ಮೊದಲ ಹೆಜ್ಚೆಗಳ ತಪ್ಪುಗಳ ಮುಂದಕ್ಕೆ ಇದೆ ಅವಕಾಶಗಳ ಮಹಲು
ಹತ್ತನೆ ತರಗತಿ ಮುಗಿದು ಕಾಲೇಜು ಮಟ್ಟಿಲು ಹತ್ತುತ್ತಿದ್ದಂತೆ ನನ್ನಲ್ಲಿ ಕಾಡುತ್ತಿದ್ದ ಭಯವೊಂದೆ ಚಿಕ್ಕವಯಸ್ಸಿನಿಂದ ಒಂದು ಬಾರಿಯೂ ಎಲ್ಲರ ಮುಂದೆ ವೇದಿಕೆ ಹತ್ತಿದವಳಲ್ಲ. ಯಾವುದೇ ವಿಷಯದ ಕುರಿತು ಚರ್ಚೆ ಮಾಡಿದವಳಲ್ಲ.
ಯಾರ ಜತೆಯಲ್ಲೂ ಹೆಚ್ಚು ಮಾತನಾಡಿದವಳಲ್ಲ. ಆದರೆ ಇದು ಕಾಲೇಜು, ಮೊದಲ ದಿನವೇ ನಮ್ಮ ಪರಿಚಯನ್ನು ಎಲ್ಲರಿಗೂ ಹೇಳಲು ಇರುತ್ತೆ ಮಾತ್ರವಲ್ಲ, ಅದು ಇದು ಎಂಬಂತೆ ಸೆಮಿನಾರ್ಗಳನ್ನು ಕೊಟ್ಟರೆ ಆ ವಿಷಯದ ಬಗ್ಗೆ ಮಾತನಾಡಬೇಕಾಗುತ್ತದೆ ಎಂದು ನನ್ನ ಗೆಳತಿ ಆಗಾಗ ಹೇಳುತ್ತಿದ್ದಳು.
ಅವಳು ಅಂದು ಹೇಳಿದ ಮಾತು ಇವತ್ತು ತಲೆನೋವು ಮತ್ತಷ್ಟು ಹೆಚ್ಚು ಮಾಡುತ್ತಿತ್ತು.
ಹಾಗೋ ಹೀಗೋ ಅನ್ನುವ ಹಾಗೆ ತರಗತಿಗೆ ತಲುಪುತ್ತಿದ್ದಂತೆ ಆದಾಗಲೇ ಕ್ಲಾಸ್
ಆರಂಭಕೊಂಡು ಎಲ್ಲರೂ ಅವರವರ ಪರಿಚಯವನ್ನು ಹೇಳುತ್ತಿದ್ದರು.
ಇದನ್ನು ನೋಡಿದ ನನಗೂ ಕೈಕಾಲು ನಡುಗಲಾರಂಭಿಸಿತು. ಹೊರಗೆ
ನಿಂತುಕೊಂಡು ತರಗತಿಯಲ್ಲಿ ಆಗುವ ಚಟುವಟಿಕೆಯನ್ನು ಗಮನಿಸುತ್ತಿದ್ದಂತೆ
“ವೆಲ್ಕಮ್” ಎಂದು ಸ್ವರ ಕೇಳಿದಾಗ ತಲೆ ಎತ್ತಿ ನೋಡಿದೆ. ನಗು ನಗುತ್ತ ಮೇಡಂ
ನುಡಿದಾಗ ನಾನು ವಾಸ್ತವಕ್ಕೆ ಬಂದು ಕ್ಲಾಸ್ ರೂಂ ಒಳಗಡೆ ನಡೆದೆ.
ಅಲ್ಲಿರುವವರು ಎಲ್ಲರೂ ಅಪರಿಚಿತರು. ಎಷ್ಟೇ ಇಣುಕಿ ನೋಡಿದರೂ ನನಗೆ ನನ್ನ ಹಳೆಯ ಸ್ನೇಹಿತರ ಸುಕಾಣಲಿಲ್ಲ. ಕುಳಿತುಕೊಳ್ಳಲು ಜಾಗ ಹುಡುಕುತ್ತಿದ್ದಂತೆ ಅದು ಯಾರೋ ಸ್ವಲ್ಪ ಸರಿದು “ಬಾ ಇಲ್ಲಿ ಕುಳಿತು ಕೊ” ಎಂದು ಹೇಳಿದಾಗ. ಅವಳ ಮುಖ ನೋಡಿದೆ.
ಮಂದಹಾಸ ಬೀರುತ್ತ ನನ್ನ ಬಗ್ಗೆ ವಿಚಾರಿಸತೊಡಗಿದಳು. ಅದು ಯಾವದೂ ನನ್ನ ಗಮನಕ್ಕೆಬರುತ್ತಿರಲಿಲ್ಲ. ನನ್ನ ಸರದಿ ಯಾವಾಗ ಬರುತ್ತದೋ, ಇನ್ನು ಇವರ ಮುಂದೆ ಏನೆಂದು ಮಾತನಾಡಲಿ ಎಂಬೆಲ್ಲಾ ಪ್ರಶ್ನೆಗಳು ಮನದಲ್ಲಿ ಮೂಡುತ್ತಿತ್ತು. ಅಷ್ಟೊತ್ತಿಗೆ ಮೇಡಂ ನನ್ನ ಹೆಸರು ಕರೆದರು. “ಅಯ್ಯೋ ನನ್ನ ಸರದಿ ಬಂದೇ ಬಿಟ್ಟಿತಾ!” ಎನ್ನುತ್ತ ಮುಂದೆ ನಡೆದೆ. ಎದೆ ಬಡಿತ ಜಾಸ್ತಿಯಾಗಿ ತುಟಿ ಒಣಗಿ ಹೋಯಿತು, ಮುಂದೇನು ಮಾತನಾಡುವ
ಅನ್ನುವಷ್ಟರಲ್ಲಿ ಕಣ್ಣು ಮಂಜಾಗಲಾರಂಭಿಸಿ ನಿದ್ದೆ ಬರುತ್ತಿದೆಯಾ? ತಲೆ ತಿರುಗುತ್ತಿದೆಯಾ? ಏನಾಗುತ್ತಿದೆ ಎಂಬುದು ತಿಳಿದುಕೊಳ್ಳುವಷ್ಟರಲ್ಲಿ ನೆಲಕ್ಕೆ ಒರಗಿ ಹೋದೆ.
ಸ್ವಲ್ಪ ಹೊತ್ತಲ್ಲಿ ಕಣ್ಣು ಬಿಟ್ಟು ನೋಡಿದರೆ ಸುತ್ತಲೂ ಜನ ನಿಂತಿದ್ದರು. ಆ ಸಮಯದಲ್ಲಿ ಮೇಡಂ ಏನಾಯಿತಮ್ಮ? ನಿನಗೆ ಹುಶಾರಿಲ್ಲವಾ ಅಥವಾ ನೀನು ಮೊದಲ ಸಲವಾ ಎಲ್ಲರ ಮುಂದೆ ಮಾತನಾಡುವುದು ಎಂದು ಕೇಳಿದಾಗ ಹುಶಾರಿದ್ದಿನಿ ಅಂದೆ. ಹಾಗಾದ್ರೆ ಸ್ಟೇಜ್ ಫಿಯರ್ ನಾ? ಅಂದಾಗ ನಾನು “ಹೂಂ” ಎನ್ನುತ್ತ
ತಲೆ ತಗ್ಗಿಸಿದೆ.
ಇದನ್ನು ಕೇಳಿದೆ ತಡ ಅಲ್ಲೇ ಇದ್ದ ಉಳಿದ ಸಹಪಾಠಿಗಳು ದೊಡ್ಡದಾಗಿ ನಗಲು ಪ್ರಾರಂಭಿಸಿದರು.
ಅಲ್ಲಿಂದ ಮತ್ತೆ ನಾನು ಮೊದಲ ಹೆಜ್ಜೆಯನ್ನು ವೇದಿಕೆಗೆ ಇಡಲಾರಂಬಿಸಿದೆ. ಕ್ರಮೇಣವಾಗಿ ಭಯದ ಗೆಳತನವೂ ದೂರವಾಗಿ ನನ್ನಲ್ಲಿಯೇ ನಾನು ಹೊಸತನವನ್ನು ಕಂಡುಕೊಳ್ಳಲು ಶುರು ಮಾಡಿದೆ. ಮಗು ಹೇಗೆ ಮೊದಲ ಬಾರಿ ಅಂಬೆಕಾಲನ್ನು ಇಡುವಾಗ ಎಡವಿ ಬಿದ್ದು ತನ್ನ ಹಠವನ್ನು ಬಿಡದೆ ಬಿದ್ದಲ್ಲಿಂದ ಎದ್ದು ಮತ್ತೆ ನಡೆಯಲು ಪ್ರಾರಂಭಿಸುತ್ತದೆಯೋ, ಅದೇ ರೀತಿ ನನ್ನಲ್ಲಿರುವ ಭಯವನ್ನು ಹೋಗಲಾಡಿಸಿ ಒಂದು ಸುಂದರವಾದ ವೇದಿಕೆಯಲ್ಲಿ ಮಾತನಾಡಿದೆ.
ಇಂದಿಗೂ ಆ ಮೊದಲ ಹೆಜ್ಜೆಯನ್ನು ನೆನೆದುಕೊಂಡರೆ ತಡೆಯಲಾರದಷ್ಟು ನಗು ಬರುತ್ತೆ. ಏನೇ ಆದರೂ ಮೊದಲ ತಪ್ಪು ಹೆಜ್ಜೆಯಲ್ಲಿಯೇ ಇರುತ್ತದೆ ನಮ್ಮ ಮುಂದಿನ ಆತ್ಮವಿಶ್ವಾಸದ ಮಹಲು. ತಪ್ಪುಗಳನ್ನು ತಿದ್ದಕೊಂಡರೆ ಅವಕಾಶದ ಬಾಗಿಲು ತೆರೆಯುತ್ತೆ ಎಂಬ ಸತ್ಯದ ಅರಿವು ನನಗಾಗಿದೆ.
ಚೈತ್ರಲಕ್ಷ್ಮಿ, ಬಾಯಾರು,
ಪ್ರಥಮ ಎಂ.ಸಿಜೆ,
ವಿವೇಕಾನಂದ ಕಾಲೇಜು, ಪುತ್ತೂರು.