ಉಡುಪಿ ನಗರದಲ್ಲಿ ಗರಿಗರಿ ನೋಟಿನ ಕಂತೆಗಳನ್ನು ಹರಡಿದ ಯುವಕ, ನೋಟಿಗೆ ಮುಗಿಬಿದ್ದ ಜನತೆ !
ಉಡುಪಿ : ಇಲ್ಲಿನ ವಾದಿರಾಜ ರಸ್ತೆಯಲ್ಲಿ ಯುವಕನೊಬ್ಬ ಗರಿ ಗರಿ ನೋಟಿನ ಕಂತೆ ಹರಡಿ ಕೆಲಕಾಲ ಗದ್ದಲ, ಜನರಲ್ಲಿ ಸಡನ್ನಾಗಿ ಒಂದಷ್ಟು ಆಸೆ ಹುಟ್ಟಿಸಿದ ಘಟನೆ ಸೋಮವಾರ ನಡೆದಿದೆ.
ಸೋಮವಾರ ಯುವಕನೋರ್ವ ರಸ್ತೆಯಲ್ಲಿ ಎಲ್ಲೆಂದರಲ್ಲಿ ನೋಟುಗಳನ್ನ ಚೆಲ್ಲಿದ್ದಾನೆ. ಎರಡು ಸಾವಿರ, ಐನೂರು ಹಾಗೂ ಇನ್ನೂರರ ಮಿಣಮಿಣ ನೋಟುಗಳನ್ನ ನಡೆದುಕೊಂಡು ಹೋಗುತ್ತಿದ್ದಂತೆ ಚೆಲ್ಲುತ್ತಾ ಸಾಗಿದ್ದಾನೆ. ಇದನ್ನು ಕಂಡ ಜನ ಎಂದಿನಂತೆ ನೋಟು ಹೆಕ್ಕಲು ಮುಗಿಬಿದ್ದಿದ್ದಾರೆ.
ಆದರೆ ಜನರ ದುರಾದೃಷ್ಟ, ಆ ನೋಟುಗಳೆಲ್ಲವೂ ನಕಲಿ ನೋಟುಗಳಾಗಿದ್ದವು. ಹೆಕ್ಕಿ ನೋಡಿದಾಗ ಅವುಗಳೆಲ್ಲಾ ಜೆರಾಕ್ಸ್ ಮಾಡಲಾದ ನೋಟುಗಳು ಎಂದು ತಿಳಿದುಬಂದಿದೆ. ನೋಟು ನಕಲಿ ಅಂತ ವಿಷಯ ತಿಳಿದ ಜನ, ಯುವಕನನ್ನು ಹಿಡಿಯಲು ಯತ್ನಿಸಿದ್ದಾರೆ.
ಅದರೆ ಯುವಕ ಪರಾರಿಯಾಗಿದ್ದಾನೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮಧುಕರ್ ಮುದ್ರಾಡಿ ಎಲ್ಲಾ ನಕಲಿ ನೋಟುಗಳನ್ನ ಸಂಗ್ರಹಿಸಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನ ಬಳಿ ಎರಡಕ್ಕಿಂತಲೂ ಹೆಚ್ಚು ನೋಟಿನ ಬಂಡಲ್ ಇದ್ದವು ಎನ್ನಲಾಗಿದೆ.
ಕೋರೋನಾ ವೈರಸ್ ಅನ್ನು ನೋಟುಗಳ ಮೂಲಕ ಹರಡಲಾಗುತ್ತದೆ ಎಂಬ ಸುದ್ದಿ ಆಗೀಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವುದನ್ನು ಕಂಡ ಜನರು ಭಯಪಟ್ಟಿದ್ದಾರೆ.
ಆದರೆ ಒಮ್ಮೆಗೇ ನೋಟು ನೆಲಕ್ಕೆ ಚೆಲ್ಲುವಾಗ ನೋಟು ಆಯೋದಕ್ಕೆ ಯಾಕೆ ಜನ ಮುಗಿಬಿದ್ದು ಹೊರಟದ್ದು ?
ಅದೂ ಕೋರೋನಾ ಸಂತ್ರಸ್ತ ಸನ್ನಿವೇಶದಲ್ಲಿ ? ನೋಟುಗಳ ಮೂಲಕ ಜನರನ್ನ ಭಯ ಪಡಿಸುವ ಯತ್ನ ಇದಾಗಿರಬಹುದೆಂದು ಮಧುಕರ್ ಮುದ್ರಾಡಿ ಅವರ ಅಭಿಪ್ರಾಯ. ಹಾಗೆ ಅಂತ ನಾವು ಯಾಕೆ ಯೋಚಿಸಬೇಕು. ಇದು ಸೋಶಿಯಲ್ ಏಕ್ಸ್ ಪೇರಿಮೆಂಟ್ ಯಾಕೆ ಆಗಿರಬಾರದು ? ಜನ ಇನ್ನೂ ಜಾಗೃತ ಆಗಿಲ್ಲ ಅನ್ನುವುದು ಈ ಘಟನೆ ತೋರಿಸುತ್ತಾ? ಸಾವು ಬೆನ್ನುಬಿದ್ದು ಬರುತ್ತಿದ್ದರೂ ನಮ್ಮ ದುರಾಸೆಯನ್ನು ನಾವು ಬಿಡಲ್ವಾ ? ಉತ್ತರ ನಾವು ಹುಡುಕಬೇಕಿದೆ.