ಕಡಬ | ಮಗಳ ಹುಟ್ಟುಹಬ್ಬಕ್ಕೆ ಬಿದಿರಿನ ಮನೆ ಉಡುಗೊರೆ ನೀಡಿದ ಅಪ್ಪ | ಮಗಳು ಫುಲ್ ಖುಷ್

ಕಡಬ: ಕಡಬ ತಾಲೂಕು ಮರ್ದಾಳದ ವ್ಯಕ್ತಿಯೊಬ್ಬರು ತನ್ನ ಮಗಳ ಹುಟ್ಟು ಹಬ್ಬಕ್ಕೆ ವಿಶಿಷ್ಟ ಉಡುಗೊರೆ ನೀಡಿ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಮರ್ದಾಳ ಕೋಲಂತಾಡಿ ನಿವಾಸಿ ಮಂಜುನಾಥ್ ಎಂಬುವವರು ತನ್ನ ಮಗಳು ಯಾನ್ವಿತ ಎಂ ಕೆ ಳ ಹುಟ್ಟುಹಬ್ಬಕ್ಕೆ ಬಿದಿರನ್ನು ಬಳಸಿದ ಗೋಡೆಗಳಿಗೆ ಹುಲ್ಲಿನ ಮಾಡಿನ ಮನೆಯೊಂದನ್ನು ನಿರ್ಮಿಸಿ ಮನೆಗೆ ‘ಮುನ್ನಿ ‘ ಎಂಬ ಹೆಸರನ್ನೂ ಇಟ್ಟು ಮಗಳ ಮನಸು ಗೆದ್ದಿದ್ದಾರೆ.

ತನ್ನ ಪುತ್ರಿಯ 11 ನೆಯ ಹುಟ್ಟುಹಬ್ಬ ವನ್ನು ಮಂಗಳವಾರ ಆಚರಿಸಿದ್ದು ಈ ಭಾರಿ ವಿಶಿಷ್ಟ ಆಲೋಚನೆಯೊಂದಿಗೆ ಈ ಮನೆಯನ್ನು ನಿರ್ಮಿಸಿ ಅವಳಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಮನೆ ಪಕ್ಕದಲ್ಲೆ ಮರವೊಂದಕ್ಕೆ ಸುತ್ತಾಗಿ ಬಿದಿರಿನಿಂದ ಮನೆ ನಿರ್ಮಿಸಿದ್ದಾರೆ. ವಿದ್ಯುತ್ ವ್ಯವಸ್ಥೆಯೂ ಕಲ್ಪಿಸಿದ್ದಾರೆ. ತಾನೊಬ್ಬನೇ ಶ್ರಮ ವಹಿಸಿ ಈ ಕಾರ್ಯ ಮಾಡಿದ್ದಾರೆ. ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಇದ್ದು ಸಾಕಷ್ಟು ಸಮಯ ದೊರೆಯುತ್ತಿದೆ. ಈ ಸಮಯವನ್ನು ಅವರು ಕ್ರಿಯೇಟಿವ್ ಆಗಿ ಬಳಸಿಕೊಂಡಿದ್ದಾರೆ.

ಅಲ್ಲದೆ ಮಗಳಿಗೆ ಹುಟ್ಟು ಹಬ್ಬಕ್ಕೆ ಕೊಡಲು ಹೊರಗಡೆಯಿಂದ ಉಡುಗೊರೆ ಖರಿದೀಸಲು ಅವಕಾಶವಿಲ್ಲ. ಹೀಗಾಗಿ ಪುತ್ರಿಗೆ ವಿಶೇಷ ರೀತಿಯ ಕೊಡುಗೆ ನೀಡುವ ಆಲೋಚನೆ ಇಲ್ಲಿ ಕಾರ್ಯರೂಪಕ್ಕೆ ತರಲಾಗಿದೆ ಎನ್ನುತ್ತಾರೆ ಮಂಜುನಾಥ್ .

ಈ ಮನೆಯೊಳಗೆ ಕುಳಿತು ಓದಲು ಬರೆಯಲೂ ವ್ಯವಸ್ಥೆ, ವಿಶ್ರಾಂತಿಗಾಗಿಯೂ ಹೊಸ ವಿನ್ಯಾಸ ಮಾಡಲಾಗಿದೆ. ತನಗೆ ಅಪ್ಪ ನೀಡಿದ ಮನೆ ಉಡುಗೊರೆಯಿಂದ ಬಾಲೆ ಫುಲ್ ಖುಷಿಯಾಗಿದ್ದಾಳೆ.

ಮನೆಯೆಲ್ಲ ಓಡಾಡಿಕೊಂಡು ತನ್ನ ಸಂತೋಷವನ್ನು ಮನೆ ಮಂದಿಯ ಜೊತೆ ಹಂಚಿಕೊಳ್ಳುತ್ತಿದ್ದಾಳೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸದೆ ಹೊಸ ಪರಿಸರವನ್ನು ಸೃಷ್ಟಿಸಿ ಸರಳವಾಗಿ ಆಚರಿಸಿರುವುದಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Comments are closed.