ಲಾಕ್ಡೌನ್ ಬೋರಿಂಗ್ | ಮಂಗಳೂರು ಸೂಟ್ ಕೇಸ್ ನಲ್ಲಿ ರೂಂಗೆ ಗೆಳೆಯನ ಹೊತ್ತೊಯ್ದ ವಿದ್ಯಾರ್ಥಿ
ಮಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಯುವಕನೋರ್ವ ತನ್ನ ಸ್ನೇಹಿತನನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ಸಿನಿಮೀಯ ಶೈಲಿಯಲ್ಲಿ ವಸತಿ ಸಮುಚ್ಚಯಕ್ಕೆ ಕರೆದೊಯ್ಯುತ್ತಿರುವಾಗ ಸಿಕ್ಕಿ ಬಿದ್ದ ಘಟನೆ ಭಾನುವಾರ ನಡೆದಿದೆ.
ಮಂಗಳೂರು ನಗರದ ಆರ್ಯಸಮಾಜ ರಸ್ತೆಯಲ್ಲಿರುವ ವಸತಿ ಸಮುಚ್ಚಯದಲ್ಲಿ ವಿದ್ಯಾರ್ಥಿಯೊಬ್ಬ ಬಾಡಿಗೆಗೆ ವಾಸವಾಗಿದ್ದ. ವಸತಿ ಸಮುಚ್ಚಯ ಅಸೋಸಿಯೇಷನ್ ಲಾಕ್ ಡೌನ್ ಹಿನ್ನಲೆಯಲ್ಲಿ ವಾಸ್ತವ್ಯ ಇರುವವರು ಹೊರತುಪಡಿಸಿ ಇತರರಿಗೆ ಪ್ರವೇಶ ನಿರಾಕರಣೆ ಮಾಡಿತ್ತು.
ವಿದ್ಯಾರ್ಥಿಯೊಬ್ಬ ‘ತಾನು ಒಂಟಿಯಾಗಿದ್ದು, ತನ್ನ ಗೆಳೆಯನನ್ನು ರೂಮಿಗೆ ಕರೆದುಕೊಂಡು ಬರುತ್ತೇನೆ’ ಎಂದು ಹೇಳುತ್ತಿದ್ದ.
ಇದಕ್ಕೆ ವಸತಿ ಸಮುಚ್ಚಯ ಅಸೋಸಿಯೇಷನ್ ಅವರು ಅನುಮತಿ ನೀಡಿರಲಿಲ್ಲ. ಆತನಿಗೆ ಅಲ್ಲಿ ಒಬ್ಬನೇ ಇರಲು ತುಂಬಾ ಬೋರ್ ಆಗಿತ್ತು. ಆದರೆ ಏನೂ ಮಾಡುವಂತಿರಲಿಲ್ಲ. ಆದರೂ ಹಠ ಬಿಡದ ಯುವಕ ಭಾನುವಾರ ಬೆಳಗ್ಗೆ ತನ್ನ ಗೆಳೆಯನನ್ನು ಸೂಟ್ ಕೇಸಿನಲ್ಲಿ ತುಂಬಿಸಿ ರೂಮಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾನೆ.
ಈ ವೇಳೆ ಸೂಟ್ ಕೇಸ್ ನಲ್ಲಿ ಸಂಚಲನ ಕಂಡು ಬಂದಿದ್ದು, ಇದು ವಸತಿ ಸಮುಚ್ಚಯದಲ್ಲಿರುವ ಇತರರ ಗಮನಕ್ಕೆ ಬಂದಿದೆ. ಕೂಡಲೇ ಎಲ್ಲರೂ ಸೇರಿ ಸೂಟ್ ಕೇಸ್ ತೆರೆಯುವಂತೆ ಒತ್ತಾಯಿಸಿದ್ದಾರೆ.
ಇಕ್ಕಟ್ಟಿಗೆ ಸಿಲುಕಿದ ಯುವಕ ಸೂಟ್ ಕೇಸ್ ತೆರೆದಾಗ ಸತ್ಯಾಂಶ ಬಹಿರಂಗವಾಗಿದೆ. ವಿಷಯವನ್ನು ಕದ್ರಿ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇಬ್ಬರನ್ನು ಕದ್ರಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಮುಚ್ಚಳಿಕೆ ಕರೆಸಿಕೊಂಡು ಬಿಟ್ಟು ಕಳುಹಿಸಿದ್ದಾರೆ.