ್ರಿಸೋಣ ಎಂದು ಲೇಖಕಿ ತಿಳಿಸಿದ್ದಾರೆ.
ಯಾವುದೇ ವ್ಯಕ್ತಿಯಾದರೂ ಹೊರಗಿನ ಸಮಾಜಕ್ಕೆ ತಾನು ಬೆಳೆದ ಪರಿಸರದ ರಾಯಭಾರಿ ಎನ್ನುವುದನ್ನು ಮರೆಯೋ ಹಾಗಿಲ್ಲ ಇನ್ನೂ ನಿಖರವಾಗಿ ಹೇಳುವುದಾದರೆ ತನ್ನ ಮನೆಯ ರಾಯಭಾರಿಯೂ ಹೌದು. ಆ ಕಾರಣದಿಂದಾಗಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುವ ಮನೆಯ ಪರಿಸರ ಹೇಗಿದೆ ಅನ್ನೋದು ಮುಖ್ಯ. ನಾವು ಮನಬಂದಂತೆ ವರ್ತಿಸುವ ಮುನ್ನ ನಮ್ಮನ್ನು ಮನೆಯಲ್ಲಿರುವ ಪುಟ್ಟ ಕಂಗಳು ನೋಡುತ್ತಿರುತ್ತವೆ, ಪುಟ್ಟ ಕಿವಿಗಳು ಆಲಿಸುತ್ತಿರುತ್ತವೆ ಎನ್ನುವುದನ್ನು ಮರೆಯೋ ಹಾಗಿಲ್ಲ.
ಸಮಾಜದಲ್ಲಿ ಅನೇಕ ಶೋಷಣೆಗಳು ಜರುಗುತ್ತಿರುವುದು ನಮ್ಮೆಲ್ಲರಲ್ಲೂ ದುಃಖವನ್ನು ತರುತ್ತದಾದರೂ, ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದದ್ದು ಶೋಷಣೆಗೆ ಒಳಗಾದ ಮತ್ತು ಶೋಷಣೆಗೆ ಕಾರಣೀಭೂತರಾದವರೂ ಯಾರದೋ ಮಕ್ಕಳಲ್ಲವೇ? ಎನ್ನುವುದು. ಹಾಗಾದರೆ ನಮ್ಮ ಮಕ್ಕಳು ಕ್ಷೇಮವೇ ಎನ್ನುವುದನ್ನು ಲೇಖಕಿ ಪ್ರಶ್ನಿಸುತ್ತಾರೆ.
ಅಂಕಗಳಿಗಾಗಿ ಓಡುತ್ತಿರುವ ಪ್ರಪಂಚ ಅದೆಷ್ಟೋ ಮುಗ್ಧ ಮನಸ್ಸುಗಳನ್ನು ಬಲಿಪಡೆದಿದೆ. ಇಲ್ಲಿ ಅಂಕಗಳು ಮುಖ್ಯವಲ್ಲ, ಬದಲಾಗಿ ಏನೇ ಬಂದರೂ ಸಾಧಿಸಿ ನಿಲ್ಲುತ್ತೇನೆ ಎನ್ನುವ ಮನೋಧರ್ಮ ಮುಖ್ಯ ಎಂದು ಮಕ್ಕಳಿಗೆ ಹೇಳುವವರು ಯಾರು? ಎನ್ನುವುದನ್ನು ನಿರ್ಧರಿಸಬೇಕು ಎಂದು ತಿಳಿಸಿದ್ದಾರೆ.
ಇವಿಷ್ಟಲ್ಲದೆ ಮನೆಯ ಶಕ್ತಿಕೇಂದ್ರ ಅಡುಗೆ ಮನೆಯನ್ನು ಮತ್ತು ಶೌಚಾಲಯವನ್ನು ಶುಚಿಯಾಗಿಟ್ಟುಕೊಳ್ಳಬೇಕು, ಮನೆಯಲ್ಲೊಂದು ಗಂಥಾಲಯವಿರಬೇಕು, ನಮ್ಮ ಜೀವನ ಸಂಗಾತಿಯನ್ನು ಹೇಗೆ ನೋಡಿಕೊಳ್ಳಬೇಕು, ಲೇಖಕಿಯ ಬಾಲ್ಯದ ನೆನಪುಗಳು ಮುಂತಾದ ಸಂಗತಿಗಳ ಕುರಿತು ಸೊಗಸಾಗಿ ತಿಳಿಸಲಾಗಿದೆ. ಒಟ್ಟಾರೆಯಾಗಿ ಈ ಪುಸ್ತಕ ಉತ್ತಮ ಸಂದೇಶವನ್ನು ಸಾರುವುದಂತೂ ನಿಜ.
-ಅರುಣ್ ಕಿರಿಮಂಜೇಶ್ವರ,
ತೃತೀಯ ಬಿ.ಎ
ವಿವೇಕಾನಂದ ಕಾಲೇಜು
ಪುತ್ತೂರು.