ನಾಳೆಯಿಂದ ಪುತ್ತೂರು ಎಪಿಎಂಸಿಯಲ್ಲಿ ಅಡಿಕೆ ಖರೀದಿ ಆರಂಭ | ಸೂಚನೆ ಪಾಲಿಸಿ ವ್ಯವಹರಿಸಿ- ದಿನೇಶ್ ಮೆದು
ಪುತ್ತೂರು: ಅಡಿಕೆಗೆ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಮಾಡಬೇಕೆಂಬ ನಿಟ್ಟಿನಲ್ಲಿ ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ಖಾಸಗಿ ಅಡಿಕೆ ವರ್ತಕರು ಅಡಿಕೆ ಖರೀದಿಗೆ ಎಪ್ರಿಲ್ 20ರಿಂದ ಆರಂಭಿಸಲಾಗಿದ್ದು, ರೈತರಿಂದ ಅಡಿಕೆ ಸಂಗ್ರಹಿಸುವುದು ಮತ್ತು ಸಾಗಾಟಕ್ಕೆ ವಾಹನದ ಸೌಲಭ್ಯ ಮಾಡುವ ನಿಟ್ಟಿನಲ್ಲಿ ಎಪಿಎಂಸಿ ನಿರ್ದೇಶಕರು ತಮ್ಮ ತಮ್ಮ ಭಾಗದಲ್ಲಿ ರೈತರ ಜೊತೆ ಮಾತನಾಡಿ ವ್ಯವಸ್ಥೆ ಕಲ್ಪಿಸುತ್ತಾರೆ .ಇದಕ್ಕಾಗಿ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ. ಅದನ್ನು ಪಾಲಿಸಬೇಕು ಎಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಹೇಳಿದ್ದಾರೆ.
ತಾಲೂಕಿನ ಪ್ರತಿಯೊಂದು ಗ್ರಾಮಗಳ ರೈತರಿಗೂ ಉಪಯೋಗವಾಗುವಂತೆ ಆ ಭಾಗದ ಎಪಿಎಂಸಿ ನಿರ್ದೇಶಕರು ಅಡಿಕೆ ಸಂಗ್ರಹ ಮತ್ತು ಮಾರಾಟದ ವಾಹನಗಳ ವ್ಯವಸ್ಥೆ ಮಾಡಲಿದ್ದಾರೆ. ತಮ್ಮ ವಲಯಗಳಲ್ಲಿ ಪಿಕಪ್ ವಾಹನವನ್ನು ನಿಯೋಜನೆ ಮಾಡಿಕೊಂಡು ರೈತರು ಅಡಕೆ ತರಲು ಸ್ಥಳವನ್ನು ಗುರುತಿಸಬೇಕು. ಹೆಚ್ಚು ರೈತರಿಗೆ ಅನುಕೂಲಕರವಾದ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿಂದ ಎಪಿಎಂಸಿಗೆ ತರುವವರೆಗೆ ನಿರ್ದೇಶಕರು ತಮ್ಮ ಹೊಣೆಗಾರಿಕೆಯನ್ನು ವಹಿಸಿಕೊಳ್ಳುತ್ತಾರೆ.
ಕ್ಯಾಂಪ್ಕೋ ವತಿಯಿಂದ ಪ್ರಸ್ತುತ ಜಿಲ್ಲೆಯ ೯ ಕಡೆಗಳಲ್ಲಿ ಅಡಕೆ ಖರೀದಿ ಮಾಡಲಾಗುತ್ತಿದೆ. ಆದರೆ ಇದರಲ್ಲಿ ಕ್ಯಾಂಪ್ಕೋ ಸದಸ್ಯರಿಗೆ ಮಾತ್ರ ಅವಕಾಶವಿದೆ. ಕ್ಯಾಂಪ್ಕೋ ಸದಸ್ಯರಲ್ಲದ ಸಾವಿರಾರು ರೈತರು ಕ್ಯಾಂಪ್ಕೋ ಕೇಂದ್ರಗಳಲ್ಲಿ ಅಡಕೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಎಪಿಎಂಸಿ ಪ್ರಾಂಗಣದ ಖಾಸಗಿ ವರ್ತಕರಿಗೆ ಅಡಕೆ ಖರೀದಿ ಅವಕಾಶ ನೀಡಲಾಗಿದೆ. ಅಡಕೆ, ಗೇರುಬೀಜ, ಕಾಳುಮೆಣಸು, ತೆಂಗಿನಕಾಯಿ ಮಾರಾಟಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
1 ಕ್ವಿಂಟಾಲ್ ಅಡಿಕೆ ಮಾರಾಟಕ್ಕೆ ಅವಕಾಶ
ಪಹಣಿಪತ್ರ ಆಧಾರದಲ್ಲಿ ರೈತರ 1 ಕ್ವಿಂಟಾಲ್ ಮಾರಾಟ ಮಾಡಲು ಅವಕಾಶ ಕಲ್ಪಿಸುವ ಮಹತ್ವದ ನಿರ್ಧಾರವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು, ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಹಾಗೂ ಎಪಿಎಂಸಿ ವತಿಯಿಂದ ಕೈಗೊಳ್ಳಲಾಗಿದೆ ಎಂದರು.
ತಾಲೂಕಿನಾದ್ಯಂತ ೧೦ ಪಿಕಪ್ ನಿಯೋಜನೆ ಮಾಡಿಕೊಂಡು ತಾಲೂಕಿನ ಎಲ್ಲಾ ರೈತರಿಗೂ ಅನುಕೂಲವಾಗುವಂತೆ ಕ್ರಮಕೈಗೊಳ್ಳುವ ಜವಾಬ್ದಾರಿಯನ್ನು ನಿರ್ದೇಶಕರು ಹೊತ್ತುಕೊಳ್ಳುತ್ತಾರೆ ಎಂದು ದಿನೇಶ್ ಮೆದು ಹೇಳಿದರಲ್ಲದೆ ದ್ವಿಚಕ್ರ ವಾಹನಗಳಲ್ಲಿ ಸ್ವತಹ ರೈತರೇ ಅಡಿಕೆ ಬರಬಹುದು. ರೈತರು ಬರುವಾಗ ಕೃಷಿ ಪಾಸುಪುಸ್ತಕ, ಪಹಣಿ ಅಥವಾ ಇನ್ನಿತರ ರೈತ ದಾಖಲೆಗಳನ್ನು ತರಬೇಕು ಎಂದರು.
ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಮತ್ತು ರೈತರ ಸಂಕಷ್ಟಕ್ಕೆ ಮತ್ತು ಕೃಷಿ ಚಟುವಟಿಕೆ ನಡೆಯಬೇಕೆನ್ನುವ ತೀರ ಅಗತ್ಯದ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಪುತ್ತೂರು ಎಪಿಎಂಸಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.
Comments are closed.