ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದಲ್ಲೇ ಮನೆ ಮಾಡಿದ ಸವಣೂರಿನ ವಿವೇಕ್ ಆಳ್ವ

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದಲ್ಲೇ ಕುಳಿತ ವಕೀಲರ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ. ಆದರೆ ಇಲ್ಲೊಬ್ಬರು ತಾನೇ ಬೆಳೆಸಿದ ಕಾಡಿನ ನಡುವೆ ಮರದ ಮೇಲೆಯೇ ಮನೆಯ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಪರಿಸರ ವೀಕ್ಷಣೆಯಲ್ಲಿ ಸಂಭ್ರಮಪಡುತ್ತಿದ್ದಾರೆ.

ಅವರು ಬೇರಾರೂ ಅಲ್ಲ…ಉಪನ್ಯಾಸಕ, ಸಂಶೋಧಕ, ಕೃಷಿಕರಿಗಾಗಿಯೇ ಕೃಷಿ ಡೈರಿ ರೂಪಿಸಿದ ಕಡಬ ತಾಲೂಕಿನ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದ ನಡುಮನೆಯ ವಿವೇಕ್ ಆಳ್ವ ಅವರು.

ಇವರ ಕೃಷಿ ಸಂಶೋಧನೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ‌. ಪ್ರಚಾರ ಬಯಸದ ಆದಮ್ಯ ಪ್ರತಿಭೆ ಆಳ್ವಾ ಅವರು.

ಅವರು ತನ್ನ ಮನೆಯ ಸಮೀಪವಿರುವ ತಾವೇ ನಿರ್ಮಿಸಿದ ಕಾಡಿನಲ್ಲಿ ಒಂದು ಮರದ ಮೇಲೆ ಗುಡಿಸಲನ್ನು ಮಾಡಿದ್ದು, ಅದಕ್ಕಾಗಿ 7 ದಿನಗಳ ಕಾಲ ಕೆಲಸ ಮಾಡಿದ್ದಾರೆ. ಈ ಗುಡಿಸಲಿಗಾಗಿ ಸಾಕಷ್ಟು ಬೆವರು ಅವರ ಮೈಯಿಂದ ಹರಿದಿದೆ. ಇದು ಸಾಕಷ್ಟು ಸಾಮಾಜಿಕವಾಗಿ ಬಹಳಷ್ಟು ದೂರ ಇದ್ದು ಜೊತೆಗೆ ಅದ್ಭುತ ಅನುಭವವನ್ನು ನೀಡುತ್ತದೆ ಎನ್ನುತ್ತಾರೆ ವಿವೇಕ್ ಆಳ್ವ.

ಈ ಮರದ ಮೇಲಿನ ಗುಡಿಸಲಿನಲ್ಲಿ ಹಾಯಾಗಿ ಹಕ್ಕಿಗಳ ಚಿಲಿಪಿಲಿ, ಪುಸ್ತಕ ಓದುವುದು. ಏಕಾಂತದಲ್ಲಿ ಸಂಗೀತ ಕೇಳುವುದು, ತಂಪಾದ ಗಾಳಿಯೊಂದಿಗೆ ಪ್ರಕೃತಿ ವೀಕ್ಷಣೆ ಮಾಡುವುದು ಅವರ ನೆಚ್ಚಿನ ಹವ್ಯಾಸಗಳು. ಅಷ್ಟೇ ಅಲ್ಲದೆ ಏನೂ ಮಾಡದೇ, ಒಬ್ಬರೇ ಮೌನದೊಂಡಿಗೆ ಅನುಸಂಧಾನ ಕ್ಕಿಳಿದು ಕಳೆದುಹೋಗುವ ಅನುಭವ !

ಈ ಗುಡಿಸಲಿನ ಇಕ್ಕೆಲಗಳಲ್ಲಿ ಹಕ್ಕಿಗಳಿಗೆ ನೀರುಣಿಸಲು ಸಣ್ಣದಾದ ನೀರಿನ ಪಾತ್ರೆಗಳನ್ನು ಅಳವಡಿಸಿದ್ದಾರೆ. ಭಣಗುಡುವ ಬಿಸಿಲಿಗೆ ಗಂಟಲು ಒಣಗಿಸಿಕೊಂಡ ಹಕ್ಕಿಗಳು ಎರಡು ಗುಟುಕು ನೀರು ಕುಡಿದು, ನೀರಿನಲ್ಲಿ ರೆಕ್ಕೆ ಮುಳುಗಿಸಿ ಮತ್ತೊಂದಷ್ಟು ತಂಪು ಮಾಡಿಕೊಂಡು ಆಳ್ವಾ ಫ್ಯಾಮಿಲಿಗೆ ಕಣ್ಣಂಚಿನಲ್ಲೇ ಥ್ಯಾಂಕ್ಸ್ ಹೇಳಿ ಸಾಗುತ್ತವೆ.

ಈ ಗುಡಿಸಲಿನ ಸುತ್ತ ಬಿಸಿಲು ಹಾಗೂ ಸುರಕ್ಷತೆಯ ದೃಷ್ಟಿಯಿಂದ ಶಾಡೋ ನೆಟ್ ಹಾಕಲಾಗಿದೆ. ನಿಮಗೂ ಇವರ ಈ ಕಾರ್ಯವನ್ನು ನೋಡಬೇಕಾದರೆ ಲಾಕ್‌ಡೌನ್ ಅವಧಿ ಮುಗಿಯಲೇಬೇಕು. ನೀವೂ ಈ ರೀತಿ ಮಾಡಬಹುದು, ಒಂದು ಹೊಸ ಅನುಭವಕ್ಕಾಗಿ ನಿಮ್ಮನ್ನು ನೀವು ತೆರೆದುಕೊಳ್ಳಬಹುದು. ಅದಕ್ಕಾಗಿ ಈ ವಿಡಿಯೋ ನೋಡಿ.

Comments are closed.