ಮಣಿಪಾಲ | ಮಹಿಳೆಯೊಬ್ಬರು ಓಡಿಸುತ್ತಿದ್ದ ಕಾರು ನಡು ರಸ್ತೆ ಯಲ್ಲೇ ಬೆಂಕಿಗಾಹುತಿ !!

ಉಡುಪಿ,ಎಪ್ರಿಲ್ 17 : ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರು ಏಕಾಏಕಿ ಬೆಂಕಿ ಹತ್ತಿಕೊಂಡು ಧಗ ಧಗ ಉರಿದ ಘಟನೆ ಮಣಿಪಾಲದಲ್ಲಿ ನಡೆದಿದೆ.

ಉಡುಪಿಯ ಬನ್ನಂಜೆ ನಿವಾಸಿ ಭಾಗೀರಥಿ ಅವರು ಮಾರುತಿ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಇಂದು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಹೋಗುತ್ತಿದ್ದರು. ಅಲ್ಲಿ ಆಕೆಯ ಸಂಬಂಧಿಕರೊಬ್ಬರು ಚಿಕಿತ್ಸೆ ಪಡೆಯುತ್ತಿದ್ದ ಕಾರಣದಿಂದ ಅವರ ಆರೋಗ್ಯ ವಿಚಾರಣೆಗೆ ಹೋಗುತ್ತಿದ್ದರು. ಇನ್ನೇನು ಆಸ್ಪತ್ರೆ ನೂರು ಮೀಟರ್ ಗಳ ದೂರದಲ್ಲಿರುವಾಗ  ಈ ದುರ್ಘಟನೆ ಸಂಭವಿಸಿದೆ.

ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದತ್ತಿದ್ದಂತೆ ಚಾಲಕಿ ಕಾರನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ಕಾರಿನಿಂದ ತಕ್ಷಣ ಹೊರಬಂದಿದ್ದಾರೆ. ಆದ್ದರಿಂದ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಕಾರಿನ ಬೆಂಕಿ ಗಮನಿಸಿ ಮಣಿಪಾಲ ಆಸ್ಪತ್ರೆಯ ಫೈರ್ ಇಂಜಿನ್ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ.

ಲಾಕ್ ಡೌನ್ ಇರುವ ಕಾರಣ ಕಾರನ್ನು ತುಂಬಾ ದಿನಗಳಿಂದ  ಓಡಿಸದೆ ಒಂದೇ ಕಡೆ ನಿಲ್ಲಿಸಿದ್ದರು.  ಆದ್ದರಿಂದ ಇಲಿಗಳು ವಯರ್ ಕಟ್ ಮಾಡಿ, ಶಾರ್ಟ್ ಸರ್ಕ್ಯೂಟ್ ಆಗಿ ಕಿಡಿ ಹುಟ್ಟಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮಣಿಪಾಲ ಠಾಣಾ ಇನ್ಸ್ ಪೆಕ್ಟರ್ ಮಂಜುನಾಥ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.