ರಿಯಲ್ ಸ್ಟಾರ್ ಉಪೇಂದ್ರ ಅವರ ಕೊರೋನಾ ನಿಯಂತ್ರಣದ ಐಡಿಯಾ ಕೇಳಿದ್ರೆ…!!

ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ವಿಭಿನ್ನವಾಗಿ ಯೋಚಿಸಿವುದರಲ್ಲಿ ಒಂದು ಕೈ ಎಲ್ಲರಿಗಿಂತಲೂ ಮೇಲು. ಅದನ್ನವರು ತಮ್ಮ ಚಿತ್ರಗಳಲ್ಲಿ ತಂದರು. ಚಿತ್ರಗಳು ಸೂಪರ್ ಡ್ಯೂಪರ್ ಹಿಟ್ ಆದವು. ಜನ ಹುಚ್ಚೆದ್ದು ಉಪೇಂದ್ರರನ್ನು ಅಭಿಮಾನದಿಂದ ನೋಡುವಂತಾಯಿತು.

ತಮ್ಮ ವಿಭಿನ್ನ ಶೈಲಿಯ ಆಲೋಚನೆಗಳನ್ನೆ ಪೋಣಿಸಿ ಪ್ರಜಾಕೀಯ ಪಕ್ಷದ ಸಿದ್ದಾಂತವೆಂಬ ಸ್ಕ್ರಿಪ್ಟ್ ಬರೆದರು. ದುರದೃಷ್ಟವಶಾತ್ ಅದು ಇವತ್ತಿಗೂ ಜನರಿಗೆ ಅರ್ಥ ಆಗಿಲ್ಲ. ಮುಂದಕ್ಕೆ ಅರ್ಥ ಆಗುವ ಸನ್ನಿವೇಶ ಕೂಡ ಕಾಣಿಸುತ್ತಿಲ್ಲ. ಇದೀಗ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಕುರಿತಂತೆ ಉಪೇಂದ್ರ ತಮ್ಮದೇ ಶೈಲಿಯ ಆಲೋಚನೆಯನ್ನು ಹೊರಬಿಟ್ಟಿದ್ದು ಈ ಕುರಿತಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೆಲ ಕೆಲಸಕ್ಕೆ ಬಾರದ ಸಲಹೆಗಳನ್ನು ನೀಡಿದ್ದಾರೆ. ಒಂದು ಕಾಲದ ಉಪೇಂದ್ರ ಇವರೇನಾ ಅನ್ನಿಸುತ್ತಿದೆ. ಅಥವಾ ಅವರ ಯೋಚನೆ ಯೋಜನೆಗಳು ಬಣ್ಣದ ಲೋಕಕ್ಕೆ ಮಾತ್ರ ಸೀಮಿತವಾ ಎಂದನ್ನಿಸಿಬಿಡುತ್ತಿದೆ.

ಮೊನ್ನೆ ಉಪೇಂದ್ರ ಪ್ರಸ್ತುತಪಡಿಸಿದ ಆಲೋಚನೆಗಳನ್ನೇ ನೋಡಿ. ಕೊರೋನಾ ತಡೆಗಾಗಿ ಸರ್ಕಾರ ಲಾಕ್ ಡೌನ್ ಹಾಕಿದ್ದರೂ ಸಹ ಜನ ಹಾಲು, ದಿನಸಿ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಹೊರಬರುವುದು ಮತ್ತು ಗುಂಪು ಸೇರುವುದು ನಿಂತಿಲ್ಲ. ಈ ಗುಂಪು ಸೇರುವುದನ್ನು ತಡೆಯಲು ಸೂಕ್ತ ಮಾರ್ಗ ಅನುಸರಿಸಬೇಕು ಎಂದ ಉಪೇಂದ್ರ ಎರಡು ಸಲಹೆಗಳನ್ನು ಕೊಟ್ಟಿದ್ದಾರೆ.

ಉಪೇಂದ್ರ ಅವರು ಈ ಕುರಿತು ಟ್ವೀಟ್ ಮಾಡಿದ್ದು ಅದನ್ನು ಸಿಎಂ ಅವರಿಗೆ ಟ್ಯಾಗ್ ಮಾಡಿದ್ದಾರೆ. ” ಮಾನ್ಯ ಮುಖ್ಯಮಂತ್ರಿಯವರಲ್ಲಿ ವಿನಂತಿ. ಎರಡರಲ್ಲಿ ಯಾವುದಾದರೂ ಒಂದನ್ನು ಮಾಡಿ ” ಎಂದು ಎರಡು ಸಲಹೆಗಳನ್ನು ನೀಡಿದ್ದಾರೆ.

ಉಪೇಂದ್ರ ನೀಡಿರುವ ಆ ಎರಡು ಸಲಹೆಗಳು ಹೀಗಿವೆ.

1. ಶೇಕಡ ನೂರಕ್ಕೆ ನೂರು ಲಾಕ್‍ಡೌನ್ : ಸಂಪೂರ್ಣ ಸರ್ಕಾರಿ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದ ಯೋಜನೆ ಬಳಸಿಕೊಂಡು ಅಗತ್ಯ ವಸ್ತುಗಳನ್ನು ಮನೆಮನೆಗೆ ತಲುಪಿಸಿ ಹಾಲು, ತರಕಾರಿ, ಧಾನ್ಯಗಳನ್ನು ಒಂದು ಜಾಗದಲ್ಲಿ ಕೊಳ್ಳಲು ಬಿಟ್ಟರೆ ಜನ ಸೇರುತ್ತಾರೆ. ಬೇಕರಿ, ದಿನಸಿ ಮತ್ತು ಅಗತ್ಯ ವಸ್ತುಗಳಿಗಾಗಿ ಸಂತೆ, ಅಂಗಡಿ ತೆರೆದರೆ ಅಲ್ಲೂ ಜನ ಸೇರುತ್ತಾರೆ. ಆದುದರಿಂದ ಮನೆಮನೆಗೆ ಹಂಚಬೇಕು.ಈ ಸಲಹೆಯಲ್ಲಿ ಅಂಥದ್ದು ಏನೂ ವಿಶೇಷವಿಲ್ಲ ಇದು ಗೊತ್ತಿರುವಂತದ್ದೇ. ಇದನ್ನು ದೇಶವ್ಯಾಪಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಇದನ್ನು ಕೆಲವೇ ಕೆಲವು ಸೀಮಿತ ಪ್ರದೇಶಗಳಲ್ಲಿ ಮಾತ್ರ ಮಾಡಬಹುದು. ಯಾಕೆಂದರೆ ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲಗಳು ಇದಕ್ಕೆ ಬೇಕಾಗುತ್ತದೆ. ಹಳ್ಳಿಗಳಲ್ಲಿ ಅನುಷ್ಠಾನ ಕಷ್ಟ.

2. ಜನರಿಗೆ ಜವಾಬ್ದಾರಿ ಕೊಟ್ಟು ಸಂಪೂರ್ಣವಾಗಿ ಲಾಕ್‍ಡೌನ್ ತೆರೆಯಿರಿ : ಅಂದರೆ ಅವರವರೇ ಜವಾಬ್ದಾರಿ ತೆಗೆದುಕೊಂಡು ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅವರವರ ವ್ಯವಹಾರಗಳನ್ನು ಮುಂದುವರಿಸುವುದು. ಜನರನ್ನು ಜನರು ಎಷ್ಟೇ ಮೂರ್ಖರು ಅಂದುಕೊಂಡರು (ಹೀಗೆ ನಾಯಕರಯ ಮಾಡಿಬಿಟ್ಟಿದ್ದಾರೆ) ಅವರವರ ಪ್ರಾಣಕ್ಕೆ ಅವರ ಮಕ್ಕಳ ಪ್ರಾಣಕ್ಕೆ ಬೆಲೆ ಕೊಟ್ಟೇ ಕೊಡುತ್ತಾರೆ ಎಂಬ ನಂಬಿಕೆಯಿಂದ ಹೇಳುತ್ತಿದ್ದೇಲಾಕ್‍ಡೌನ್ ಮಾಡಿ ಜನರನ್ನು ಹಾಲು, ರೇಷನ್ ಖರೀದಿಸುವುದಕ್ಕೆ ಬಿಟ್ಟು ಜನ ಗುಂಪು ಸೇರಿದಾಗ ಜನರನ್ನು ಬೈಯ್ಯುವುದು ಎಷ್ಟು ಸರಿ?

ಇಷ್ಟು ಮಾತ್ರವಲ್ಲದೆ “ಇಷ್ಟೆಲ್ಲಾ ಲಾಕ್‍ಡೌನ್ ಮಾಡಿಯೇ ನಮ್ಮ ದಡ್ಡ ಜನರು ಹೀಗೆ. ಇನ್ನು ಲಾಕ್‍ಡೌನ್ ತೆಗೆದ್ರೆ ರೋಡ್ ರೋಡಲ್ಲಿ ಹೆಣ ಬೀಳುತ್ತೆ ಅಂತ ಹೇಳುವವರಿಗೆ (ಹೆದರುವವರಿಗೆ) ಒಂದು ಕಿವಿ ಮಾತು. ಹೀಗೆ ಲಾಕ್‍ಡೌನ್ ಮುಂದುವರಿಸಿದ್ರೂ ಅದೇ ಪರಿಸ್ಥಿತಿ ಬರಬಹುದು ಯೋಚನೆ ಮಾಡಿ. ಮಲಗಿದ್ರೆ ಸಾವು | ಕೂತಿದ್ರೆ – ರೋಗ | ನಡೀತಿದ್ರೆ ಜೀವನ” ಎಂದು ಹೇಳಿದ್ದಾರೆ.

ಏನ್ ಉಪೇಂದ್ರ ಅವರು ಆಲೋಚಿಸುವಂತೆ ಲಾಕ್ ಡೌನ್ ಅನ್ನು ಕೂತು ತಿನ್ನುವಂತೆ ಜೀವನಪೂರ್ತಿ ಮಾಡುತ್ತಾರಾ? ಅದು ಸೀಮಿತ ಅವಧಿಗೆ ಅಲ್ಲವಾ? ಮಲಗಿದ್ದರೆ ಸಾವು ಕೂತಿದ್ದರೆ ರೋಗ….ಹೇಳಿಕೆ ಇಲ್ಲಿ ಯಾವ ರೀತಿ ಸರಿ ಹೊಂದುತ್ತದೆ ?

ಮತ್ತೆ, ಜನರೇ ಜವಾಬ್ದಾರಿ ತೆಗೆದುಕೊಂಡು ಸಾಮಾಜಿಕ ಅಂತರ ಪಾಲಿಸಲು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಪ್ರಜೆಗಳೆಲ್ಲ ಸರಿಯಾಗಿ ಕಾನೂನು ಪಾಲನೆ ಮಾಡುತ್ತಿದ್ದರೆ ಈ ಆಡಳಿತ ವ್ಯವಸ್ಥೆ, ಈ ಪೋಲಿಸು ಎಲ್ಲವೂ ಏನಕ್ಕೆ ಬೇಕಾಗಿತ್ತು. ನಮ್ಮವರೆಲ್ಲ ಜೀವ ಹೋಗುತ್ತೆ ಅನ್ನುವ ಸಂದರ್ಭದಲ್ಲಿ ಕೂಡ ದೆಹಲಿಯಲ್ಲಿ ಗುಂಪು ಸೇರಿ ಧರ್ಮ ಸಭೆ ನಡೆಸುವವರು. ಮಾಂಸವನ್ನು ಮೊದಲ ಸಲ ತಿನ್ನುತ್ತಿದ್ದೇವೇನೋ ಎಂಬಂತೆ, ಇನ್ನು ಮುಂದೆ ಮತ್ಯಾವತ್ತೂ ಸಿಗಲ್ಲವೇನೋ ಎಂಬಂತೆ ಸಿಟಿ ಬಸ್ಸಿನಲ್ಲಿ ಸೀಟಿಗೆ ಉರುದಾಟ ಮಾಡುವವರು. ನಮ್ಮಲ್ಲಿ ಉಪೇಂದ್ರ ತರಹ ಬಹುಸಂಖ್ಯೆಯಲ್ಲಿ ಬುದ್ದಿವಂತರಿದ್ದಾರೆ. ನಮ್ಮಲ್ಲಿ ದಡ್ಡರು ಇಲ್ಲದಿರಬಹುದು. ಆದರೆ ಅತಿಬುದ್ದಿವಂತರು ಅತ್ಯಧಿಕ ಸಂಖ್ಯೆಯಲ್ಲಿ ಇದ್ದಾರಲ್ಲ ?!

ಉಪೇಂದ್ರ ಅವರ ಎರಡನೆಯ ಸಲಹೆಯನ್ನು ಪಾಲಿಸಿದರೆ, ಇನ್ನೊಂದು ತಿಂಗಳಿನಲ್ಲಿ ಭಾರತದಲ್ಲಿ ಆಡಳಿತ ನಡೆಸುವುದಕ್ಕೂ ಜನವಿಲ್ಲ, ಪ್ರಜೆಗಳೂ ಇಲ್ಲ; ಮತ್ತು ಮುಖ್ಯವಾಗಿ ಉಪೇಂದ್ರ ಅವರ ಕ್ರಿಯೇಟಿವ್ ಐಡಿಯಾಗಳನ್ನು ಕೇಳಲು ಇಲ್ಲಿ ಉಳಿದಿರುವುದಿಲ್ಲ !

ಉಪೇಂದ್ರ ಅವರೇ, ನೀವು ರಿಯಲ್ ಸ್ಟಾರ್. ಸ್ವಲ್ಪ ರಿಯಲಿಸ್ಟಿಕ್ ಆಗಿ ಯೋಚಿಸಿ.


Leave A Reply

Your email address will not be published.