ಗೆಳೆಯರು ಪಾರ್ಟಿ ಕೇಳಿದರೆಂದು ಬ್ರಾಂಡ್ ನ್ಯೂ ಕಾರಿನಲ್ಲಿ ಮದ್ಯ ಸಾಗಾಟ, ದಾಳಿಯ ವೇಳೆ ಕಾರು ಬಿಟ್ಟು ಪರಾರಿ

ತುಮಕೂರು : ಇಲ್ಲೊಬ್ಬಂಗೆ ತಾನು ಇಷ್ಟಪಟ್ಟು ಕೊಂಡ ಬ್ರಾಂಡ್ ನ್ಯೂ ಕಾರಿಗಿಂತ ಮದ್ಯವೇ ಹೆಚ್ಚಾಗಿದೆ. ಆತ ತನ್ನ ಇನ್ನೂ ಗಾಡಿ ನಂಬರ್ ಸಿಗದ ಹೊಸ ಕಾರನ್ನೆ ಮದ್ಯ ಸಾಗಾಟಕ್ಕೆ ಬಳಸಿಕೊಂಡಿದ್ದಾನೆ.

ಅಬಕಾರಿ ಅಧಿಕಾರಿಗಳು ತಮಗೆ ದೊರೆತ ಖಚಿತ ಮಾಹಿತಿಯ ಬೆನ್ನು ಹತ್ತಿ ಈ ದಾಳಿ ನಡೆಸಿದ್ದಾರೆ. ತುಮಕೂರು ನಗರದ ರಾಷ್ಟ್ರೀಯ ಹೆದ್ದಾರಿ 48 ರ ಬೆಳಗುಂಬ ಎಂಬಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಬದಿಯಲ್ಲಿ ಹೊಸ ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ರಸ್ತೆ ಬದಿ ಬಿಟ್ಟು ಹೋಗಿರುವ ಕಾರಿನಲ್ಲಿ ಮೂರು ಬಾಕ್ಸ್​ ರಮ್, ಮೂರು ಬಾಕ್ಸ್​ ವಿಸ್ಕಿ, ಒಂದು ಬಾಕ್ಸ್​ ಬಿಯರ್ ಸೇರಿದಂತೆ ಒಟ್ಟು 62 ಲೀಟರ್ ಅಕ್ರಮ ಮದ್ಯವನ್ನು ದೊರೆತಿದೆ.

ತನ್ನ ಗೆಳೆಯರು ಹೊಸ ಗಾಡಿ ತೆಗೆದುಕೊಂಡಿದ್ದಕ್ಕೆ ಪಾರ್ಟಿ ಕೇಳುತ್ತಿದ್ದರು. ಅಷ್ಟರಲ್ಲಿ ಲಾಕ್ ಡೌನ್ ಘೋಷಣೆಯಾದ ಕಾರಣ ಮದ್ಯ ದೊರೆತಿರಲಿಲ್ಲ. ಹಾಗಾಗಿ ಪಾರ್ಟಿ ಮುಂದಕ್ಕೆ ಹೋಗಿತ್ತು. ಈಗ ಮತ್ತೆ ಲಾಕ್ ಡೌನ್ ಮುಂದುವರಿದ ಕಾರಣ ಗೆಳೆಯರು ಆತನಿಗೆ ಪಾರ್ಟಿಗಾಗಿ ದುಂಬಾಲು ಬಿದ್ದಿದ್ದರು. ಹೇಗೂ ರಜಾ ಸಮಯ, ದೊಡ್ಡದಾಗಿ ಆಚರಿಸಿಯೇ ಬಿಡೋಣ ಎಂದುಕೊಂಡು ಆತ ಬ್ಲಾಕಿನಲ್ಲಿ ಮದ್ಯ ಪಡೆದುಕೊಂಡಿದ್ದ. ಈಗ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡು ಅತ್ತ ಮದ್ಯವು ಇಲ್ಲ, ಇತ್ತ ಹೊಸ ಕಾರೂ ಇಲ್ಲದ ಸ್ಥಿತಿ.

Comments are closed.