ಮಾಂಸದ ಕೋಳಿ ಧಾರಣೆ 200 ರೂ.ಗಳಿಗೆ ಏರಿಕೆ

ವರದಿ : ಹಸೈನಾರ್ ಜಯನಗರ

ಸುಳ್ಯ: ಕೋವಿಡ್ 19 ಮತ್ತು ಹಕ್ಕಿ ಜ್ವರದ ಕಾರಣದಿಂದ ಕಳೆದ ತಿಂಗಳು ಧಾರಣೆ ಕುಸಿದು ಕೆ.ಜಿ.ಗೆ 20 ರೂ. ಇದ್ದ ಮಾಂಸದ ಕೋಳಿ (ಬ್ರಾಯ್ಲರ್‌) ಇದೀಗ 200, 220 ರೂ. ತನಕ ಏರಿಕೆ ಕಂಡಿದೆ.

ಮಾರ್ಚ್‌ ಮೊದಲ ವಾರದಲ್ಲಿ ಏಕಾಏಕಿ ಪಾತಾಳಕ್ಕೆ ಇಳಿದಿದ್ದ ಕೋಳಿ ದರ ಎಪ್ರಿಲ್‌ ಮೊದಲ ವಾರದ ಬಳಿಕ ಗಗನಕ್ಕೇರಿದೆ. ಉಚಿತವಾಗಿ ಕೊಟ್ಟರೂ ಜನ ತಿರಸ್ಕರಿಸುತ್ತಿದ್ದ ಕೋಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಕಂಡು ಬಂದಿದೆ.

ಪೂರೈಕೆ ಕೊರತೆ

ರೋಗ ಭೀತಿ ಹಿನ್ನೆಲೆಯಲ್ಲಿ ಕೋಳಿಗೆ ಬೇಡಿಕೆ ಕಡಿಮೆ ಆದ ಪರಿಣಾಮ ವ್ಯಾಪಾರಿಗಳಿಗೆ ನಷ್ಟವಾಗಿತ್ತು. ಸಾಕಣೆ ವೆಚ್ಚ ವೃದ್ಧಿಸಿದ ಕಾರಣ ಸಾಕಾಣಿಕೆ ಕೇಂದ್ರಗಳು ಮುಚ್ಚಿದ್ದವು. ಇದ್ದ ಕೋಳಿಗಳನ್ನು ಧಪನ ಮಾಡಿದ್ದಲ್ಲದೆ, ಕೆಲವೆಡೆ ಸಿಕ್ಕ ದರಕ್ಕೆ ಮಾರಾಟ ಮಾಡಿದ್ದರು. ಇದರಿಂದ ಕೋಳಿ ಉತ್ಪಾದನೆ ಸ್ಥಗಿತಗೊಂಡಿತು. ಹೊರ ರಾಜ್ಯಗಳಿಂದಲೂ ಪೂರೈಕೆ ನಿಂತಿತು.

ಲಾಕ್‌ಡೌನ್‌ ಮಧ್ಯೆ ಮಾಂಸದಂಗಡಿಗಳು ತೆರೆಯಲು ಅವಕಾಶ ಸಿಕ್ಕ ಕಾರಣ ಕೋಳಿಗೆ ಮತ್ತೆ ಬೇಡಿಕೆ ಬಂತು. ಆದರೆ ಕೋಳಿ ಪೂರೈಕೆ ಸಾಕಷ್ಟಿಲ್ಲದ ಕಾರಣ ಧಾರಣೆ ಏರಿಕೆಯಾಗುತ್ತಿದೆ. ಸುಳ್ಯ ಮಾರುಕಟ್ಟೆಯಲ್ಲಿ 4 ದಿನಗಳ ಹಿಂದೆ ಒಂದು ಕೆ.ಜಿ. ಮಾಂಸಕ್ಕೆ 150 ರೂ. ಇತ್ತು. ಅದು ಈಗ 200ರಿಂದ 220 ರೂ.ಗೆ ಏರಿಕೆ ಕಂಡಿದೆ.

ಕೋಳಿ ಮರಿಗಳನ್ನು ಆಮದು ಮಾಡಿ, ಬೆಳೆಸಿ ಪೂರೈಸಲು ಕನಿಷ್ಠ 40 ದಿನ ಬೇಕು. ಇದಕ್ಕೂ ಲಾಕ್‌ಡೌನ್‌ ಮುಕ್ತಾಯ ಆಗಬೇಕು. ಇನ್ನೂ ಒಂದೂವರೆ ತಿಂಗಳು ಇದೇ ಧಾರಣೆ ಮುಂದುವರಿಯುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿ ಗಳು.

Comments are closed.