ಅಡಿಕೆ ಖರೀದಿ ಆರಂಭ | ಅಡಿಕೆ ಬೆಳೆಗಾರರ ಸಂಘದಿಂದ ಕ್ಯಾಂಪ್ಕೋಗೆ ಕೃತಜ್ಞತೆ

ಪುತ್ತೂರು: ಲಾಕ್ಡೌನ್ ಸಂದರ್ಭ ಎಲ್ಲಾ ಅಡಿಕೆ ಖರೀದಿ ಕೇಂದ್ರಗಳೂ ಅನಿವಾರ್ಯವಾಗಿ ಮುಚ್ಚಲ್ಪಟ್ಟಿತ್ತು. ಹೀಗಾಗಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಸಹಿತ ರಾಜ್ಯದ ಅಡಿಕೆ ಬೆಳೆಗಾರರಿಗೆ ಸಂಕಷ್ಟವಾಗಿತ್ತು.

ಇದೀಗ ಕ್ಯಾಂಪ್ಕೋ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡಿನಲ್ಲಿ ಅಡಿಕೆ ಖರೀದಿಗೆ ಮುಂದಾಗಿದೆ. ಈ ಮೂಲಕ ಅಡಿಕೆ ಬೆಳೆಗಾರರಿಗೆ ನೈತಿಕ ಧೈರ್ಯ ತುಂಬಿದೆ. ಇದಕ್ಕಾಗಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಕ್ಯಾಂಪ್ಕೋಗೆ ಕೃತಜ್ಞತೆ ಸಲ್ಲಿಸುತ್ತದೆ ಎಂದು ಸಂಘದ ಅಧ್ಯಕ್ಷ ಅಶೋಕ್ ಕಿನಿಲ ಹಾಗೂ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ತಿಳಿಸಿದ್ದಾರೆ.

ಲಾಕ್ಡೌನ್ ಸಂದರ್ಭ ಎಲ್ಲಿಯೂ ಅಡಿಕೆ ಖರೀದಿ ನಡೆಸಲು ಸಾಧ್ಯವಾಗಿಲ್ಲ. ದಕ್ಷಿಣ ಕನ್ನಡ , ಕಾಸರಗೋಡು, ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಡಿಕೆಯೇ ಪ್ರಮುಖ ಬೆಳೆಯಾಗಿದೆ. ಅಡಿಕೆ ಬೆಳೆಗಾರರು ಅಡಿಕೆಯನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ.

ಇವರಿಗೆ ಅಡಿಕೆ ಮಾರಾಟ ಮಾಡದೇ ಯಾವುದೇ ವ್ಯವಹಾರ ಮಾಡಲು ಕಷ್ಟದ ಸನ್ನಿವೇಶ ಇತ್ತು. ಇದರ ಜೊತೆಗೆ ಉತ್ತರ ಭಾರತದಲ್ಲೂ ಅಡಿಕೆ ಮಾರಾಟ ಆಗದ ಸ್ಥಿತಿ ಕಂಡುಬಂದಿತ್ತು.

ಬೇಡಿಕೆ ಇದ್ದರೂ ಪೂರೈಕೆ ಕಷ್ಟದ ಸ್ಥಿತಿ ಇದೆ. ಮುಂದಿನ ದಿನಗಳಲ್ಲಿ ಇತರ ಎಲ್ಲಾ ಕೃಷಿ ಉತ್ಪನ್ನ ಖರೀದಿಗೆ ಅನುಕೂಲ ವಾತಾವರಣವನ್ನು ಆಡಳಿತ ಹಾಗೂ ಸಹಕಾರ ಸಂಘಗಳಿಂದ ಸೃಷ್ಟಿಯಾಗುವಂತಾಗಬೇಕು ಹಾಗೂ ಗ್ರಾಮೀಣ ಭಾಗದಲ್ಲೂ ಅಡಿಕೆ ಖರೀದಿ ಕೇಂದ್ರದ ಕ್ಯಾಂಪ್ಕೋ ಶಾಖೆಗಳಲ್ಲಿ ಕನಿಷ್ಟ ಒಂದು ದಿನದ ವ್ಯವಸ್ಥೆಯಾಗಬೇಕು ಎಂದು ಸಂಘದ ಅಧ್ಯಕ್ಷ ಅಶೋಕ್ ಕಿನಿಲ ಹಾಗೂ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಒತ್ತಾಯಿಸಿದ್ದಾರೆ.

Comments are closed.