ಕುಪ್ಪೆಟ್ಟಿಯಲ್ಲಿ ಹೋಟೆಲ್ ತೆರೆದು ವ್ಯಾಪಾರ ಶುರುಮಾಡಿ ಲೈಸನ್ಸ್ ರದ್ದು ಮಾಡಿಕೊಂಡರು
ಇಂದು ಬೆಳಗ್ಗೆ ಕರಾಯ ಸಮೀಪದ ಕುಪ್ಪೆಟ್ಟಿಯಲ್ಲಿ ಇಬ್ಬರೂ ಹೋಟೆಲ್ ಮಾಲೀಕರು ಬೆಳಂಬೆಳಿಗ್ಗೆ ಹೋಟೆಲ್ ತೆರೆದು ಚಾ ಕಾಫಿ ತಿಂಡಿ ಮಾರಲು ರೆಡಿಯಾಗಿದ್ದರು. ಲಾಕ್ಡೌನ್ ಸಂದರ್ಭ ಯಾವುದೇ ಕಾರಣಕ್ಕೂ ಹೋಟೆಲು ಬಾರ್ ಅಂಡ್ ರೆಸ್ಟೋರೆಂಟ್ ತೆರೆಯುವಂತಿಲ್ಲ. ಇಬ್ಬರು ಆಸಾಮಿಗಳು ಎಲ್ಲವನ್ನೂ ಧಿಕ್ಕರಿಸಿ ವ್ಯಾಪಾರ ಶುರುಮಾಡಿದ್ದರು.
ಇದೇ ಕುಪ್ಪೆಟ್ಟಿಯ ಪಕ್ಕದ ಕರಾಯದಲ್ಲಿ ಕೋರೋನಾ ಸೋಂಕಿತ ಪತ್ತೆಯಾಗಿ ಆತ ಊರಿಡೀ ಓಡಾಡಿ ಇಡೀ ದಕ್ಷಿಣಕನ್ನಡಕ್ಕೇ ಗಾಬರಿ ಹುಟ್ಟಿಸಿದ್ದ. ಕರಾಯ ಕಲ್ಲೇರಿ ಕುಪ್ಪೆಟ್ಟಿ ಉಪ್ಪಿನಂಗಡಿ ಅವತ್ತು ಥರಗುಟ್ಟಿ ಹೋಗಿತ್ತು. ಅದೇನು ಪುಣ್ಯವೋ, ಆ ಶಂಕಿತ ಗುಣಮುಖನಾಗಿ ಬಂದಿದ್ದ. ಜನ ನಿಟ್ಟುಸಿರಿಟ್ಟಿದ್ದರು. ಆದರೆ, ಜಿಲ್ಲಾಡಳಿತ ಮಾತ್ರ ಸುತ್ತಮುತ್ತಲ ಹಲವು ವ್ಯಕ್ತಿಗಳಿಗೆ ಕ್ವಾರಂಟೈನ್ ಅವಧಿಯನ್ನು ವಿಸ್ತರಣೆಗೊಳಿಸಿತ್ತು.
ಹೋಟೆಲು ತೆರೆದ ಘಟನೆಯಿಂದ ಗಾಬರಿಗೊಂಡ ಊರವರು ತಕ್ಷಣ ಉಪ್ಪಿನಂಗಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಹಶೀಲ್ದಾರ್ ಗೆ ದೂರು ಹೋಗಿದೆ. ಸ್ಥಳಕ್ಕೆ ಆಗಮಿಸಿದ ಇನ್ಸಪೆಕ್ಟರ್ ಈರಯ್ಯ ಅವರು ಹೋಟೆಲ್ ಬಂದ್ ಮಾಡಿಸಿದ್ದಾರೆ. ತಹಶೀಲ್ದಾರ್ ಮತ್ತು ತಂಡ ಸ್ಪಂದಿಸಿ, ಗ್ರಾಮಪಂಚಾಯತ್ ಪಿಡಿಒಗೆ ಮಾತನಾಡಿ ಆ ಎರಡೂ ಹೋಟೆಲುಗಳ ಲೈಸನ್ಸ್ ಕ್ಯಾನ್ಸಲ್ ಮಾಡಿಸಿದ್ದಾರೆ.