ಇಂಟರ್ನೆಟ್ ನೋಡಿ, ಮನೆಯಲ್ಲೇ ಮದ್ಯ ತಯಾರಿಸಲು ಮುಂದಾಗಿದ್ದ ಇಬ್ಬರು ಮದ್ಯಾನ್ವೇಷಕರು ಅರೆಸ್ಟ್ !
ಚೆನ್ನೈ: ದೇಶದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆ ಲಾಕ್ಡೌನ್ ಆದಂದಿನಿಂದ ಪಿದ್ಕ್ ಮಾಸ್ಟರ್ ಗಳು ಹೊಸ ಹೊಸ ಅನ್ವೇಷಣೆಗಳತ್ತ ಹೊರಟಿದ್ದಾರೆ. ಬಾರ್ಗಳು ಯಾವಾಗ ಓಪನ್ ಆಗುತ್ತೋ ಕಾದು ಕೂರುವುದರಲ್ಲಿ ಏನೂ ಪ್ರಯೋಜನ ಇಲ್ಲ. ಅಷ್ಟಕ್ಕೂ ಯಾರು ಮೇ ಮೂರರವರೆಗೆ ಕಾಯುತ್ತಾರೆ? ಅಲ್ಲಿಯ ತನಕ ಕಾದು ಕೂತರೂ ಆನಂತರ ಕೂಡಾ ಪಕ್ಕಾ ಲಾಕ್ ಡೌನ್ ನಿಲ್ಲುತ್ತದೆ ಅಂತ ಗ್ಯಾರಂಟಿ ಇಲ್ಲ. ಈಗಿನ ಸ್ಥಿತಿ ನೋಡಿದ್ರೆ ಮತ್ತೊಂದು ತಿಂಗಳು ಮದ್ಯ ಇಲ್ಲದೆ ಹೋದರೂ ಅಚ್ಚರಿ ಇಲ್ಲ.
ಅದಕ್ಕಾಗಿ ತಮಿಳುನಾಡಿನಲ್ಲಿ ಅನ್ವೇಷಕರಿಬ್ಬರು ಇಂಟರ್ನೆಟ್ ನೋಡಿ ಮನೆಯಲ್ಲೇ ಮದ್ಯ ತಯಾರಿಸೋ ಸಾಹಸಕ್ಕೆ ಕೈ ಹಾಕಿ, ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಇದು ನಡೆದದ್ದು ಚೆನ್ನೈ ನ ನಾಮಕ್ಕಲ್ ಬಳಿಯ ಗ್ರಾಮವೊಂದರಲ್ಲಿ. ಮದ್ಯ ತಯಾರಿಸೋದು ಹೇಗೆ ಅಂತ ಅವರಿಗೆ ಗೊತ್ತಿರಲಿಲ್ಲ. ಗೊತ್ತಿಲ್ಲದೆ ಹೋದರೂ ಏನಂತೆ ? ಜಗದ್ಗುರು ಗೂಗಲ್ ಇದ್ದಾನಲ್ಲ ? ಆವನಿಗೆ ಕೇಳಿದ್ರೆ ಎಲ್ಲಾ ಬಿಚ್ಚಿಡುತ್ತಾನೆ. ಹಾಗೆ ಇಂಟರ್ನೆಟ್ ತೆರೆದು ಆನ್ಲೈನ್ ನಲ್ಲಿಯೇ ಕಲಿಕೆ ಶುರುಮಾಡಿದ್ದಾರೆ.
ಮದ್ಯ ತಯಾರಿಕೆಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಸಂಗ್ರಹಿಸಿ ಫರ್ಮೆಂಟೇಶನ್ ಆಗಲು (ಕಳಿಯಲು) ಬಿಟ್ಟಿದ್ದಾರೆ. ವಾರದೊಳಗೆ ಒಳ್ಳೆ ಘಮ ಘಮ ಮೂರಿ ಮೂಗಿಗೆ ಬಡಿದು ಈ ಕುಡುಕ ಅನ್ವೇಷಕರು ಪುಲಕಿತರಾಗಿದ್ದಾರೆ. ಆದರೆ ಅವರ ದುರಾದೃಷ್ಟ. ಮದ್ಯದ ಲಿಕ್ಕರ್ ಅನ್ನು ಇನ್ನೇನು ಕುದಿಸಬೇಕು ಅನ್ನುವಷ್ಟರಲ್ಲಿ, ಘಟನೆಯ ಘಾಟು ವಾಸನೆ
ಅದ್ಹೇಗೋ ಪೊಲೀಸರ ಮೂಗಿಗೆ ಬದಿಡಿದೆ.
ಆರೋಪಿಗಳು ಮದ್ಯ ತಯಾರಿಕೆಯಲ್ಲಿ ಬಹುತೇಕ ಯಶಸ್ವಿಯಾಗಿದ್ದರು. ಶುಕ್ರವಾರದಂದು ಇನ್ನೇನು ಭಟ್ಟಿ ಇಳಿಸಬೇಕಿತ್ತು. ಅಷ್ಟರಲ್ಲಿ ಟಪಾ ಟಪಾ ಬಾಗಿಲು ಬಡಿದ ಸದ್ದು. ಪೊಲೀಸರು ಅತಿಥಿಗಳ ಥರ ಬಂದು ಯುವಕರನ್ನು ಬಂಧಿಸಿದ್ದಾರೆ. ಯುವ ವಿಜ್ಞಾನಿಗಳ ಸಂಶೋಧನೆಗೆ ಅಡ್ಡಿಯಾಗಿದೆ !