ಪ್ರಧಾನಮಂತ್ರಿಗಳ ತೀರ್ಮಾನ, ಜನರ ಸಹಕಾರದಿಂದ ಕೊರೋನಾ ನಿಯಂತ್ರಣ – ನಳಿನ್ ಕುಮಾರ್

ಪುತ್ತೂರು: ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಸಂಜೀವ ಮಠಂದೂರು ಅವರ ವಾರ್‌ರೂಂ ಮೂಲಕ ಸಂಗ್ರಹಿಸಲಾದ ಸುಮಾರು 2 ಸಾವಿರಕ್ಕೂ ಅಧಿಕ ಆಹಾರದ ಕಿಟ್‌ಗಳನ್ನು ಏ.19ರಂದು ಪುತ್ತೂರು ಎಪಿಎಂಸಿ ಯಾರ್ಡ್‌ನಲ್ಲಿರುವ ರೈತ ಭವನದಿಂದ ಗ್ರಾಮಾಂತರ ಪ್ರದೇಶಗಳಿಗೆ ಪ್ರಮುಖರ ಮೂಲಕ ವಿತರಣೆ ಮಾಡಲಾಯಿತು.

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ,ಜಗತ್ತೇ ಕೊರೊನಾ ವೈರಸ್ ದಾಳಿಯಿಂದ ಸಂದಿಗ್ದ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಅಮೇರಿಕಾ, ಇಟಲಿ, ಪಾಕಿಸ್ಥಾನದಂತಹ ದೇಶಗಳು ಕೊರೊನಾದಿಂದ ತತ್ತರಿಸಿದೆ. ಆದರೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೊಳಿಸಿದ ಲಾಕ್‌ಡೌನ್ ತೀರ್ಮಾನ ಮತ್ತು ಅದಕ್ಕೆ ಜನರು ನೀಡಿದ ಸಹಕಾರಗಳಿಂದಾಗಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದರು.

ಲಾಕ್‌ಡೌನ್ ತೀರ್ಮಾನ ತೆಗೆದು ಕೊಂಡ ಬಳಿಕ ನಮ್ಮ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಆದರೂ ಎಚ್ಚರಿಕೆಯ ಅವಶ್ಯತೆ ಇದೆ. ಹಾಗಾಗಿ ಲಾಕ್‌ಡೌನ್ ಮುಂದುವರಿಸಲಾಗಿದೆ.

ಇವತ್ತು ಲಾಕ್‌ಡೌನ್ ಮಾಡಿದ್ದರ ಪರಿಣಾಮವಾಗಿ ಜಗತ್ತಿನಲ್ಲಿ ಅತೀ ಕಡಿಮೆ ಸಾವು ಅತೀ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಆಗಿದೆ. ಹಾಗಾಗಿ ಕೊರೋನಾ ನಿಯಂತ್ರಣವಿದೆ ಎಂಬ ಕಾರಣ ಮತ್ತು ಲಾಕ್‌ಡೌನ್ ಹಾಗೂ ಪ್ರಧಾನಮಂತ್ರಿಗಳ ವಿಶ್ವಾಸಕ್ಕೆ ನಂಬಿ ಜನರು ಕೊಟ್ಟ ಸಹಕಾರ ಬಹಳ ಉತ್ತಮವಾಗಿದೆ. ಲಾಕ್‌ಡೌನ್‌ನಿಂದಾಗಿ ಈ ದೇಶದ ರಕ್ಷಣೆ ಮಾಡುವ ಸೈನಿಕ ನಾನು ಎಂಬ ಬಾವನೆಯಿಂದ ಜನರು ಮನೆಯೊಳಗೆ ಕುಳಿತರಿಂದ ಕೊರೋನಾ ನಿಯಂತ್ರಣವಾಗಿದೆ ಎಂದರು.

ಜನರಿಗೆ ತೊಂದರೆ ಆಗದಂತೆ ಸಾಕಷ್ಟು ಯೋಜನೆ: ಕೇಂದ್ರ ಮತ್ತು ರಾಜ್ಯ ಸರಕಾರವು ಲಾಕ್‌ಡೌನ್ ಸಂದರ್ಭದಲ್ಲಿ ಹತ್ತಾರು ಜನರಿಗೆ ಸಮಸ್ಯೆ ಆಗಿರಬಹುದು.

ಆದರೂ ಯಾರಿಗೂ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಕೇಂದ್ರ ಸರ್ಕಾರವು ರೂ.1.70 ಸಾವಿರ ಕೋಟಿ ಅನುದಾನ ಮೀಸಲಿಟ್ಟು ಅದರಲ್ಲಿ ಜನಸಾಮಾನ್ಯರ ದುಖಃಗಳಿಗೆ ಕಣ್ಣಿರು ಒರೆಸುವ ಕೆಲಸ ಮಾಡುತ್ತಿದೆ.

ರೇಶನ್ ಕಾರ್ಡ್‌ನಲ್ಲಿ ಹೆಚ್ಚುವರಿ ಉಚಿತ ಅಕ್ಕಿ ವಿತರಣೆ, ಜನ್‌ಧನ್ ಯೋಜನೆಯಲ್ಲಿ ಖಾತೆಗೆ ಹಣ ಹಾಕಲಾಯಿತು. ಕಿಸಾನ್ ಕಾರ್ಡ್‌ದಾರರಿಗೆ ಹಣಕಾಸು ನೆರವು, ಕಟ್ಟಡ ಕಾರ್ಮಿಕರಿಗೆ ನೆರವು, ಬ್ಯಾಂಕ್ ಸಾಲಗಾರರಿಗೆ 3 ತಿಂಗಳ ಬಡ್ಡಿ ವಿನಾಯಿತಿ ಯೋಜನೆ ಇಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯಡಿಯೂರಪ್ಪ ಆವರ ನೇತೃತ್ವದಲ್ಲಿ ರಾಜ್ಯ ಸರಕಾರವೂ ರೈತರ ಹಾಲು ಖರೀದಿ, ರೇಶನ್ ವಿತರಣೆ, ಬಾಡಿಗೆ ಕೇಳದಂತೆ ಮನವಿ, ವಿದ್ಯುತ್ ಬಿಲ್ಲು ಅವಧಿ ವಿಸ್ತರಣೆ, ರೈತರಿಗೆ ವಿಶೇಷ ಸೌಲಭ್ಯಗಳನ್ನು ನೀಡುವ ಕೆಲಸ ಮಾಡಿದೆ. ಬಿಪಿಎಲ್ ಎಪಿಎಲ್ ಎರಡೂ ಕಾರ್ಡ್ ಇಲ್ಲದವರಿಗೂ ಅಕ್ಕಿ ಕೊಡುವ ವ್ಯವಸ್ಥೆ ಮಾಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಜಿಲ್ಲೆಯಲ್ಲಿ 16,500 ಮಂದಿಗೆ ಊಟ

ಪಕ್ಷದ ವತಿಯಿಂದ ಜಿಲ್ಲೆಯಲ್ಲಿ ಅಲ್ಲಲ್ಲಿ ಬಿಕ್ಷುಕರಾಗಿ ಇರುವವರು, ವಲಸೆ ಹೋಗುವವರು ಸೇರಿದಂತೆ ಸುಮಾರು 16500 ಮಂದಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಸಹಕಾರದಲ್ಲಿ ಪ್ರತಿದಿನ ಊಟವನ್ನು ನೀಡಲಾಗುತ್ತಿದೆ. ಅಲ್ಲದೆ ಮನೆ ಮನೆಗಳಿಗೆ ಉಚಿತ ಆಹಾರ ಕಿಟ್ ವಿತರಿಸಲಾಗುತ್ತಿದೆ.

ನಿಜವಾಗಿ ಕಷ್ಟದಲ್ಲಿರುವ ಕುಟುಂಬವನ್ನು ಕಾರ್ಯಕರ್ತರ ಮೂಲಕ ಗುರುತಿಸಿ ಅವರಿಗೆ ನೀಡುವ ಕೆಲಸ ಮಾಡಲಾಗುತ್ತಿದೆ. ಕೊರೊನಾ ಯುದ್ದವನ್ನು ಎಲ್ಲರೂ ಒಟ್ಟಾಗಿ ಸೇರಿಕೊಂಡು ಸಂಯಮ ಮತ್ತು ಸಂಕಲ್ಪದ ಮೂಲಕ ಎದುರಿಸಬೇಕು. ಇದರ ಜೊತೆ ಪುತ್ತೂರು ಶಾಸಕರು ಇಲ್ಲಿನ ಎನ್‌ಜಿಒ, ಸಂಘ ಸಂಸ್ಥೆಗಳನ್ನು, ದಾನಿಗಳನ್ನು ಸೇರಿಸಿಕೊಂಡು ಮಾಡುತ್ತಿರುವ ಉತ್ತಮ ಕೆಲಸಕ್ಕೆ ಅಭಿನಂದನೆ ಸಲ್ಲಿಸಬೇಕೆಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಮಹಾಮಾರಿ ಕೊರೋನಾ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವವರಿಗೆ ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವ ಸಂದೇಶವನ್ನು ಪ್ರಧಾನಿಯವರು ಕೊಟ್ಟಂತೆ ನಮ್ಮ ವಾರ್‌ರೂಮ್ ಮೂಲಕ ಇಲ್ಲದವರಿಗೆ ಸಹಾಯ ಮಾಡುವ ಕೆಲಸ ಆಗುತ್ತಿದೆ. ಇಲ್ಲಿ ಜಾತಿ,ಮತ, ಧರ್ಮಕ್ಕಿಂತ ಬಡತದ ಅನ್ನ ನೀಗಿಸುವ ಕೆಲಸ ಆಗಬೇಕು. ಇದಕ್ಕಾಗಿ ದಾನಿಗಳು ಮುಂದೆ ಬರಬೇಕು ಎಂದು ಹೇಳಿದ ಅವರು ಇಲ್ಲಿನ ತನಕ ಸುಮಾರು 7 ಸಾವಿರ ಕುಟುಂಬಗಳಿಗೆ ಮಾನದಂಡದ ಅಡಿಯಲ್ಲಿ ಆಹಾರ ಪೂರೈಕೆ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಆಟೋ ಚಾಲಕರು, ಕ್ಷೌರಿಕರು, ಡೋಬಿಯವರು ಉದ್ಯೋಗ ಇಲ್ಲದೆ ಸಂಕಷ್ಟದಲ್ಲಿರುವುದು ಗಮನದಲ್ಲಿದೆ. ಅವರಿಗೂ ವಿಶೇಷ ಅನುಕೂಲ ಮಾಡಲಾಗುವುದು.

ಕೊರೊನಾ ವಿರುದ್ದ ಕೆಲಸ ಮಾಡುತ್ತಿರುವ ಆಶಾ, ಅಂಗನವಾಡಿ, ಸರಕಾರಿ ಆಸ್ಪತ್ರೆ, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಸುಮಾರು 400ಕ್ಕೂ ಅಧಿಕ ಕಾರ್ಯಕರ್ತರು, ಸಿಬ್ಬಂದಿಗಳಿಗೆ ಈಗಾಗಲೇ ಅಕ್ಕಿ, ಇತರ ಆಹಾರ ಮತ್ತು ತರಕಾರಿಗಳನ್ನು ಒಳಗೊಂಡ ಕಿಟ್ ವಿತರಣೆ ಮಾಡಲಾಗಿದೆ. ಪುತ್ತೂರು ಮತ್ತು ಉಪ್ಪಿನಂಗಡಿ ದೇವಸ್ಥಾನ, ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾಲಯ ಇವುಗಳ ಸಹಯೋಗದಲ್ಲಿ ರೂ. 2 ಲಕ್ಷಕ್ಕೂ ಅಧಿಕ ಮೊತ್ತದ ಕಿಟ್‌ಗಳನ್ನು ವಿತರಣೆ ಮಾಡಲಾಗಿದ್ದು, ಮುಂದಿನ ದಿನ ಹಳ್ಳಿಯವರು ಅಗತ್ಯ ವಸ್ತುಗಳ ಖರೀದಿಗೆ ಪೇಟೆಗೆ ಬರಬಾರದು ಅಂತಹ ಕಾರ್ಯ ಶಾಸಕರ ವಾರ್‌ರೂಮ್ ಮೂಲಕ ಆಗುತ್ತಿದೆ ಎಂದರು.

ಎಪಿಎಂಸಿಯಲ್ಲಿ ಏ.19ರಂದು ನಡೆದ ಕಿಟ್ ವಿತರಣೆಯಲ್ಲಿ ಕ್ಯಾಂಪ್ಕೋ, ಮೆಸ್ಕಾಂ ಗುತ್ತಿಗೆದಾರರು, ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರು ಸಹಕಾರ ನೀಡಿದರು. ಕಿಟ್‌ಗಳನ್ನು ಗ್ರಾಮಾಂತರ ಭಾಗಕ್ಕೆ ಒತ್ತು ನೀಡಿ ಆಹಾರ ಪೂರೈಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು, ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಪಿಜಿ ಜಗನ್ನಿವಾಸ ರಾವ್, ಕ್ಯಾಂಪ್ಕೋ ಅಧ್ಯಕ್ಷರಾದ ಸತೀಶ್ ಚಂದ್ರ , ಎಪಿಎಂಸಿ ಅಧ್ಯಕ್ಷರಾದ ದಿನೇಶ್ ಮೆದು, ಬೂಡಿಯಾರ್ ರಾಧಾಕೃಷ್ಣ ರೈ, ಮಾಜಿ ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ್, ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

Leave A Reply

Your email address will not be published.