ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಆಹಾರವಿಲ್ಲದೆ ತಲೆ ಕೆರೆದುಕೊಂಡು ಕೂತಿದ್ದ ಕೋತಿಗಳು | ಸಹಾಯಕ್ಕೆ ಧಾವಿಸಿದ ಶಾಸಕ ಹರೀಶ್ ಪೂಂಜಾ
ಬೆಳ್ತಂಗಡಿ : ಪ್ರಾಣಿಗಳು ಯಾವತ್ತೂ ಮನುಷ್ಯನಿಗೆ ಡಿಪೆಂಡ್ ಆಗಿರಲಿಲ್ಲ. ಮನುಷ್ಯ ಮಾತ್ರ ಪ್ರಾಣಿಗಳ ಮೇಲೆ ಹಲವು ರೀತಿಯಲ್ಲಿ ಅವಲಂಬಿಸಿದ್ದ. ಅದು ಆತನ ಆಹಾರಕ್ಕೆ ಆಗಿರಬಹುದು, ಅಥವಾ ತನ್ನ ಬೇಟೆಗೆ ಸಹಾಯಕ್ಕಾಗಿ ಇರಬಹುದು ಅಥವಾ ತಮ್ಮ ಸರಕು ಸಾಗಾಟಕ್ಕೆ, ರಕ್ಷಣೆಗೆ, ಯುದ್ಧಕ್ಕೆ ಮತ್ತು ವಿನೋದಕ್ಕೆ !
ಆದರೆ ಈಗ ನಾವು ಪ್ರತಿ ಜೀವ ಸಂಕುಲದ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದೇವೆ. ಈಗ ಎಲ್ಲವೂ ಮಾನವ ನಿರ್ದೇಶಿತ. ನದಿಯಲ್ಲಿ ನೀರಿಲ್ಲ. ಕಾಡು ಬತ್ತಿ ಹೋಗಿದೆ. ಕಾಡಿನಲ್ಲಿ ಆಹಾರ ಹುಡುಕಿ ಬದುಕಬೇಕಾದ ಪ್ರಾಣಿಗಳು ಮನುಷ್ಯರತ್ತ ಕೈ ಚಾಚುವ ಸ್ಥಿತಿ ನಿರ್ಮಾಣ ಆಗಿದೆ.
ಇಂತಹ ದೃಶ್ಯ ನಮಗೆ ಕಂಡು ಬಂದದ್ದು ಚಾರ್ಮಾಡಿ ಘಾಟಿಯಲ್ಲಿ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ವಾನರಗಳು ದಾರಿ ಬದಿಯಲ್ಲಿ ನಿಂತು ಆಹಾರಕ್ಕಾಗಿ ಸಪ್ಪೆ ಮೋನೆ ಹಾಕಿಕೊಂಡು ಕೂತಿದ್ದವು. ಹಿಂದೆಯೆಲ್ಲ ಘಾಟಿ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು ತಮಗೆ ಅನಗತ್ಯವಾದ ಆಹಾರವನ್ನು ಈ ಮಂಗಗಳಿಗೆ ನೀಡುತ್ತಿದ್ದರು. ಕೆಲವು ಪ್ರಾಣಿ ಪ್ರಿಯರು ಇಂತಹ ಕೊತಿಗಳಿಗೆಂದೇ ಆಹಾರ ಹಣ್ಣು ತರಕಾರಿ ತರುತ್ತಿದ್ದರು. ಆದರೆ ಈಗ ರಸ್ತೆಗಳು ಏಕಾಏಕಿ ಬಂದ್ ಆಗಿವೆ. ದಿನವೂ ಬರುತ್ತಿದ್ದ ಜನರಲ್ಲಿ ಹೋದ್ರಪ್ಪಾ ಅಂದುಕೊಂಡು, ಯೋಚಿಸಿ ತಲೆ ಕೆರೆದುಕೊಳ್ಳುತ್ತಾ ಮಂಗಗಳು ಕೊರಗುತ್ತಿದ್ದವು. ಈ ಸುದ್ದಿ ಬೆಳ್ತಂಗಡಿಯ ಶಾಸಕ ಶ್ರೀ ಹರೀಶ್ ಪೂಂಜಾ ಅವರ ಕಿವಿಗೂ ಬಿದ್ದಿತ್ತು.
ಅದಕ್ಕಾಗೇ ಅವರು ನಿನ್ನೆ ಶನಿವಾರ ಶಾಸಕರು ಎರಡು ಟ್ರೇ ಕಿತ್ತಳೆ, 2 ಟ್ರೇ ಕಲ್ಲಂಗಡಿ ಸಹಿತ ವಿವಿಧ ಹಣ್ಣುಗಳನ್ನು ಸ್ವತಃ ಹೋಗಿ ಅಲ್ಲಿದ್ದ ಮಂಗಗಳಿಗೆ ಉಣಬಡಿಸಿದರು. ಇತ್ತೀಚೆಗೆ ಶಿಶಿಲದಲ್ಲಿ ಮೀನುಗಳಿಗೆ ಇದೇ ರೀತಿ ಆಹಾರ ಪೂರೈಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಲಾಕ್ಡೌನ್ ಮುಗಿಯುವವರೆಗೆ ಅವುಗಳಿಗೆ ನಿತ್ಯ ಬೆಳಗ್ಗೆ ಆಹಾರ ಪೂರೈಸಲು ಸ್ಥಳೀಯ ಯುವಕರಿನ್ನು ನಿಯೋಜಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜಾ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಅವರದು ಮುಂದಾಲೋಚನೆಯ ಕಾರ್ಯ. ಒಂದೊಮ್ಮೆ ಆಹಾರ ಸಿಗದ ಮಂಗಗಳು ಏಕಾಏಕಿ ನಾಡಿಗೆ ಇಳಿದು ಬೆಳೆ ನಾಶಕ್ಕೆ ತೊಡಗಿದರೆ ಎಂಬ ಕಾರಣದಿಂದ ಮತ್ತು ಅವರ ಸಹಜ ಪ್ರಾಣಿ ಪ್ರೀತಿಯಿಂದ ಅವುಗಳಿಗೆ ಆಹಾರ ಪೂರೈಕೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದ್ದು. ಶಾಸಕರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Comments are closed.