2000 ₹ ಕೊಡುತ್ತೇವೆಂದು ಸುಳ್ಳು ಸುದ್ದಿ ಹಬ್ಬಿಸಿ ಕೂಲಿ ಕಾರ್ಮಿಕರ ಗಣತಿಗೆ ಹೊರಟಿತ್ತಾ ಕಾರ್ಮಿಕ ಇಲಾಖೆ ? | ಲಾಕ್ ಡೌನ್ ಉಲ್ಲಂಘಿಸಿ ಗುಂಪು ಸೇರಿಸಿದ್ದಕ್ಕೆ ಯಾಕಿನ್ನೂ ಇಲ್ಲ FIR ?!

2000 ₹ ಹಣ ಸಿಗುತ್ತದೆ ಎಂಬ ಮಾತು ಕೇಳಿ ಕೂಲಿ ಕಾರ್ಮಿಕರು ಗುಂಪು ಸೇರಿದ ಘಟನೆ ಮಂಗಳೂರಿನ ಕೂಳೂರಿನಲ್ಲಿ ಬುಧವಾರ ನಡೆದಿದೆ.

ಆದರೆ ಜನರು ಹಣ ಪಡೆಯುವ ಧಾವಂತದಲ್ಲಿ ಸಾಮಾಜಿಕ ಅಂತರ ಮರೆತು ಒಂದು ಕಡೆ ಸೇರಿದ ಘಟನೆ ನಡೆಯಿತು. ಮಂಗಳೂರು ಕೂಳೂರಿನ ಕಟ್ಟಡವೊಂದರಲ್ಲಿ ಕಾರ್ಮಿಕರ ಮಾಹಿತಿ ಪಡೆದು ಕೊಂಡು ಹಣವನ್ನು ಅವರ ಖಾತೆಗೆ ಜಮೆ ಮಾಡಲಾಗುವುದು ಎಂಬ ಸುದ್ದಿಯಿಂದ ಸುಮಾರು 700 ಜನ ಕೂಲಿ ಕಾರ್ಮಿಕರು ಸೇರುವಂತಾಯಿತು.

ಇತ್ತ ಕೂಲಿ ಕಾರ್ಮಿಕರ ಮಾಹಿತಿ ಸಂಗ್ರಹಿಸುವಂತೆ ಕಾರ್ಮಿಕ ಇಲಾಖೆಗೆ ಸರಕಾರ ನಿರ್ದೇಶನ ನೀಡಿದ್ದು, ಇದಕ್ಕಾಗಿ ಕಾರ್ಮಿಕರನ್ನು ಒಂದೆಡೆ ಸೇರುವಂತೆ ಮಾಡಿದರೆ ಸುಲಭವಾಗಿ ಮಾಹಿತಿ ಪಡೆಯಲು ಸಾಧ್ಯ ಎಂಬ ಯೋಚನೆಯಿಂದ ಇಲಾಖೆಯ ಬುದ್ದಿವಂತ ಅಧಿಕಾರಿಗಳೇ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದರೇ ಎಂಬ ಅನುಮಾನ ಕಾಡುತ್ತಿದೆ.

ಪಾಪ, ಲಾಕ್‌ಡೌನ್ ನಿಂದಾಗಿ ಕೈಯಲ್ಲಿ ಕೆಲಸವಿಲ್ಲದೆ, ಕಿಸೆಯಲ್ಲಿ ಹಣ ವಿಲ್ಲದೆ ಪರದಾಡುತ್ತಿದ್ದ ಕಾರ್ಮಿಕರಿಗೆ 2000 ಹಣ ಸಿಗುತ್ತದೆ ಎಂಬ ಸುದ್ದಿ ಮರಳುಗಾಡಿನಲ್ಲಿ ಓಯಸೀಸ್ ದೊರೆತಂತೆ ಆಗಿದೆ. ದುಡ್ಡು ಸಿಗುತ್ತದೆ ಎಂದು ಖುಷಿಯಿಂದ ಸಿಕ್ಕ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಕಾರ್ಮಿಕರು ಸಾಮಾಜಿಕ ಅಂತರವನ್ನೇ ಕಾಯ್ದು ಕೊಳ್ಳದೆ ಬೃಹತ್ ಗುಂಪು ಸೇರಿದ್ದರು.

” ನಮ್ಮ ಬ್ಯಾಂಕ್ ಖಾತೆಗೆ 2000 ರೂ. ಹಣ ಬರುತ್ತದೆ, ಅದಕ್ಕಾಗಿ ಇಲ್ಲಿ ಬಂದು ನಾವೆಲ್ಲಾ ನಿಂತಿದ್ದೇವೆ ” ಎಂದು ಕಾರ್ಮಿಕರೊಬ್ಬರು ಹೇಳಿದ್ದಾರೆ. ಆದರೆ ಯಾರು ಹೇಳಿದ್ದು ಎಂದು ಕೇಳಿದರೆ ಯಾರಿಗೂ ಗೊತ್ತಿಲ್ಲ.

ಆ 700 ಜನರಲ್ಲಿ ಮಾಹಿತಿ ಹುಟ್ಟಿಕೊಂಡ ಮೂಲವನ್ನು ಹುಡುಕುವುದು ಕಷ್ಟ. ಎಲ್ಲರೂ ನಿಯತ್ತಾಗಿ ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಗಳನ್ನು ಹಿಡಿದುಕೊಂಡು ಸರತಿ ಸಾಲುಗಳಲ್ಲಿ ಮಧ್ಯಾಹ್ನ 11.30 ಯಿಂದ 3.30 ಯವರೆಗೆ ಜನ ಜಂಗುಳಿ ಸೇರಿದ್ದರು. ಮಾಹಿತಿ ಪಡೆಯುವವರ ಬಳಿ ಯಾಕಾಗಿ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆ ಸಂಖ್ಯೆ ಪಡೆಯಲಾಗುತ್ತಿದೆ ಎಂದು ಕೇಳಿದರೆ, ನಮಗೆ ಡಿಸಿ ಕಚೇರಿಯಿಂದ ಕೂಲಿ ಕಾರ್ಮಿಕರ ಮಾಹಿತಿ ಪಡೆಯಲು ಹೇಳಿದ್ದಾರೆ. ಆದರೆ ಯಾರಿಗೂ 2000 ರೂ. ಬ್ಯಾಂಕ್ ಖಾತೆಗೆ ಹಾಕುತ್ತಿಲ್ಲ ಎಂದರು.

ಸ್ಥಳಕ್ಕೆ ಆಗಮಿಸಿದ್ದ ಕಾರ್ಮಿಕ ಅಧಿಕಾರಿಗಳನ್ನು ಕೂಲಿ ಕಾರ್ಮಿಕರು ಮುತ್ತಿಗೆ ಹಾಕಿದರು. ಆದರೆ ಅವರು ಕಾರು ಚಲಾಯಿಸಿ ಹೊರಟೇ ಹೋದರು. ಮಾಹಿತಿ ಪಡೆಯುವವರೂ ತಮ್ಮ ತಮ್ಮ ಬೈಕ್ ಏರಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಬಡಪಾಯಿ ಕಾರ್ಮಿಕ ಬಿಸಿಲಿಗೆ ಒಣಗಿಕೊಂಡು ನಿಂತದ್ದೆ ಬಂತು. ಒಟ್ಟಿನಲ್ಲಿ 2000 ಸಿಗುತ್ತದೆ ಎಂದು ಬಂದವರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮನೆ ದಾರಿ ಹಿಡಿದರು. ಆದರೆ ಈ ಬಗ್ಗೆ ಪೊಲೀಸ್ ಇಲಾಖೆಗೆ, ಸ್ಥಳೀಯ ಕಾರ್ಪೊರೇಟರ್, ಮಹಾನಗರ ಪಾಲಿಕೆಯ ಆಯುಕ್ತರು ಯಾರಿಗೂ ಸರಿಯಾದ ಮಾಹಿತಿ ಇಲ್ಲ. ಒಂದಂತೂ ಸ್ಪಷ್ಟ.

ಇದರಲ್ಲಿ ಕಾರ್ಮಿಕ ಇಲಾಖೆಗಳ ಕೈವಾಡ ಇದೆ. ಅವರು 2000 ಕೊಡುತ್ತೇವೆ ಅಂದು ಹೇಳಿಲ್ಲದೆ ಇರಬಹುದು, ಆದರೆ ಅದು ಹೇಗೆ ಪೊಲೀಸರ ಗಮನಕ್ಕೆ ಬಾರದೆ ಕಾರ್ಮಿಕರ ಗುಂಪು ಸೇರಿಸುತ್ತಿದ್ದಾರೆ ? ಲಾಕ್ ಡೌನ್ ಸಮಯದಲ್ಲಿ ಇವರಿಗೆ ಏನು ಶಿಕ್ಷೆ ? ಪೊಲೀಸರು ತಕ್ಷಣ FIR ದಾಖಲಿಸಿಕೊಳ್ಳಬೇಕಿದೆ.

Comments are closed.